ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಎಸ್ಐಟಿಗೆ ಕೊಟ್ಟಿರುವ ಬಗ್ಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ
ತನಿಖೆ ಆದ್ಮೇಲೆ ಎಲ್ಲಾ ಗೊತ್ತಾಗುತ್ತೆ, ಈಗ ಊಹಾಪೋಹ ಅಷ್ಟೇ. ಪೊಲೀಸರು ವರದಿ ಕೊಟ್ಟ ಮೇಲೆ ಗೊತ್ತಾಗುತ್ತದೆ.

ಬೆಳಗಾವಿ: ಎಸ್ಐಟಿ ಪ್ರಕರಣಕ್ಕೆ ತನಿಖೆ ಕೊಟ್ಟಿದ್ದು ಸದ್ಯದ ಮಟ್ಟಿಗೆ ಸ್ವಾಗತ ಮಾಡುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಶುಕ್ರವಾರ ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಹಂತಕ್ಕೆ ತನಿಖೆ ಮಾಡ್ತಾರೆ ಏನ್ ಮಾಡ್ತಾರೆ ಕಾದು ನೋಡಬೇಕು. ನಾವು ಸದ್ಯಕ್ಕೆ ಎಸ್ಐಟಿ ತನಿಖೆ ಕೊಟ್ಟಿದ್ದು ಸ್ವಾಗತ ಮಾಡುತ್ತೇವೆ ಎಂದಿದ್ದಾರೆ.
ಇನ್ನ ಹೇಗೆ ಇನ್ವೆಸ್ಟಿಗೇಷನ್ ಮಾಡ್ತಾರೆ ಅದರ ಮೇಲೆ ಅವಲಂಬಿತವಾಗಿದೆ. ಕೇಸ್ ದಾಖಲಾಗಿಲ್ಲ, ವಿಚಾರಣೆ ಮಾಡುವ ಅಧಿಕಾರ ಮಾತ್ರ ಕೊಟ್ಟಿದ್ದಾರೆ. ನಿನ್ನೆ ಗೃಹ ಸಚಿವರು ಎಫ್ಐಆರ್ ಮಾಡುತ್ತೇವೆ ಅಂತ ಹೇಳಿದ್ದಾರೆ. ಇಲ್ಲ ಅಂದ್ರೆ ರಮೇಶ್ ಅವರೇ ಖುದ್ದಾಗಿ ದೂರು ಕೊಡಬೇಕು ಎಂದು ಹೇಳಿದರು.
ಇನ್ನು ಎರಡು ಆಪ್ಷನ್ ಇದೆ, ಒಂದು ರಮೇಶ್ ಜಾರಕಿಹೊಳಿ ದೂರು ಕೊಡಬೇಕು. ಇಲ್ಲ ಎಸ್ಐಟಿ ತನಿಖಾ ವರದಿ ಬಂದ್ಮೇಲೆ ಎಫ್ಐಆರ್ ಬಗ್ಗೆ ಸರ್ಕಾರ ನಿರ್ಧಾರ ಮಾಡಬೇಕು. ಈ ಎರಡು ಆಪ್ಷನ್ ಇದೆ. ಪ್ರಕರಣ ಬಗ್ಗೆ ಸಮಗ್ರವಾದ ಸಂಪೂರ್ಣ ತನಿಖೆ ಆಗಬೇಕು ಎಂದರು.
ರಮೇಶ್ ಜಾರಕಿಹೊಳಿ ವಿರುದ್ಧ ರಾಜಕೀಯ ಷಡ್ಯಂತ್ರ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ತನಿಖೆ ಆದ್ಮೇಲೆ ಎಲ್ಲಾ ಗೊತ್ತಾಗುತ್ತೆ, ಈಗ ಊಹಾಪೋಹ ಅಷ್ಟೇ. ಪೊಲೀಸರು ವರದಿ ಕೊಟ್ಟ ಮೇಲೆ ಗೊತ್ತಾಗುತ್ತದೆ. ಪ್ರಕರಣದಿಂದ ಜಾರಕಿಹೊಳಿ ಕುಟುಂಬಕ್ಕೆ ಮುಜುಗರ ಆಗಿರಬಹುದು. ನಮ್ಮ ಬೆಂಬಲಿಗರು, ನಮ್ಮ ಶಕ್ತಿ ಅದೇನು ಎಫೆಕ್ಟ್ ಆಗಲ್ಲ. ಆ ವಿಷಯ ಬೇರೆ ನಮ್ಮ ಬೆಂಬಲಿಗರು, ವೋಟ್ಬ್ಯಾಂಕ್ಗೆ ಡಿಸ್ಟರ್ಬ್ ಆಗಲ್ಲ. ಇದೆಲ್ಲದಕ್ಕೂ ಪರಿಹಾರ ಅಂದ್ರೆ ಪೊಲೀಸ್ ತನಿಖಾ ವರದಿ. ರಮೇಶ್ ಜಾರಕಿಹೊಳಿ ಜೊತೆ ನಾನು ಏನೂ ಮಾತನಾಡಿಲ್ಲ ಎಂದು ಹೇಳಿದರು.
