Top

ಸ್ವಾಮೀಜಿಗಳು ಮೀಸಲಾತಿ ಹೋರಾಟಕ್ಕೆ ಮುಂದೆ ಬಂದಿರುವುದು ಸ್ವಾಗತಾರ್ಹ

ಆರ್.ವಿ. ದೇಶಪಾಂಡೆ, ಪರಮೇಶ್ವರ್ ಅವರಿಗೂ ಐಎಂಎನಿಂದ ಹಣ ಬಂದಿದೆ ಎಂಬ ಆರೋಪ ಇದೆ

ಸ್ವಾಮೀಜಿಗಳು ಮೀಸಲಾತಿ ಹೋರಾಟಕ್ಕೆ ಮುಂದೆ ಬಂದಿರುವುದು ಸ್ವಾಗತಾರ್ಹ
X

ಶಿವಮೊಗ್ಗ: ಕರ್ನಾಟಕದಲ್ಲಿ ಹಲವು ಸಮಾಜದವರು ಮೀಸಲಾತಿ ಕೇಳುತ್ತಿದ್ದಾರೆ. ಅಂಬೇಡ್ಕರ್ ಆಶಯ ಇದ್ದಿದ್ದು ಯಾವ ಸಮಾಜಕ್ಕೆ ಅರ್ಹತೆ ಇದೆಯೋ ಅವರಿಗೆ ಮೀಸಲಾತಿ ನೀಡಬೇಕು ಎಂಬುದಾಗಿತ್ತು. ಆದರೆ, ಇದುವರೆಗೆ ಹಲವು ಸಮಾಜಗಳಿಗೆ ಧ್ವನಿ ಇರಲಿಲ್ಲ. ಇದೀಗ ಸ್ವಾಮೀಜಿಗಳು ಮೀಸಲಾತಿ ಹೋರಾಟಕ್ಕೆ ಮುಂದೆ ಬಂದಿರುವುದು ಸ್ವಾಗತಾರ್ಹ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್​ ಈಶ್ವರಪ್ಪ ಅವರು ಸೋಮವಾರ ಹೇಳಿದ್ದಾರೆ.

ಶಿವಮೊಗ್ಗದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಯಾರಿಗೆ ನ್ಯಾಯಯುತವಾಗಿ ಮೀಸಲಾತಿ ಸಿಗಬೇಕೊ ಅವರಿಗೆ ಮೀಸಲಾತಿ ಕೊಡಬೇಕು. ಕರ್ನಾಟಕದಲ್ಲಿ ನಿವೃತ್ತ ಹೈಕೋರ್ಟ್ ಜಡ್ಜ್ ನೇತೃತ್ವದಲ್ಲಿ ಸಮಿತಿ ಮಾಡಲಾಗುವುದು. ಆ ಸಮಿತಿ ನೀಡುವ ವರದಿ ಆಧರಿಸಿ ಮೀಸಲಾತಿ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಅರ್ಹತೆಗೆ ತಕ್ಕಂತೆ ಆಯಾ ಜಾತಿಗಳಿಗೆ ಮೀಸಲಾತಿ ನೀಡಲಾಗುವುದು ಎಂದಿದ್ದಾರೆ.

ಹಲವು ಸಮಾಜಗಳ ಕುಲಶಾಸ್ತ್ರ ಅಧ್ಯಯನ ನಡೆಯುತ್ತಿದೆ. ಕುಲಶಾಸ್ತ್ರ ಅಧ್ಯಯನದ ವರದಿ ಬರಬೇಕು. ವರದಿ ಬರಲು ಸಾಕಷ್ಟು ಕಾಲಾವಕಾಶಬೇಕು. ಈ ವರದಿ ಬಂದ ಬಳಿಕ ಮೀಸಲಾತಿ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಯತ್ನಾಳ್ ಬಗ್ಗೆ ಬಿಜೆಪಿ ರಾಜ್ಯ ಸಮಿತಿಯಿಂದ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ. ಕೇಂದ್ರ ನಾಯಕರು ಯತ್ನಾಳ್ ಅವರಿಗೆ ನೋಟಿಸ್ ನೀಡಿದ್ದಾರೆ ಇದಕ್ಕೆ ಯತ್ನಾಳ್ ಉತ್ತರವನ್ನೂ ನೀಡಿದ್ದಾರೆ. ಯತ್ನಾಳ್ ಪ್ರಕರ ಹಿಂದುತ್ವವಾದಿ ಈ ಬಗ್ಗೆ ನನಗೆ ಖುಷಿ ಇದೆ. ಆದರೆ, ಪಕ್ಷದ ಶಿಸ್ತಿನ ಒಳಗೇ ಅವರಿದ್ದರೆ ಒಳ್ಳೆಯದು ಎಂಬ ಸಲಹೆ ಅವರಿಗೆ ನೀಡುತ್ತೇನೆ ಎಂದು ಹೇಳಿದರು.

