Top

ಇದು ಗೊತ್ತು ಗುರಿಯಿಲ್ಲದ ಬಜೆಟ್ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಅನೈತಿಕ ಸರ್ಕಾರದ ಬಜೆಟ್ ಕೇಳಬಾರದೆಂದು ವಾಕ್​ಔಟ್ ಮಾಡಿದ್ದೇವೆ

ಇದು ಗೊತ್ತು ಗುರಿಯಿಲ್ಲದ ಬಜೆಟ್ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
X

ಬೆಂಗಳೂರು: 2021/22 ಸಾಲಿನ ಮುಂಗಡಪತ್ರ ಮಂಡಿಸಿದ್ದಾರೆ. ನಾವು ಬಜೆಟ್ ಮಂಡನೆಗೆ ವಿರೋಧಿಸಿದ್ದೆವು. ಬಜೆಟ್ ವೇಳೆ ಬಾಯ್ಕಾಟ್ ಮಾಡಿದ್ದೆವು. ಯಾಕಂದ್ರೆ ಇದು ಅನೈತಿಕ ಸರ್ಕಾರ. ಅನೈತಿಕ ಸರ್ಕಾರದ ಬಜೆಟ್ ಕೇಳಬಾರದೆಂದು ವಾಕ್​ಔಟ್ ಮಾಡಿದ್ದೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ.

ಸಿಎಂ ಬಿ.ಎಸ್​ ಯಡಿಯೂರಪ್ಪ ಅವರ ಬಜೆಟ್​ ಮಂಡನೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಜೆಟ್ ಅಭಿವೃದ್ಧಿಗೆ ಮಾರಕವಾದುದ್ದು. ಇದು ಗೊತ್ತು ಗುರಿಯಿಲ್ಲದ ಬಜೆಟ್. ಬಜೆಟ್ ಯಾವಾಗಲೂ ಪಾರದರ್ಶಕವಾಗಿರಬೇಕು. ಹಿಂದಿನ ಖರ್ಚು, ಮುಂದಿನದರ ಬಗ್ಗೆ ತಿಳಿಸಬೇಕು. ಪ್ರತಿ ಇಲಾಖೆಯ ಖರ್ಚು, ವೆಚ್ಚ ವಿವರಿಸಬೇಕು. ಯಾವ ಇಲಾಖೆಗೆ ಎಷ್ಟು ಖರ್ಚು ಮಾಡಲಾಗಿದೆ. ಈ ವರ್ಷ ಏನು ಖರ್ಚು ಮಾಡುತ್ತಿದ್ದಾರೆ. ಇದರ ಬಗ್ಗೆ ವಿವರಿಸಬೇಕು ಆದರೆ ಬಜೆಟ್​ನಲ್ಲಿ ಏನೂ ವಿವರಿಸಿಲ್ಲ, ಬಿಚ್ಚಿಡುವುದಕ್ಕಿಂತ ಮುಚ್ಚಿಟ್ಟಿದ್ದೇ ಹೆಚ್ಚು ಎಂದು ರಾಜ್ಯ ಸರ್ಕಾರದ ಬಜೆಟ್​ಗೆ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರತಿಯೊಂದು ಪೈಸೆಗೂ ಲೆಕ್ಕವಿರಬೇಕು. ಇಲ್ಲಿ ಪಾರದರ್ಶಕತೆ ಉಳಿಸಿಕೊಂಡಿಲ್ಲ, ಕಳೆದ ವರ್ಷ 142 ಕೋಟಿ 35 ಲಕ್ಷ ಸರ್ ಪ್ಲಸ್ ಬಜೆಟ್ ಅಂದಿದ್ದರು. ಆಯವ್ಯಯ ಅಂದಾಜು ಬಜೆಟ್ ಮಾಡಿದ್ದರು. ಪರಿಷ್ಕೃತ ಅಂದಾಜು ಪ್ರಕಾರ ರೆವಿನ್ಯೂ 19485 ಕೋಟಿ 48 ಡಿಫಿಶಿಟ್ ತೋರಿಸಿದ್ದಾರೆ. 15,133.60 ಕೋಟಿ ಮೈನಸ್ ಇದೆ. ಈಗ ಸಾಲತಂದು ಮೈನಸ್ ರೆವಿನ್ಯೂ ತುಂಬಬೇಕು. ಇವತ್ತು ಸಾಲ ಮಾಡಿ ರೆವಿನ್ಯೂಗೆ ಕೊಡಬೇಕಿದೆ. ನಮ್ಮ ಕಾಲದಲ್ಲಿ ರೆವಿನ್ಯೂ ಸರ್ಪ್ಲಸ್ ಇರ್ತಿತ್ತು. ನಾವು ರೆವಿನ್ಯೂ ಉಳಿಸಿಕೊಡೇ ಮಂಡಿಸುತ್ತಿದ್ದೆವು. 19 ಸಾವಿರ ಕೋಟಿ ಕಡಿಮೆಯೇ, ನಮ್ಮ ಅವಧಿಯಲ್ಲಿ 144 ಕೋಟಿ ರೆವಿನ್ಯೂ ಸರ್ಪ್ಲೆಸ್ ಇರ್ತಿತ್ತು. ಈಗ 19 ಸಾವಿರ ಕೋಟಿ ಅಂದರೆ ಕಡಿಮೆಯೇ, ಈಗ 71,323 ಕೋಟಿ ಸಾಲ ತೆಗೆದುಕೊಳ್ಳಲು ಹೊರಟಿದ್ದಾರೆ. ಮುಂದಿನ ವರ್ಷ ಇನ್ನಷ್ಟು ತೆಗೆದುಕೊಳ್ತಾರೆ. ರಾಜ್ಯದ ಒಟ್ಟು ಸಾಲ 4,57,889 ಕೋಟಿ ಉಳಿಯಲಿದೆ. ನಾನು ಮೊದಲು 1.36 ಸಾವಿರ ಕೋಟಿ ಬಜೆಟ್ ಮಂಡಿಸಿದ್ದೆ. 2 ಲಕ್ಷದ 42 ಸಾವಿರ ಕೋಟಿ ಕೊನೆ ಬಜೆಟ್ ಮಂಡಿಸಿದ್ದೆ ಎಂದು ಸಿದ್ದರಾಮಯ್ಯ ಅವರು ಅಂಕಿ-ಅಂಶಗಳ ಸಮೇತ ವಿವರಣೆ ನೀಡಿದ್ದಾರೆ.

