Top

ಕೊನೆ ಕ್ಷಣದಲ್ಲಿ ಒಳ್ಳೆ ಹೆಸರು ಮಾಡಿಕೊಂಡು ಹೋಗಲಿ ಅಂತ ಸುಮ್ಮನಾಗಿದ್ದೆ - ಮಾಜಿ ಸಿಎಂ ಹೆಚ್ಡಿಕೆ

ದೇವರ ದಯೆ ಈಗ ನಾವೂ ಬದುಕಿದ್ದೀವಿ. ಕೊರೊನಾ ಕಡಿಮೆ ಆಗಲಿ ಅನ್ನೋದು ನನ್ನ ಅಭಿಪ್ರಾಯ

ಕೊನೆ ಕ್ಷಣದಲ್ಲಿ ಒಳ್ಳೆ ಹೆಸರು ಮಾಡಿಕೊಂಡು ಹೋಗಲಿ ಅಂತ ಸುಮ್ಮನಾಗಿದ್ದೆ - ಮಾಜಿ ಸಿಎಂ ಹೆಚ್ಡಿಕೆ
X

ಬೆಂಗಳೂರು: ಹಿಂದೆ ಹಲವಾರು ಕಾರ್ಯಕ್ರಮಗಳಿಗೆ ಹಣ ಹಂಚಿಕೆ ಮಾಡಲಾಗಿತ್ತು. ಆದರೆ, ಆ ಕಾರ್ಯಕ್ರಮಗಳು ನಿಂತಿವೆ. ಅನುದಾನ ಕೂಡ ಬಂದಿಲ್ಲ, ರೈತರ ಸಾಲಮನ್ನಾಗೆ ಎರಡು ಬಜೆಟ್​ನಲ್ಲಿ 25,000 ಕೋಟಿ ರೂ. ಅಲೊಕೇಟ್ ಮಾಡಲಾಗಿತ್ತು. ನೆರೆ ಹಾವಳಿಗೆ ಆ ಹಣ ಉಪಯೋಗ ಮಾಡ್ತೀವಿ ಅಂತ ಬಿಜೆಪಿ ಸರ್ಕಾರ ಹೇಳಿತ್ತು. ಆ ಹಣ ಈಗಲೂ ಸರಿಯಾಗಿ ಬಳಿಕೆ ಆಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರು ಸೋಮವಾರ ಹೇಳಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾಳೆ ಈ ಬಗ್ಗೆ ನಿಯಮ 69ರ ಅಡಿ ಚರ್ಚೆ ಮಾಡಲು ಅವಕಾಶ ನೀಡುವುದಾಗಿ ಸ್ಪೀಕರ್ ಹೇಳಿದ್ದಾರೆ. ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಹಣ ಈಗಾಗಲೇ ನೀಡಿರುವುದಾಗಿ ಸಿಎಂ ಉತ್ತರ ನೀಡಿದ್ದಾರೆ. ಆದರೆ, ಕಂದಾಯ ಸಚಿವರು ಮನೆ ಕಟ್ಟಿಕೊಳ್ಳುವವರು ಮೊದಲನೇ ಕಂತಿಗೆ ಹಣ ತೃಪ್ತಿ ಆಗಿದೆ. ಉಳಿದ ಹಣ ಬೇಡ ಅಂತಿದ್ದಾರೆ ಅಂತ ಕಂದಾಯ ಸಚಿವರು ಹೇಳಿದ್ದಾರೆ. ಜನ ಗುಡಿಸಲಿಲ್ಲಿರೋದು ನೀವೆ ಮಾಧ್ಯಮದವರೇ ತೋರಿಸುತ್ತೀರಿ. ಈ ಬಗ್ಗೆ ನಾಳೆ ಚರ್ಚೆ ಮಾಡೋರಿದ್ದೇವೆ ಎಂದಿದ್ದಾರೆ.

