Top

ನನ್ನ ರಕ್ತದ ಕಣಕಣದಲ್ಲೂ ರಾಯಣ್ಣ ಬಗ್ಗೆ ಗೌರವ, ಭಕ್ತಿ ಇದೆ - ಸಚಿವ ಕೆ.ಎಸ್​ ಈಶ್ವರಪ್ಪ

ಮಹಾರಾಷ್ಟ್ರ-ಕನ್ನಡಿಗರು, ಮರಾಠಿ- ಕನ್ನಡ, ಜಾತಿ ಪ್ರಾಂತ್ಯ, ಭಾಷೆ ವಿಚಾರಗಳಿಗೆ ಜಾಗ ಇರಬಾರದು.

ನನ್ನ ರಕ್ತದ ಕಣಕಣದಲ್ಲೂ ರಾಯಣ್ಣ ಬಗ್ಗೆ ಗೌರವ, ಭಕ್ತಿ ಇದೆ - ಸಚಿವ ಕೆ.ಎಸ್​ ಈಶ್ವರಪ್ಪ
X

ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸಂಘರ್ಷ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್​ ಈಶ್ವರಪ್ಪ ಅವರು ಪ್ರತಿಕ್ರಿಯೆ ನೀಡಿದ್ದು, ಸಂಗೊಳ್ಳಿ ರಾಯಣ್ಣ ಮತ್ತು ರಾಣಿ ಚೆನ್ನಮ್ಮ ಅಮ್ಮ ಮಗ ಥರ. ಚೆನ್ನಮ್ಮಾಗೆ ರಾಯಣ್ಣ ಅಮ್ಮ ಅಂತಿದರು. ಇಬ್ಬರ ಮಧ್ಯೆ ಜಾತಿ ವಿಚಾರ ಬರಲಿಲ್ಲ, ಶಿವಾಜಿ, ಅಹಲ್ಯ ಬಾಯಿ ಹೋಳ್ಕರ್, ರಾಯಣ್ಣ, ಚೆನ್ನಮ್ಮ ಇವರಿಗೆಲ್ಲ ಜಾತಿ ಪ್ರಶ್ನೆ ಇರಲಿಲ್ಲ, ಪ್ರಾಂತೀಯತೆ ಇರಲಿಲ್ಲ ಎಂದು ಅವರು ಹೇಳಿದರು.

ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ನಾಳೆ ಬೆಳಗಾವಿಯಲ್ಲಿ ಸಭೆ ಇದೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟವರ ಜೊತೆ ಸಭೆ ನಡೆಸುತ್ತೇನೆ. ಪರಿಸ್ಥಿತಿ ಅವಲೋಕಿಸಿ ಮುಂದಿನ ತೀರ್ಮಾನ ಮಾಡಲಾಗುವುದು ಎಂದರು.

ಇನ್ನು ಹಿಂದೆ ಪೀರನವಾಡಿ ಗ್ರಾಮ ಪಂಚಾಯ್ತಿಯವರು ಪ್ರತಿಮೆ ಇಡಬೇಕೆಂದು ಒಂದು ನಿರ್ಣಯ ಮಾಡಿ ಸರ್ಕಾರಕ್ಕೆ ಕಳಿಸಿದರು. ಸಿದ್ದರಾಮಯ್ಯ ಸರ್ಕಾರಕ್ಕೆ ಈ ನಿರ್ಣಯ ಕಳಿಸಿದರು. ಇದಕ್ಕೆ ಇನ್ನೂ ತನಕ ಅನುಮತಿ ಸಿಕ್ಕಿಲ್ಲ. ರಾಯಣ್ಣ ಪ್ರತಿಮೆ ಇಡೋ ವಿಚಾರದಲ್ಲಿ ನಮಗೆಲ್ಲ ಆಸಕ್ತಿ ಇದೆ ಎಂದು ಹೇಳಿದರು.

ಆಗಸ್ಟ್ 14ರ ರಾತ್ರಿ ಕೆಲವು ಸ್ವಾತಂತ್ರ್ಯ ಪ್ರೇಮಿಗಳು ಆಕ್ರೋಶದಿಂದ ಪ್ರತಿಮೆ ಇಟ್ಟರು ನಂತರ ಪೊಲೀಸರು ಅದನ್ನು ತೆಗೆದರು. ಮತ್ತೆ ಅಲ್ಲಿ ಸ್ವಾತಂತ್ರ್ಯ ಪ್ರೇಮಿಗಳು ನಿನ್ನೆ ಪ್ರತಿಭಟನೆ ಮಾಡಿದ್ದಾರೆ. ಸಿಎಂ ಸಹ ಶಾಂತಿಯುತವಾಗಿ ಪ್ರತಿಭಟನೆ ಮಾಡಿ ಅಂತ ಹೇಳಿದರು. ಸಿಎಂ ಈ ಬಗ್ಗೆ ಕಾಗಿನೆಲೆ ಶ್ರೀಗಳ ಜತೆಗೂ ಚರ್ಚೆ ಮಾಡಿದ್ದಾರೆ. ನಾನು ಸಹ ಬೆಳಗಾವಿಗೆ ಹೋಗುತ್ತೇನೆ. ಮಹಾರಾಷ್ಟ್ರ-ಕನ್ನಡಿಗರು, ಮರಾಠಿ- ಕನ್ನಡ, ಜಾತಿ ಪ್ರಾಂತ್ಯ, ಭಾಷೆ ವಿಚಾರಗಳಿಗೆ ಜಾಗ ಇರಬಾರದು. ಸಂಘರ್ಷ ದೂರ ಮಾಡಿ ರಾಷ್ಟ್ರಭಕ್ತಿಗೆ ಅವಕಾಶ ಕೊಡುವ ಕೆಲಸ ಅಲ್ಲಿ ಆಗಬೇಕು. ರಾಯಣ್ಣ ಎಲ್ಲರಿಗೂ ಪ್ರೇರಣೆ. ನನ್ನ ರಕ್ತದ ಕಣಕಣದಲ್ಲೂ ರಾಯಣ್ಣ ಬಗ್ಗೆ ಗೌರವ, ಭಕ್ತಿ ಇದೆ. ಎಲ್ಲ ಸ್ವಾತಂತ್ರ್ಯ ಹೋರಾಟಗಾರರ ಮೇಲೂ ನನಗೆ ಇಷ್ಟೇ ಗೌರವ, ಭಕ್ತಿ ಇದೆ ಎಂದು ಸಚಿವ ಕೆ.ಎಸ್​ ಈಶ್ವರಪ್ಪ ಅವರು ಮಾತನಾಡಿದ್ದಾರೆ.

Next Story

RELATED STORIES