ಇದುವರೆಗೆ ಕರ್ನಾಟಕದಲ್ಲಿ 30 ಸಾವಿರ ಮಂದಿಗೆ ಲಸಿಕೆ, ಯಾರಿಗೂ ಅಡ್ಡ ಪರಿಣಾಮ ಆಗಿಲ್ಲ- ಸಚಿವ ಕೆ. ಸುಧಾಕರ್
ಕೊರೊನಾ ಲಸಿಕೆ ತೆಗೆದುಕೊಂಡ ಬಳಿಕ ಯಾವುದೇ ಅಡ್ಡ ಪರಿಣಾಮಗಳು ಕಂಡುಬಂದಿಲ್ಲ

ಬೆಳಗಾವಿ: ಜಿಲ್ಲೆಯಲ್ಲಿ ವ್ಯಾಕ್ಸಿನ್ ಬಂದಿದೆ ಲಸಿಕೆ ನೀಡುವ ಕಾರ್ಯಕ್ರಮ ನಡ್ತೀದೆ. ಈ ಹಿನ್ನೆಲೆಯಲ್ಲಿ ಇಲಾಖೆಗೆ ಸಂಬಂಧಿಸಿದ ಸಭೆ ನಡೆಸುತ್ತಿರುವೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಅವರು ಸೋಮವಾರ ಹೇಳಿದ್ದಾರೆ.
ಬಳ್ಳಾರಿ ಸಂಡೂರಿನಲ್ಲಿ ವ್ಯಾಕ್ಸಿನ್ ತೆಗೆದುಕೊಂಡ ಬಳಿಕ ವ್ಯಾಕ್ಸಿನ್ ನಿಂದ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂಬ ವದಂತಿ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಮಾಧ್ಯಮ ಸ್ನೇಹಿತರಿಗೆ ಮನವಿ ಮಾಡ್ತೀನಿ. ಕೊರೊನಾ ವ್ಯಾಕ್ಸಿನ್ನಿಂದ ಸಾವನ್ನಪ್ಪಿದ್ದಾರೆ ಅಂತ ಎಲ್ಲೂ ಹೇಳಬೇಡಿ. ಯಾವ ವ್ಯಕ್ತಿ ಮರಣ ಹೊಂದಿದ್ದಾರೋ ಅವರು ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರಿಗೆ ಡಯಾಬಿಟಿಸ್ ಇತ್ತು, ಎದೆನೋವು ಕಾಣಿಸಿಕೊಂಡಿದೆ. ಹೃದಯಾಘಾತ ಆಗಿದೆ ಎಂದಿದ್ದಾರೆ.
ಇನ್ನು ಕೊರೊನಾ ಲಸಿಕೆ ತೆಗೆದುಕೊಂಡ ಬಳಿಕ ಯಾವುದೇ ಅಡ್ಡ ಪರಿಣಾಮಗಳು ಕಂಡುಬಂದಿಲ್ಲ. ಮರಣೋತ್ತರ ಪರೀಕ್ಷೆಗೆ ವರದಿ ಕಳುಹಿಸಲಾಗಿದೆ. ವರದಿ ಬಂದಿಲ್ಲ, ವರದಿ ಬಂದ ಮೇಲೇ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಲಸಿಕೆ ಅಡ್ಡಪರಿಣಾಮದಿಂದ ಆಗಿದೆ ಅಂತ ನನಗೆ ಅನಿಸಲ್ಲ. ಇದುವರೆಗೆ ಕರ್ನಾಟಕದಲ್ಲಿ 30 ಸಾವಿರ ಜನರು ಲಸಿಕೆ ತೆಗೆದುಕೊಂಡಿದ್ದಾರೆ. ಯಾರಿಗೂ ಅಡ್ಡ ಪರಿಣಾಮ ಆಗಿಲ್ಲ ಎಂದರು.
ಸದ್ಯ ಒಂದನೇ ಹಂತದಲ್ಲಿ ಯಶಸ್ವಿಯಾದ ಬಳಿಕ ಎರಡನೇಯ ಹಂತಕ್ಕೆ ತಲುಪುತ್ತೇವೆ. ಲಸಿಕೆ ನೀಡಲು ಗುರಿಯನ್ನು ಕೊಟ್ಟಿದ್ದೇವೆ. ರಾಜ್ಯದಲ್ಲಿ ದಿನಕ್ಕೆ ಸುಮಾರು 80 ಸಾವಿರ ಲಸಿಕೆ ನೀಡುವ ಗುರಿ ಕೊಟ್ಟಿದ್ದೇವೆ ಎಂದು ಹೇಳಿದರು.
ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಾರಾಯಣ ಗೌಡ ಯಾರು(?) ಅವರು ಯಾರು ಅಂತಾನೇ ಗೊತ್ತಿಲ್ಲ. ನಿಪ್ಪಾಣಿಯಲ್ಲಿ ಸರ್ಕಾರಿ ಕಾರ್ಯಕ್ರಮ ಮುಗಿದ ಬಳಿಕ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇವೆ. ಜೋಲ್ಲೆಯವರ ಕಾಲೇಜಿನಲ್ಲಿ ಕೊರೊನಾ ವಾರಿಯರ್ಸ್ಗಳಿಗೆ ಸನ್ಮಾನ ಮಾಡಿದ್ದೇವೆ ಎಂದು ಹೇಳಿದ್ದಾರೆ.