ಕೇಂದ್ರ ಸರ್ಕಾರ ಸಾಲ ತೆಗೆದುಕೊಳ್ಳೋಕೆ ಹೇಳಿದೆ ಅದಕ್ಕೆ ಸಾಲ ಮಾಡೋಕೆ ಹೊರಟಿದ್ದಾರೆ. ಸಾಲ ಸಿಗುತ್ತೆ ಅಂತ ಸಾಲ ತೆಗೆದುಕೊಳ್ಳುವುದಲ್ಲ, ತೀರಿಸೋಕೆ ಸಾಮರ್ಥ್ಯವಿರುವಷ್ಟು ಸಾಲ ಮಾಡಬೇಕು. ರಾಜ್ಯ ದಿವಾಳಿ ಆಗೋಕೆ ಇದೇ ಸಾಕ್ಷಿ ಎಂದರು.

ಸದ್ಯ ನಮ್ಮ ಅಗತ್ಯಕ್ಕಿಂತ ಖರ್ಚಿನ ಪ್ರಮಾಣ ಹೆಚ್ಚಾಗಿದೆ ಇದನ್ನ ಯಡಿಯೂರಪ್ಪ ಒಳ್ಳೇ ಬಜೆಟ್ ಅಂತಾನಾ(?) ಯಾವ ದೃಷ್ಟಿಕೋನದಲ್ಲಿ ಇದು ಒಳ್ಳೆಯ ಬಜೆಟ್. ಈ ವರ್ಷದ ಬಜೆಟ್ ದಿವಾಳಿ ಬಜೆಟ್. ಹೋಗ್ಲಿ ಅಭಿವೃದ್ಧಿ ಕೆಲಸಕ್ಕೆ ದುಡ್ಡು ಕೊಟ್ಟಿದ್ದಾರಾ(?) 31 ಸಾವಿರ ಕೋಟಿ ಇಟ್ಟಿದ್ದಾರೆ. ಕಳೆದ ವರ್ಷಕ್ಕಿಂತ ತುಂಬಾ ಕಡಿಮೆಯಾಯ್ತು ಎಂದು ಸಿದ್ದರಾಮಯ್ಯ ಅವರು ಬಜೆಟ್​ ಬಗ್ಗೆ ಟೀಕಿಸಿದ್ದಾರೆ.