ದ್ವೇಷ ರಹಿತ ರಾಜಕಾರಣ ಮಾಡ್ತೀವಿ ಎಂದು ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ ಸಂದರ್ಭದಲ್ಲಿ ಹೇಳಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಎಲ್ಲರನೂ ಯಾವಾಗ ಇವರು ಸಮಚಿತ್ತದಿಂದ ನೋಡಿದ್ದಾರೆ(?) ಸ್ಟೇಜ್ ಮೇಲೆ ಹೇಳ್ತಾರೆ ಅಷ್ಟೇ. ಈ ಬಜೆಟ್ ಲದ್ದಿ ಪುಸ್ತಕಾನೋ ,ಬಜೆಟ್ ಬುಕ್ಕೋ(?) ಇಂತಹ ಪರಿಸ್ಥಿತಿಯಲ್ಲಿ ಬಜೆಟ್ ಇದೆ. ಸ್ಪಷ್ಟತೆ ಇಲ್ಲದ ಬಜೆಟ್. ಮಹಿಳೆಯರಿಗೆ ಭರಪೂರ ಕೊಡುಗೆ ಅಂತಾರೆ. ಏನ್ ಭರಪೂರ ಕೊಟ್ಟಿದ್ದಾರೆ(?) ಎಂದು ರಾಜ್ಯ ಸರ್ಕಾರದ ಬಜೆಟ್​ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಸ್ರೇಲ್ ಮಾದರಿ ಕೃಷಿ ಉತ್ತೇಜನಕ್ಕೆ 300 ಕೋಟಿ ರೂ. ಇಟ್ಟಿದ್ದೆ. ಆ ದುಡ್ಡನ್ನೂ ಇವರು ಡೈವರ್ಟ್ ಮಾಡಿಕೊಂಡರು. ಎಲ್ಲಿ ಹೋಯ್ತು ಈ ದುಡ್ಡು(?) ಇಲಾಖಾವಾರು ಇಲ್ಲವೇ ಇಲ್ಲ, ವಲಯವಾರು ಬಜೆಟ್ ಮಾಡಿದ್ದಾರೆ. ಬಂಡವಾಳ ಹಾಕೋ ಯೋಗ್ಯತೇನೇ ಇಲ್ಲ, ಮಹಿಳೆಯರಿಗೆ ಎಲ್ಲಿ ಉದ್ಯೋಗ ಕೊಡ್ತೀರಿ(?) ಇರೋ ಉದ್ಯೋಗ ಕಿತ್ ಕೊಂಡಿದ್ದೀರಿ(?) ಎಂದು ಬಿಎಸ್​ವೈ ಸರ್ಕಾರದ ವಿರುದ್ಧ ಕಿಡಿಕಾರಿದರು.

ನಾನು ಇಷ್ಟು ದಿನ ಮಾತಾಡಿರಲಿಲ್ಲ, ಯಡಿಯೂರಪ್ಪ ಶ್ರಮ ಪಟ್ಟು ಮುಖ್ಯಮಂತ್ರಿ ಆದರು. ಈಗ ಪಾಪ ಆ ಶ್ರಮ ಈಗ ನೀವು ಒಂದ್ ವಾರದಿಂದ ತೋರಿಸ್ತಿದ್ದೀರಲ್ಲ ಅಲ್ಲಿಗೆ ಬಂದು ತಲುಪಿದೆ. ಮುಖ್ಯಮಂತ್ರಿಗಳು ಈಗ ಏನ್ ಮಾಡ್ತಾರೆ(?) ನಮ್ಮದು ಪ್ರಸಾರ ಮಾಡಬೇಡಿ ಅಂತ ಸ್ಟೇ ತಂದ ಮಂತ್ರಿಗಳನ್ನು ಕಾಪಾಡ್ತಾರೋ(?) ಅಥವಾ ಏನ್ ಮಾಡ್ತಾರೆ. ಪಾಪ ಮುಖ್ಯಮಂತ್ರಿಗಳಿಗೆ ನನ್ ಸರ್ಕಾರ ತೆಗೆದ ಅಂತ ಹೇಳಿ ನಾನ್ಯಾಕ್ ತೊಂದರೆ ಕೊಡಬೇಕು. ಅವರ ಪಕ್ಷದಲ್ಲಿಯೇ ಅವರಿಗೆ ತೊಂದರೆ ಕೊಡ್ತಿರುವಾಗ ನಾನ್ಯಾಕ್ ತೊಂದರೆ ಕೊಡೋದು ಅಂತ. ಕೊನೆ ಕ್ಷಣದಲ್ಲಿ ಒಳ್ಳೆ ಹೆಸರು ಮಾಡಿಕೊಂಡು ಹೋಗಲಿ ಅಂತ ಸುಮ್ನಾಗಿದ್ದೆ ಎಂದು ಸಿಎಂ ಬಿಎಸ್​ವೈ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಸಿ.ಡಿ ಕಥೆ ಹೋದರೆ ನಮ್ದೂ ಒಂದ್ ಸಿ.ಡಿ ಮಾಡಿದರಲ್ಲಾ(?) 2006ರಲ್ಲಿ ಪ್ರಮಾಣವಚನ ತೆಗೆದುಕೊಂಡೆ. ಎರಡೇ ತಿಂಗಳಿಗೆ ಸಿಡಿ ಅಂತ ಅಂದರು. 150 ಕೋಟಿ ರೂ. ಹಗರಣ ಮಾಡಿದ್ದಾರೆ ಅಂತ. ಆಪರೇಶನ್ ಸಕ್ಸಸ್ ಅಂತ ಅವತ್ತು ಹೊರಗೆ ಬಂದು ಹೇಳಿದವರು ಯಾರು(?) ಆ ಮಹಾನಾಯಕ ಯಾರು(?) ಎಂದರು.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮೇಟಿ ಪ್ರಕರಣದಲ್ಲಿ ಏನು ಆಯ್ತು(?) ಒಂದ್ ವಾರ ಬಾರೀ ಚರ್ಚೆ ಆಗಿತ್ತು. ಮುಂದೆ ಏನ್ ಮಾಡಿದರು(?) ಮೇಟಿ ಪ್ರಕರಣದಲ್ಲಿ ಬಿ ರಿಪೋರ್ಟ್ ಹಾಕಿದರು. ಈಗಲೂ ಅದೇ ಆಗೋದು ಎಂದು ಪ್ರತಿಕ್ರಿಯೆ ನೀಡಿದರು.