ಬಿ.ವೈ ವಿಜಯೇಂದ್ರ, ಸಿಎಂ ಬಗ್ಗೆ ಯತ್ನಾಳ್ ಕಂಪ್ಲೇಂಟ್ ಮಾಡಿದ್ದಾರೆ. ಯತ್ನಾಳ್ ಬಳಿ ಡಾಕ್ಯುಮೆಂಟ್ ಏನಿದೆಯೋ ನೋಡೋಣ. ಯತ್ನಾಳ್ ಕೇಂದ್ರ ನಾಯಕರಿಗೆ ಡಾಕ್ಯುಮೆಂಟ್ ಸಹಿತ ಹೈಕಮಾಂಡ್​ಗೆ ಹನ್ನೊಂದು ಪುಟದ ಉತ್ತರ ನೀಡಿದ್ದೇನೆ ಎಂದಿದ್ದಾರೆ. ಇವರ ಉತ್ತರ ನೋಡಿ ಹೈಕಮಾಂಡ್ ಕ್ರಮಕೈಗೊಳ್ಳಲಿದೆ ಎಂದು ನುಡಿದರು.

ಸದ್ಯ ಐಎಂಎ ಪ್ರಕರಣದ ಬಗ್ಗೆ ಸಿಬಿಐ ತೆಗೆದುಕೊಳ್ಳುತ್ತಿರುವ ಬಗ್ಗೆ ನಾನು ರಾಜಕೀಯವಾಗಿ ತೆಗೆದುಕೊಳ್ಳುವುದಿಲ್ಲ. ಸಿದ್ದರಾಮಯ್ಯ, ಕುಮಾರಸ್ವಾಮಿಯವರ ಬಗ್ಗೆ ಸಿಬಿಐ ಸ್ಪಷ್ಟಪಡಿಸಿದೆ ಐಎಂಎಯಿಂದ ಐದು ಕೋಟಿ ಹಣ ಪಡೆದಿದ್ದಾರೆ ಎಂಬ ಮಾಹಿತಿ ಇದೆ. ಆರ್.ವಿ. ದೇಶಪಾಂಡೆ, ಪರಮೇಶ್ವರ್ ಅವರಿಗೂ ಐಎಂಎನಿಂದ ಹಣ ಬಂದಿದೆ ಎಂಬ ಆರೋಪ ಇದೆ. ಇಲ್ಲಿ ನಾನು ರಾಜಕಾರಣ ಮಾಡುವುದಿಲ್ಲ. ಇವರೆಲ್ಲರೂ ಆರೋಪದಿಂದ ಮುಕ್ತರಾಗಲಿ ಎಂದು ಆಶಿಸುತ್ತೇನೆ. ಒಂದು ವೇಳೆ ತಪ್ಪು ಮಾಡಿದ್ದರೆ ಉಪ್ಪು ತಿಂದವರು ನೀರು ಕುಡಿಯುತ್ತಾರೆ ಅಷ್ಟೇ ಎಂದಿದ್ದಾರೆ.

ಹುಣಸೋಡು ಸ್ಫೋಟ ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದೇನೆ. ಪ್ರಕರಣದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಕುರಿತು ಮಾಹಿತಿ ಪಡೆಯಲು ತನಿಖಾಧಿಕಾರಿಗಳು ಜಿಲ್ಲಾಧಿಕಾರಿಯನ್ನು ಕರೆದಿದ್ದಾರೆ ಎಂದು ಕೆ.ಎಸ್​ ಈಶ್ವರಪ್ಪ ಅವರು ಮಾತನಾಡಿದ್ದಾರೆ.

Next Story

RELATED STORIES