Top

ಮಂಗಳೂರಿನ ಕೋಟಿ ಕುಳಗಳ ಮೇಲೆ ಐಟಿ ದಾಳಿ ​

ಆಸ್ಪತ್ರೆ, ಮನೆ, ಕಾಲೇಜುಗಳ ಮೇಲೆ ಏಕಕಾಲದಲ್ಲಿ ತಲಾಶ್, ಐಟಿ ಬಲೆಗೆ ಬಿದ್ದ ನಾಲ್ವರು ಕೋಟ್ಯಾಧಿಪತಿಗಳು.

ಮಂಗಳೂರಿನ ಕೋಟಿ ಕುಳಗಳ ಮೇಲೆ ಐಟಿ ದಾಳಿ ​
X

ದಕ್ಷಿಣ ಕನ್ನಡ: ಮಂಗಳೂರಿನ ಮೆಡಿಕಲ್ ಕಾಲೇಜುಗಳ ಉದ್ಯಮಿಗಳಿಗೆ ಇಂದು ಐಟಿ ಫುಟ್ಬಾಲ್ ಆಡಿದೆ. ಬೆಳ್ಳಬೆಳಗ್ಗೆ ವೈದ್ಯಕೀಯ ಕ್ಷೇತ್ರದ ಕುಳಗಳಿಗೆ ಆಧಾಯ ತೆರಿಗೆ ಅಧಿಕಾರಿಗಳು ಶಾಕ್ ಟ್ರೀಟ್ಮೆಂಟ್ ಕೊಟ್ಟಿದ್ದಾರೆ. ಐಟಿ ದಾಳಿ ವೇಳೆ ಕೋಟಿ ಕೋಟಿ ಕ್ಯಾಶ್ ಸಿಕ್ಕಿದ್ದು ಅಪಾರ ಪ್ರಮಾಣದ ದಾಖಲೆಗಳು ಪತ್ತೆಯಾಗಿದೆ. ಮಂಗಳೂರಿನ ಕೋಟ್ಯಾಧೀಶರ ಆಸ್ತಿ ಮೇಲೆ ಐಟಿ ಕಣ್ಣು ಬಿದ್ದ ಪರಿಣಾಮ ಉದ್ಯಮಿಗಳ ಕೂಟವೇ ಪತರುಗುಟ್ಟಿದೆ. ಕರಾವಳಿಯ ಐಟಿ ರೈಡ್ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ವೈಧ್ಯಕೀಯ ಕ್ಷೇತ್ರದ ಕುಳಗಳಿಗೆ ಶಾಕ್ ಟ್ರೀಟ್ಮೆಂಟ್ ಕೊಟ್ಟಿದ್ದಾರೆ. ಮಂಗಳೂರಿನ ಪ್ರತಿಷ್ಠಿತ ನಾಲ್ಕು ಮೆಡಿಕಲ್ ಕಾಲೇಜುಗಳ ಮೇಲೆ ದಾಳಿ ನಡೆಸಿದೆ. ನಾಲ್ವರು ಪ್ರತಿಷ್ಠಿತ ಉದ್ಯಮಿಗಳ ಮೇಲೆ ಐಟಿ ಬಲೆ ಬೀಸಿದ್ದು, ಅಕ್ರಮ ಆಸ್ತಿ ಗಳಿಗೆಯ ಹಿನ್ನಲೆಯಲ್ಲಿ ಆಸ್ತಿ ಪತ್ರವನ್ನು ಜಾಲಾಡಿದ್ದಾರೆ. ಹೌದು ಮಂಗಳೂರಿನ ಪ್ರತಿಷ್ಠಿತ ಎಜೆ ಆಸ್ಪತ್ರೆ ಯ ಮಾಲೀಕ ಎಜೆ ಶೆಟ್ಟಿ, ದೇರಳಕಟ್ಟೆಯ ಯನಪೋಯ ಆಸ್ಪತ್ರೆ ಯ ಮಾಲೀಕ ಅಬ್ದುಲ್ ಕುಂಞ, ಕಣಚೂರು ಆಸ್ಪತ್ರೆ ಯ ಮಾಲೀಕ ಕಣಚೂರು ಮೋನು, ಮುಕ್ಕದ ಶ್ರೀನಿವಾಸ ಆಸ್ಪತ್ರೆಯ ಮಾಲಕ ಶ್ರೀನಿವಾಸ್ ರಾವ್ ರವರ ಮನೆ, ಆಸ್ಪತ್ರೆ, ಮೆಡಿಕಲ್ ಕಾಲೇಜುಗಳ ಮೇಲೆ ಐಟಿ ಅಧಿಕಾರಿಗಳು ಏಕ ಕಾಲದಲ್ಲಿ ದಾಳಿ ಮಾಡಿದ್ದಾರೆ. ಮುಂಜಾನೆ 5.30 ಕ್ಕೆ ಕೋಟಿ ಕುಳಗಳ ಮನೆ ಬಾಗಿಲ ತಟ್ಟಿದ ಐಟಿ ಆಧಿಕಾರಿಗಳು ಶಾಕ್ ಟ್ರೀಟ್ಮೆಂಟ್ ನೀಡಿದ್ದಾರೆ.