ಕೊರೋನಾ ಎರಡನೆ ಅಲೆ ಹಬ್ಬುತ್ತಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಲಾಕ್​ಡೌನ್ ಮಾಡೋದು ಸೂಕ್ತ. ಮತ್ತೆ ಪ್ರಕರಣಗಳು ಏರುತ್ತಿವೆ. ಜನ ಮಾಸ್ಕ್ ಹಾಕಿರಲ್ಲ, ಕೆಲವೊಮ್ಮೆ ನಾವೂ ಹಾಕಿರಲ್ಲ, ಕಾರ್ಯಕ್ರಮಕ್ಕೆ ಹೋದರೆ 50 ಜನ ಸೆಲ್ಪಿ ತೆಗೆದುಕೊಳ್ಳುತ್ತಾರೆ. ದೇವರ ದಯೆ ಈಗ ನಾವೂ ಬದುಕಿದ್ದೀವಿ. ಕಡಿಮೆ ಆಗಲಿ ಅನ್ನೋದು ನನ್ನ ಅಭಿಪ್ರಾಯ ಎಂದಿದ್ದಾರೆ.

ಮೈಮೂಲ್ ಚುನಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು, ನಾನು ಯಾರ ವಿರುದ್ಧವೂ ಕೆಲಸ ಮಾಡುತ್ತಿಲ್ಲ. ನಮ್ಮ ಪಕ್ಷದ ಕಾರ್ಯಕರ್ತರ ಪರವಾಗಿ ಕೆಲಸ ಮಾಡಲು ಹೋಗಿದ್ದೇನೆ. ಆಲದ ಮರ ಬಲಾಢ್ಯವಾಗಿ ಬೆಳೆಯುತ್ತವೆ. ಅವು ಕೆಳಗಿರೋ ಗಿಡ ಬೆಳೆಯಲು ಬಿಡುವುದಿಲ್ಲ. ಹೀಗೆ ಅವರು ಆಲದ ಮರ ಅಂತ ಹೇಳಿರಬಹುದು. ನಮ್ಮ ಕಾರ್ಯಕರ್ತರನ್ನ ಉಳಿಸಿಕೊಳ್ಳಲು ನಾನು ಮೈಸೂರಿಗೆ ಹೋಗಿದ್ದೆ ಎಂದು ಮಾಜಿ ಸಿಎಂ ಹೆಚ್ಡಿಕೆ ಅವರು ಜಿ.ಟಿ ದೇವೇಗೌಡ ಅವರ ಆರೋಪಕ್ಕೆ ಸ್ಪಷ್ಟನೆ ನೀಡಿದರು.

Next Story

RELATED STORIES