Top

ಗ್ರಾ.ಪಂ.ಚುನಾವಣೆ ನಡೆಸಲು ಚುನಾವಣಾ ಆಯೋಗ ಸಿದ್ಧತೆ: ಚುನಾವಣಾಧಿಕಾರಿಗಳಿಗೆ ತರಬೇತಿಗೆ ಆದೇಶ

ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಮತದಾರರ ಪಟ್ಟಿ, ಹಾಗೂ ಇತರೆ ತಯಾರಿಯನ್ನು ಮಾಡಿಕೊಂಡಿದೆ.

ಗ್ರಾ.ಪಂ.ಚುನಾವಣೆ ನಡೆಸಲು ಚುನಾವಣಾ ಆಯೋಗ ಸಿದ್ಧತೆ: ಚುನಾವಣಾಧಿಕಾರಿಗಳಿಗೆ ತರಬೇತಿಗೆ ಆದೇಶ
X

ಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ತಯಾರಿ ಆರಂಭಿಸಿದ್ದು, ತಕ್ಷಣವೇ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿಗಳಿಗೆ ತರಬೇತಿ ಮತ್ತು ನೇಮಕಾತಿಗಾಗಿ ಜಿಲ್ಲಾಧಿಕಾರಿಗಳಿಗೆ ರಾಜ್ಯ ಚುನಾವಣಾ ಆಯೋಗ ಕಾರ್ಯದರ್ಶಿ ಮಾಹಿತಿ ರವಾನಿಸಿದ್ದಾರೆ.

ಒಟ್ಟು 6,025 ಗ್ರಾಮ ಪಂಚಾಯಿತಿಗಳ ಪೈಕಿ 5,800 ಪಂಚಾಯಿತಿಗಳ ಅಧಿಕಾರ ಅವಧಿ ಜೂನ್ ತಿಂಗಳಲ್ಲೇ ಮುಗಿದಿದ್ದು, ಅವುಗಳಿಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಮತದಾರರ ಪಟ್ಟಿ, ಹಾಗೂ ಇತರೆ ತಯಾರಿಯನ್ನು ಮಾಡಿಕೊಂಡಿದೆ. ಈ ಹಿಂದೆ ಅಕ್ಟೋಬರ್ ಅಂತ್ಯದ ವೇಳೆಗೆ ಚುನಾವಣೆ ನಡೆಸುವ ಸಾಧ್ಯತೆ ಇತ್ತು ಎನ್ನಲಾಗಿತ್ತು. ಆದರೆ, ಈಗ ಡಿಸೆಂಬರ್ ಅಂತ್ಯದಲ್ಲಿಯೇ ಚುನಾವಣೆ ನಡೆಸಲು ಸಿದ್ಧತೆ ನಡೆಸಿದೆ.

ಡಿಸೆಂಬರ್ ಮಾಹೆಯ ಅಂತ್ಯಕ್ಕೆ ಅವಧಿ ಮುಗಿಯುವ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ. ಕರ್ನಾಟಕ ಪಂಚಾಯತ್ ರಾಜ್ ನಿಯಮ 1993ರ ನಿಯಮ 6ರಂತೆ ಜಿಲ್ಲಾಧಿಕಾರಿಯವರು ಪಂಚಾಯತಿಗೆ ಸ್ಥಳೀಯ ಪ್ರಾಧಿಕಾರದ ಅಧಿಕಾರಿಯನ್ನು ಚುನಾವಣಾಧಿಕಾರಿಯನ್ನಾಗಿ ಹಾಗೂ ಸಹಾಯಕರಾಗಿ ಅಧಿಕಾರಿಯನ್ನು ನೇಮಕ ಮಾಡಲು ಸೂಚಿಸಿದ್ದಾರೆ.

