ಇಂದು ಸಹ ಮುಂದುವರಿದ ಸಾರಿಗೆ ನೌಕರರ ಮುಷ್ಕರ, ರಸ್ತೆಗಳಿದ ಕೆಲವೇ ಬಸ್ಗಳು
ಸಾರಿಗೆ ಅಧಿಕಾರಿಗಳು ಖಾಸಗಿ ಚಾಲಕರನ್ನು ಕರೆತಂದು ಬಸ್ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ

ಬೆಂಗಳೂರು: ಇಂದು ಸಹ ಸಾರಿಗೆ ನೌಕರರ ಮುಷ್ಕರವೂ ಮುಂದುವರಿದಿದ್ದು, ಬಸ್ಗಳ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರದ ಮಧ್ಯೆಯೂ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿಯ ಕೆಲ ಬಸ್ಗಳು ರಸ್ತೆಗೆ ಸಂಚಾರ ಆರಂಭಿಸಿವೆ.
ಸದ್ಯದ ಮಾಹಿತಿಯ ಪ್ರಕಾರ, ಬೆಂಗಳೂರು ವಿಭಾಗದಲ್ಲಿ ಕೆಎಸ್ಆರ್ಟಿಸಿಯ 93 ಹಾಗೂ ಬಿಎಂಟಿಸಿಯ 55 ಬಸ್ಗಳು ಸಂಚಾರ ಪ್ರಾರಂಭಿಸಿವೆ. ಮಂಗಳೂರು 87, ಶಿವಮೊಗ್ಗದಲ್ಲಿ 3, ದಾವಣಗೆರೆ 2 ಮತ್ತು ಚಿತ್ರದುರ್ಗ ವಿಭಾಗದಿಂದ 1 ಬಸ್ ಕಾರ್ಯಾಚರಣೆ ಶುರು ಮಾಡಿವೆ. ಬೆಳಿಗ್ಗೆ 8ರ ವೇಳೆಗೆ ಉಳಿದ ವಿಭಾಗಗಳಲ್ಲಿ ಯಾವುದೇ ಬಸ್ ಕಾರ್ಯಾಚರಣೆ ಆಗಿಲ್ಲ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.
ಮುಷ್ಕರ ವಿರೋಧಿಸುತ್ತಿರುವ ಸಿಬ್ಬಂದಿ ಕೆಲಸಕ್ಕೆ ಹಾಜರಾಗಿದ್ದಾರೆ. ಅವರ ಜತೆಗೆ ನಿರ್ವಾಹಕ (ಕಂಡಕ್ಟರ್) ಮತ್ತು ಚಾಲಕ (ಡ್ರೈವರ್) ಹುದ್ದೆಯಿಂದ ಸಂಚಾರ ನಿಯಂತ್ರಕ(ಟಿ.ಸಿ) ಹುದ್ದೆಗೆ ಬಡ್ತಿ ಹೊಂದಿದವರನ್ನು ಕಾರ್ಯಾಚರಣೆಗೆ ಇಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಸಾರಿಗೆ ಅಧಿಕಾರಿಗಳು ಖಾಸಗಿ ಚಾಲಕರನ್ನು ಕರೆತಂದು ಬಸ್ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.
ರಾಜ್ಯ ಸರ್ಕಾರ ನೌಕರರ ಜೊತೆ ಮಾತುಕತೆ ನಡೆಸಿ ಅಥವಾ ಬೇಡಿಕೆ ಈಡೇರಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳುವ ಬದಲು ಈ ರೀತಿ ವಾಮಮಾರ್ಗ ಹಿಡಿದಿದೆ. ಅಕಸ್ಮಾತ್ ಖಾಸಗಿ ಚಾಲಕರಿಂದ ಅಪಘಾತ ಸಂಭವಿಸಿ ಸಾವು-ನೋವುಗಳು ಉಂಟಾದರೆ ಅದಕ್ಕೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಪ್ರತಿಭಟನಾನಿರತ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.