ಇಂದು ಬೆಳಗ್ಗೆಯೇ ಉದ್ಯಮಿಗಳಿಗೆ ಶಾಕ್ ನೀಡಲು ಐಟಿ ಅಧಿಕಾರಿಗಳು ನಿನ್ನೆ ಸಂಜೆಯೇ ಸಿದ್ಧತೆ ಮಾಡಿಕೊಂಡಿದ್ದರು. ಮಂಗಳೂರಿನ ವಿವಿಧ ಬಾಡಿಗೆ ಕಂಪೆನಿಗಳಿಂದ 60 ಇನ್ನೋವಾ ಕಾರ್ ಗಳನ್ನು ಬುಕ್ ಮಾಡಿದ್ದರು. ಕೇರಳದಲ್ಲಿ ಇಂಟರ್ ಸ್ಟೇಟ್ ಫುಟ್ಬಾಲ್ ಮ್ಯಾಚ್ ನಡೆಯುತ್ತಿದ್ದು, ಆಟಗಾರರಿಗಾಗಿ ಕಾರ್ ಬಾಡಿಗೆಗೆ ಬೇಕಾಗಿದೆ ಅಂತಾ ಕಾರಣ ಹೇಳಿದ್ದರು. ಯಾರಿಗೂ ಅನುಮಾನ ಬಾರದಂತೆ ಕಾರ್ ಗಳಿಗೆ ಸ್ಟಿಕ್ಕರ್ ಕೂಡಾ ಅಂಟಿಸಲಾಗಿತ್ತು. ಉಡುಪಿಯ ಹೊಟೇಲ್ ಒಂದರಲ್ಲಿ ನಿನ್ನೆ ರಾತ್ರಿ ತಂಗಿದ್ದ ತಂಡ ಇಂದು ಮುಂಜಾನೆ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿತ್ತು..

ಈ ನಾಲ್ಕೂ ಉದ್ಯಮಿಗಳು ಕೋಟ್ಯಾಂತರ ರೂಪಾಯಿ ಯ ಆಸ್ತಿಹೊಂದಿದ್ದು, ಆಸ್ಪತ್ರೆ, ಮೆಡಿಕಲ್ ಕಾಲೇಜುಗಳನ್ನು ಹೊಂದಿದ್ದಾರೆ. ಇದರ ಜೊತೆಗೆ ಬೇರೆ ಬೇರೆ ವ್ಯವಹಾರದಲ್ಲೂ ಉದ್ಯಮಿಗಳು ತೊಡಗಿಕೊಂಡಿದ್ದರು ಅಂತಾ ಹೇಳಲಾಗಿದೆ. ಆದಾಯ ಮೀರಿ ಆಸ್ತಿಗಳಿಕೆ ಮಾಡಿರುವ ಗುಮಾನಿ ಐಟಿ ಅಧಿಕಾರಿಗಳಿಗೆ ಕಂಡಿದ್ದು, ಈ ಹಿನ್ನಲೆಯಲ್ಲಿ ದಾಳಿ ಮಾಡಲಾಗಿದೆ. ಸಂಜೆಯವರೆಗೂ ಅಧಿಕಾರಿಗಳು ಸರ್ಚ್ ಮಾಡಿದ್ದು, ಕೋಟಿ ಕೋಟಿ ಕ್ಯಾಶ್ ಪತ್ತೆಯಾಗಿದೆ. ಮೆಡಿಕಲ್ ಕಾಲೇಜು ಮಾಲೀಕರೊಬ್ಬರ ಒಂದು ಮನೆಯಲ್ಲಿ 5 ಕೋಟಿ ಹಣ ಪತ್ತೆಯಾಗಿದೆ. ಕೋಟ್ಯಾಂತರ ರೂಪಾಯಿ ಆಸ್ತಿ ಯ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಅಂತಾ ಹೇಳಲಾಗಿದೆ.

ಇನ್ನು ಶ್ರೀನಿವಾಸ ವಿದ್ಯಾಸಂಸ್ಥೆಗಳ ಮಾಲೀಕ ಶ್ರೀನಿವಾಸ ರಾವ್ ಅವರ ಜೈಲು ರಸ್ತೆಯಲ್ಲಿರುವ ಮನೆಗೆ ಐಟಿ ಅಧಿಕಾರಿಗಳು ದಾಳಿ ಮಾಡಿದ ವೇಳೆ ಶ್ರೀನಿವಾಸ್ ರಾವ್ ಅವರ ತಂದೆ ರಾಘವೇಂದ್ರ ರಾವ್ ಅವರ ಆರೋಗ್ಯ ಕೆಟ್ಟಿತ್ತು. ತಕ್ಷಣ ಆಂಬುಲೆನ್ಸ್ ನಲ್ಲಿ ಅವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಯ್ತು. ಇದ್ರಿಂದ ಐಟಿ ಅಧಿಕಾರಿಗಳು ಗಡಿಬಿಡಿಯಾಗೋದ್ರು. ಒಟ್ಟಿನಲ್ಲಿ ಮಂಗಳೂರಿನ ಪ್ರತಿಷ್ಠಿತ ಉದ್ಯಮಿಗಳನ್ನು ಐಟಿ ಅಧಿಕಾರಿಗಳು ಬೇಟೆಯಾಡಿದ್ದು, ಅಕ್ರಮ ಸಂಪಾದನೆ ಮಾಡಿದವರಿಗೆ ನಡುಕ ಹುಟ್ಟಿಸಿದೆ. ಬೆಳ್ಳಂಬೆಳಗ್ಗಿನ ಐಟಿ ಶಾಕ್ ಗೆ ಉದ್ಯಮಿಗಳು ಕಂಗಾಲಾಗಿದ್ದು, ವಾಮ ಮಾರ್ಗದ ಆಸ್ತಿಗಳಿಕೆ ಗೆ ಐಟಿ ಬ್ರೇಕ್ ನೀಡಿದೆ.

Next Story

RELATED STORIES