ಒಬ್ಬ ಬಿ ಗ್ರೂಪ್ ವರ್ಗದ ಅಧಿಕಾರಿಯನ್ನು ಚುನಾವಣಾಧಿಕಾರಿಯನ್ನಾಗಿ ನೇಮಿಸುವುದು ಅವರು ಓರ್ವ ಶಿರಸ್ತೇದಾರ/ಸೂಪರಿಂಟೆಡೆಂಟ್/ವ್ಯವಸ್ಥಾಪಕ ವರ್ಗದ ಅಧಿಕಾರಿಯನ್ನು ನೇಮಕ ಮಾಡುವುದು. ಸಾಕಷ್ಟು ಅಧಿಕಾರಿಗಳು ಲಭ್ಯವಿಲ್ಲದಿದ್ದಲ್ಲಿ ಅನುಭವ ಮತ್ತು ಸೇವಾ ಹಿರಿತನವನ್ನು ಪರಿಗಣಿಸಿ ಅಧಿಕಾರಿ ನೇಮಿಸಲು ಸೂಕ್ಷ್ಮ ಮತ್ತು ಅತ್ಯಂತ ಹೆಚ್ಚು ಸದಸ್ಯರಿರುವ ಚುನಾವಣಾಧಿಕಾರಿಗಳನ್ನು ಆಯ್ಕೆ ಮಾಡಬೇಕು. ಅಧಿಕಾರಿಗಳು ಅವರ ಸ್ವಂತ ಗ್ರಾಮ ಪಂಚಾಯಿತಿ ಹೊರತುಪಡಿಸಿ ಬೇರೆಡೆಗೆ ನೇಮಿಸಬೇಕು ಎಂಬುದನ್ನು ಖಾತರಿಪಡಿಸಿಕೊಳ್ಳಬೇಕೆಂದು ಆಯೋಗ ನಿರ್ದೇಶನ ನೀಡಿದೆ.

25 ಸದಸ್ಯರನ್ನು ಹೊಂದಿರುವ ಪಂಚಾಯಿತಿಗೆ ಓರ್ವ ಚುನಾವಣಾಧಿಕಾರಿ ಮತ್ತು ಓರ್ವ ಸಹಾಯಕರನ್ನು ನೇಮಕ ಮಾಡಬೇಕು. 25 ರಿಂದ 35 ಸದಸ್ಯರಿರು ವ ಪಂಚಾಯತಿಗಳಿಗೆ ಒಬ್ಬ ಚುನಾವಣಾಧಿಕಾರಿ ಹಾಗೂ ಇಬ್ಬರು ಸಹಾಯಕರನ್ನು ನೇಮಿಸಬೇಕು. 35ಕ್ಕಿಂತ ಹೆಚ್ಚಿನ ಸದಸ್ಯ ಸ್ಥಾನಗಳನ್ನು ಹೊಂದಿರುವ ಪಂಚಾಯಿತಿಗಳಿಗೆ ಇಬ್ಬರು ಚುನಾವಣಾಧಿಕಾರಿ,ಇಬ್ಬರು ಚುನಾವಣಾಧಿಕಾರಿಯನ್ನು ನೇಮಿಸಬೇಕು ಹಾಗೂ ಕ್ಷೇತ್ರಗಳನ್ನು ಗೊತ್ತುಪಡಿಸಲಾಗಿದೆ ಎಂಬು ದನ್ನು ಜಿಲ್ಲಾಧಿಕಾರಿಗಳು ನಿರ್ದಿಷ್ಟಪಡಿಸಬೇಕು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.

ಚುನಾವಣಾ ಅಂಕಿ ಅಂಶಗಳನ್ನು ಗಣಕೀಕರಣ ಮಾಡುವ ನಿಟ್ಟಿನಲ್ಲಿ ಎನ್ಐಸಿ ಅವರ ಸಹ ಯೋಗದಲ್ಲಿ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ.ತಾಲೂಕು ಮಟ್ಟದಲ್ಲಿ ಚುನಾವಣಾಧಿಕಾರಿ,ಸಹಾಯಕ ಚುನಾವಣಾಧಿಕಾರಿಗಳನ್ನು ಗುರುತಿಸಿ ವಿವರಗಳನ್ನು ತಂತ್ರಾಂಶ ಅಳವಡಿಸಿ ಗ್ರಾಮ ಪಂಚಾಯಿತಿಗಳಿಗೆ ಮ್ಯಾಪಿಂಗ್ ಮಾಡಬೇಕಿರುತ್ತದೆ.ಕೋವಿಡ್ 19 ಮುನ್ನಚ್ಚರಿಕೆ ಕ್ರಮಗಳನ್ನು ಅನುಸರಿಸಿ ತರಬೇತಿ ನೀಡಬೇಕೆಂದು ಸಂದೇಶ ರವಾನಿಸಿದ್ದಾರೆ.

Next Story

RELATED STORIES