ಪ್ರಕರಣದ ಹಿಂದೆ 2+4+3 ಇದ್ದಾರೆಂಬ ಬಾಲಚಂದ್ರ ಜಾರಕಿಹೊಳಿ ಹೇಳಿಕೆ ವಿಚಾರ ಬಗ್ಗೆ ಮಾತನಾಡಿದ ಅವರು, ಅವರು ಪ್ರಾಥಮಿಕ ಹಂತದಲ್ಲಿ ತನಿಖೆ ಮಾಡಿದಾಗ ಅದನ್ನ ಹೇಳಿದ್ದಾರೆ. ಇನ್ನೂ ಎಸ್ಐಟಿಯವರು ಬೆನ್ನು ಹತ್ತಿ 2, 4, 3 ಯಾರೆಂದು ಕಂಡುಹಿಡಿಯಬೇಕು. ಮಹಾನಾಯಕ ಯಾರಂತ ಗೊತ್ತಿಲ್ಲ, ನಿಮಗೆ ಗೊತ್ತಿರಬೇಕು. ತನಿಖೆ ಆದ್ಮೇಲೆ ಇನ್ನೊಂದು ತಿಂಗಳಲ್ಲಿ ಬಹಿರಂಗ ಆಗುತ್ತೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಎಸ್ಐಟಿ ತನಿಖೆ ತಿಪ್ಪೇಸಾರೋ ಕೆಲಸ ಎಂಬ ಹೆಚ್ಡಿಕೆ ಹೇಳಿಕೆ ಬಗ್ಗೆಯೂ ಮಾತನಾಡಿದ ಅವರು, ಹೆಚ್.ಡಿ. ಕುಮಾರಸ್ವಾಮಿ ಹೇಳೋದರಲ್ಲಿ ನಿಜಾಂಶವಿದೆ. ಗೃಹಸಚಿವರು ನೋಡಿ ಎಫ್ಐಆರ್ ಮಾಡ್ತೀವಿ ಅಂದಿದ್ದಾರೆ. ಎಸ್ಐಟಿಯವರು ವರದಿ ಕೊಡ್ತಾರೆ ಅಷ್ಟೇ, FIR ಆದ್ಮೇಲೆನೆ ಶಿಕ್ಷೆಯಾಗೋದು. 70 ವರ್ಷಗಳಲ್ಲಿ ಸಾಕಷ್ಟು ಇಂತಹ ವರದಿಗಳು ಆಗಿವೆ. ಶಿಕ್ಷೆ ಆಗಬೇಕಾದರೆ ಎಫ್ಐಆರ್ ಆಗಬೇಕು ಎಂದು ಮಾತನಾಡಿದರು.
ಓರಿಯನ್ ಮಾಲ್, ಯಶವಂತಪುರ ಅಪಾರ್ಟ್ಮೆಂಟ್ನಲ್ಲಿ ಷಡ್ಯಂತ್ರ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಬಹಳ ಜನ ರಾಜಕಾರಣಿಗಳಿದ್ದಾರೆ, ಯಾರನ್ನು ಅಂತ ಹಿಡಿಯವರು ನೀವು. ಅಲ್ಲಿ ಎರಡೂ ಕಡೆ ಎಲ್ಲಾ ಪಕ್ಷದವರೂ ಇದ್ದಾರೆ. ಪೊಲೀಸರು ಹೋದಾಗಲೇ ಗೊತ್ತಾಗೋದು. ಇಂತವರೇ ಅಂತ ತೋರಿಸೋಕೆ ಹೋಗಿ ಮಿಸ್ಫೈರ್ ಆದರೆ ಏನ್ ಮಾಡೋದು. ಎಲ್ಲಿ ನಡೆದಿದೆ ಏನು ನಡೆದಿದೆ ಪೊಲೀಸರು ತನಿಖೆ ಮಾಡಬಹುದು. ರಮೇಶ್ ಜಾರಕಿಹೊಳಿ ಕರ್ನಾಟಕದಲ್ಲಿ ಎಲ್ಲಿ ಬೇಕಾದರೂ ಪ್ರಕರಣ ದಾಖಲಿಸಬಹುದು ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ನುಡಿದರು.