Top

ಒಂದು ಸಮಸ್ಯೆ ಪರಿಹಾರಕ್ಕೆ ಇನ್ನೊಂದು ಹೊಸ ಸಮಸ್ಯೆ ಹುಟ್ಟು ಹಾಕುವುದು ಸರಿಯಲ್ಲ - ಸಿದ್ದರಾಮಯ್ಯ

ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಲ್ಲಿ ಪ್ರಜ್ಞಾವಂತರೇ ಎಡವುತ್ತಿದ್ದಾರೆ ಅಂದಮೇಲೆ ಚಿಕ್ಕ ಮಕ್ಕಳಿಂದ ಇದನ್ನು ನಿರೀಕ್ಷಿಸಲು ಸಾಧ್ಯವೇ(?)

ಒಂದು ಸಮಸ್ಯೆ ಪರಿಹಾರಕ್ಕೆ ಇನ್ನೊಂದು ಹೊಸ ಸಮಸ್ಯೆ ಹುಟ್ಟು ಹಾಕುವುದು ಸರಿಯಲ್ಲ - ಸಿದ್ದರಾಮಯ್ಯ
X

ಬೆಂಗಳೂರು: ಈ ಹಿಂದೆ ಸರ್ಕಾರ ವಿವಿಧ ತರಗತಿಗಳಿಗೆ ಪರೀಕ್ಷೆ ನಡೆಸುವ ಇರಾದೆ ವ್ಯಕ್ತಪಡಿಸಿದಾಗ ಸರ್ಕಾರದ ನಿಲುವಿಗೆ ನಾನು ಬೆಂಬಲಿಸಿದ್ದೆ. ಆದರೆ, ಈಗಿನ ಪರಿಸ್ಥಿತಿಯೇ ಬೇರೆಯಿದೆ. ಕೊರೊನಾ ಮಿತಿಮೀರಿ ಹರಡುತ್ತಿರುವ ಇಂಥಾ ಸಂದರ್ಭದಲ್ಲಿ ಶಾಲೆಗಳನ್ನು ತೆರೆಯುವುದು ದೊಡ್ಡ ಅವಘಡಕ್ಕೆ ಎಡೆ ಮಾಡಿಕೊಡಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟ್ವಿಟ್​ ಮಾಡಿದ್ದಾರೆ.

ಇಂದು ತಮ್ಮ ಅಧಿಕೃತ ಟ್ವಿಟರ್​ ಖಾತೆ ಬರೆದುಕೊಂಡಿರುವ ಅವರು, ನಿತ್ಯ ರಾಜ್ಯದಲ್ಲಿ 10,000ದ ಅಸುಪಾಸು ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗುತ್ತಿವೆ, ಈ ವರೆಗೆ 7,857 ಮಂದಿ ಈ ಮಾರಕ ರೋಗಕ್ಕೆ ಬಲಿಯಾಗಿದ್ದಾರೆ. ಆದರೂ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಲ್ಲಿ ಪ್ರಜ್ಞಾವಂತರೇ ಎಡವುತ್ತಿದ್ದಾರೆ ಅಂದಮೇಲೆ ಚಿಕ್ಕ ಮಕ್ಕಳಿಂದ ಇದನ್ನು ನಿರೀಕ್ಷಿಸಲು ಸಾಧ್ಯವೇ(?) ಎಂದು ಪ್ರಶ್ನೆ ಮಾಡಿದ್ದಾರೆ.

ಮಕ್ಕಳು ಶಾಲೆಗಳಿಂದ ಕೊರೊನಾಗೆ ತುತ್ತಾಗಿ ಮನೆಗೆ ಬಂದರೆ ಮಕ್ಕಳ ಜೀವಕ್ಕೂ ಆಪತ್ತು, ಜೊತೆಗೆ ಮನೆಯಲ್ಲಿರುವ ಹಿರಿಯರು, ರೋಗಿಗಳ ಜೀವಕ್ಕೂ ಆಪತ್ತು ಬರಲಿದೆ. ಈಗಾಗಲೇ ಅಮೆರಿಕಾ ಹಾಗೂ ಯುರೋಪಿನ ಕೆಲವು ದೇಶಗಳು ಶಾಲೆಗಳನ್ನು ತೆರೆದು ಕೈಸುಟ್ಟುಕೊಂಡಿವೆ, ಅವುಗಳ ಸಾಲಿಗೆ ನಾವು ಸೇರುವುದು ಬೇಡ ಎಂದು ಸಲಹೆ ನೀಡಿದ್ದಾರೆ.

ಶಾಲೆಗಳು ತೆರೆಯದಿರುವ ಕಾರಣಕ್ಕೆ ಬಾಲ್ಯ ವಿವಾಹ ಹಾಗೂ ಬಾಲ ಕಾರ್ಮಿಕ ಪದ್ಧತಿಗಳು ಹೆಚ್ಚುತ್ತಿರುವುದು ಸತ್ಯವಾದರೂ ಅದನ್ನು ಜಿಲ್ಲಾಡಳಿತ ಹಾಗೂ ಇತರೆ ಇಲಾಖೆಗಳ ಮೂಲಕ ನಿಯಂತ್ರಿಸಲು ಸಾಕಷ್ಟು ಅವಕಾಶಗಳಿವೆ. ಒಂದು ಸಮಸ್ಯೆಯ ಪರಿಹಾರಕ್ಕಾಗಿ ಇನ್ನೊಂದು ಹೊಸ ಸಮಸ್ಯೆಯನ್ನು ಹುಟ್ಟುಹಾಕುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ತಪ್ಪು ನಿರ್ಧಾರವನ್ನು ಸರ್ಕಾರ ಮತ್ತು ಶಿಕ್ಷಣ ಇಲಾಖೆ ತೆಗೆದುಕೊಳ್ಳಬಾರದು. ಮಕ್ಕಳಿಗೆ ಆನ್‌ಲೈನ್ ಶಿಕ್ಷಣಕ್ಕೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ, ಆ ಮೂಲಕವೇ ಶಿಕ್ಷಣ ನೀಡಬೇಕು ಹಾಗೂ ಪ್ರಸಕ್ತ ವರ್ಷ ಎಲ್ಲಾ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗೆ ಬಡ್ತಿ ನೀಡಬೇಕು ಎಂದು ಸಲಹೆ ನೀಡುತ್ತಿದ್ದೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ

Next Story

RELATED STORIES