Top

ಶಾಲೆಗಳ ಆರಂಭ ಮಾಡುವ ಧಾವಂತ, ಅವಸರ ನಮಗಿಲ್ಲ - ಸಚಿವ ಎಸ್​ ಸುರೇಶ್​ ಕುಮಾರ್

ಅ.15 ರಿಂದ ಶಾಲೆಗಳನ್ನು ಆರಂಭಿಸಬಹುದು. ಆದರೆ, ಶಾಲೆಗಳನ್ನು ಆರಂಭಿಸೋ ನಿರ್ಧಾರ ಆಯಾ ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟಿದ್ದು ಎಂದು ಕೇಂದ್ರದ ಮಾರ್ಗಸೂಚಿ ಹೇಳಿದೆ.

ಶಾಲೆಗಳ ಆರಂಭ ಮಾಡುವ ಧಾವಂತ, ಅವಸರ ನಮಗಿಲ್ಲ - ಸಚಿವ ಎಸ್​ ಸುರೇಶ್​ ಕುಮಾರ್
X

ಬೆಂಗಳೂರು: ಶಾಲೆಗಳ ಆರಂಭ ಮಾಡುವ ಧಾವಂತ, ಅವಸರ ನಮಗಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣ ಸಚಿವ ಎಸ್​ ಸುರೇಶ್ ಕುಮಾರ್ ಅವರು ಗುರುವಾರ ಹೇಳಿದ್ದಾರೆ.

ನಗರದಲ್ಲಿಂದು ಟಿವಿ5 ಕನ್ನಡ ಜೊತೆ ಮಾತನಾಡಿದ ಅವರು, ಮಕ್ಕಳ ಹಿತದೃಷ್ಟಿಯಿಂದ ಪಾಲಕರ ಆತಂಕ ಎಲ್ಲದರ ದೃಷ್ಟಿಯಿಂದ ನಾವು ಶಾಲೆಗಳ ಆರಂಭ ಸದ್ಯಕ್ಕಂತೂ ಮಾಡಲ್ಲ ಎಂದಿದ್ದಾರೆ.

ಇನ್ನು ಕೇಂದ್ರದ ಹೊಸ ಮಾರ್ಗಸೂಚಿ ನಮಗೆ ಬಂದಿದೆ. ಅಕ್ಟೋಬರ್ 15 ರಿಂದ ಶಾಲೆಗಳನ್ನು ಆರಂಭಿಸಬಹುದು. ಆದರೆ, ಶಾಲೆಗಳನ್ನು ಆರಂಭಿಸೋ ನಿರ್ಧಾರ ಆಯಾ ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟಿದ್ದು ಎಂದು ಕೇಂದ್ರದ ಮಾರ್ಗಸೂಚಿ ಹೇಳಿದೆ ಎಂದು ತಿಳಿಸಿದರು.

ಸದ್ಯ ನಮಗಂತೂ ಶಾಲೆಗಳನ್ನು ಆರಂಭ ಮಾಡುವ ಉದ್ದೇಶ ಇಲ್ಲ. ನಾನು ಹೋದಲ್ಲೆಲ್ಲಾ ಪಾಲಕರು, ಮಕ್ಕಳ ಜೊತೆ ಚರ್ಚೆ ಮಾಡುತ್ತಲೇ ಬಂದಿರುವೆ. ಶಿಕ್ಷಕರ ಜೊತೆಗೂ ಚರ್ಚೆ ನಡೆಸಿರುವೆ. ಇಂದು ಕೂಡ ಸರ್ಕಾರಿ ಶಿಕ್ಷಕರು ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಜೊತೆ ಚರ್ಚೆ ಮಾಡಲಿದ್ದೇನೆ ಎಂದರು.

ಇದು ನಿಜಕ್ಕೂ ನಮಗೆ ಸವಾಲೇ. ಯಾರೇ ನನ್ನ ಜಾಗದಲ್ಲಿ ಇದ್ದಿದ್ದರೂ ಈ ಸವಾಲು ಎದುರಿಸಬೇಕಿತ್ತು. ಕೊರೊನಾ ಯಾವಾಗ ಕಡಿಮೆ ಆಗುತ್ತೋ ಗೊತ್ತಿಲ್ಲ. ಈಗಾಗಲೇ ಆನ್​ಲೈನ್ ಶಿಕ್ಷಣ, ಚಂದನ ವಾಹಿನಿ ಮೂಲಕ ಕ್ಲಾಸ್​​ಗಳನ್ನು ಮಾಡಲಾಗುತ್ತಿದೆ. ವಿದ್ಯಾಗಮ ಕಾರ್ಯಕ್ರಮದಡಿ ಶಿಕ್ಷಕರು ಮಕ್ಕಳಿದ್ದಲ್ಲಿಗೇ ಹೋಗಿ ಪಾಠ ಮಾಡುತ್ತಿದ್ದಾರೆ. ನಮಗೆ ಮಕ್ಕಳ ಹಿತದೃಷ್ಟಿಯೇ ಮುಖ್ಯ, ಸರ್ಕಾರಕ್ಕಾಗಲಿ, ಇಲಾಖೆಗಾಗಲಿ ನಮಗೆ ಇದರಲ್ಲಿ ಯಾವುದೇ ಪ್ರತಿಷ್ಟೆ ಇಲ್ಲ ಎಂದು ಸಚಿವ ಎಸ್​ ಸುರೇಶ್​ ಕುಮಾರ್ ಅವರು ಹೇಳಿದರು.

Next Story

RELATED STORIES