ಆಡಳಿತ ಸುಧಾರಣೆಗೆ 40 ಸಾವಿರ ಕೋಟಿ ಇಟ್ಟಿದ್ದಾರೆ. ಇಷ್ಟು ದೊಡ್ಡ ಮೊತ್ತ ಅದೇಗೆ ಇಟ್ಟಿದ್ದಾರೋ ಗೊತ್ತಿಲ್ಲ, ಇಷ್ಟು ಹಣ ಇದ್ಯೋ ಇಲ್ವೋ ಅರ್ಥವಾಗುತ್ತಿಲ್ಲ, ಪರಿಶಿಷ್ಟರ ಎಸ್​ಸಿಎಸ್​ಪಿ/ಟಿಎಸ್​ಪಿ ಹಣ ಹೆಚ್ಚಿಡಬೇಕು. ಜನಸಂಖ್ಯೆಗನುಗುಣವಾಗಿ ಇದಕ್ಕೆ ಹಣ ಮೀಸಲಿಡಬೇಕು. ಇವರು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡ್ತಾರೆ. ಬಜೆಟ್ ಹೆಚ್ಚಾದಂತೆ ಈ ಹಣವೂ ಹೆಚ್ಚಿಡಬೇಕು. ಆದರೆ, ಈ ಎಸ್​ಸಿಎಸ್​ಪಿ/ಟಿಎಸ್​ಪಿ ಹಣ 2,505 ಕೋಟಿ ಇಟ್ಟಿದ್ದಾರೆ. ಈ ವರ್ಷ 20 ಸಾವಿರ ಕೋಟಿಯೂ ಖರ್ಚು ಮಾಡಲ್ಲ, ನಾನು 33 ಸಾವಿರ ಕೋಟಿ ಬಜೆಟ್​ನಲ್ಲಿಟ್ಟಿದೆ ಎಂದು ಹೇಳಿದರು.

ರಾಜ್ಯದಲ್ಲಿ 16 ಅಭಿವೃದ್ಧಿ ನಿಗಮಗಳಿವೆ. ಉಪ್ಪಾರ, ಅಂಬೇಡ್ಕರ್, ಕಾಡುಗೊಲ್ಲ, ವಾಲ್ಮೀಕಿ, ಆದಿಜಾಂಬವ, ಬೋವಿ, ತಾಂಡ, ಸಫಾಯಿ ಕರ್ಮಚಾರಿ, ದೇವರಾಜ ಅರಸು, ಮಡಿವಾಳ, ಆರ್ಯವೈಶ್ಯ, ವಿಶ್ವಕರ್ಮ, ಮರಾಠ, ನಿಜಶರಣ, ಸವಿತಾ ಸಮಾಜ ನಿಗಮಗಳಿವೆ. ಇವರೆಲ್ಲರೂ ತಳ ಸಮುದಾಯಗಳು ಬಡತನದಲ್ಲೇ ಬಳಲುತ್ತಿರುವವರು. ಇವರಿಗೆ ಒಟ್ಟು 500 ಕೋಟಿ ಹಣ ಇಡಲಾಗಿದೆ. ತಲಾ ನಿಗಮಕ್ಕೆ 30 ಕೋಟಿ ಸಿಗಲಿದೆ. ಲಿಂಗಾಯತ, ಒಕ್ಕಲಿಗ ನಿಗಮಕ್ಕೆ ತಲಾ 500 ಕೋಟಿ ಇಡಲಾಗಿದೆ. ನಾವು ಅವರಿಗೆ ಕೊಡಬೇಡಿ ಎಂದು ಹೇಳಲ್ಲ, ಉಳಿದ ಸಣ್ಣ ನಿಗಮಕ್ಕೂ ಹಣ ಕೊಡಬೇಕಲ್ವಾ(?) ತುಳಿತಕ್ಕೊಳಗಾದವರಿಗೆ ಅನ್ಯಾಯ ಮಾಡಿದ್ದೀರಲ್ಲ, ನಿಮಗೆ ಸಾಮಾಜಿಕ ನ್ಯಾಯ ಎಲ್ಲಿದೆ(?) ಸಾಮಾಜಿಕ ನ್ಯಾಯದ ವಿರೋಧಿಗಳಲ್ವೇ ಇವರು ಎಂದು ಸಿದ್ದರಾಮಯ್ಯ ಅವರು ಸಿಎಂ ಬಿಎಸ್​ವೈ ಸರ್ಕಾರದ ವಿರುದದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Next Story

RELATED STORIES