ಬಜೆಟ್ ಬಗ್ಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪ್ರತಿಕ್ರಿಯೆ
ಬಜೆಟ್ ಸಿದ್ಧತೆ ಕೂಡ ಒಂದು ರೂಪಕ್ಕೆ ಬರ್ತಿದೆ

ಬೆಂಗಳೂರು: ಎಲ್ಲ ಇಲಾಖೆಗಳ ಬಜೆಟ್ ಪೂರ್ವಭಾವಿ ಸಭೆಗಳು ಮುಗಿದಿದ್ದು, ಗೃಹ ಸೇರಿದಂತೆ ಇನ್ನೆರೆಡು ಇಲಾಖೆಗಳು ಇವೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಶುಕ್ರವಾರ ಹೇಳಿದರು.
ಮಾರ್ಚ್ 8ರಂದು ಬಜೆಟ್ ಮಂಡನೆ ಹಿನ್ನೆಲೆ ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಅವುಗಳನ್ನು ಅರ್ಧ ದಿನದಲ್ಲಿ ಮಾಡಿದ್ರೆ ಮುಗಿಯುತ್ತೆ. ಇದಾದ ನಂತರ ಬಜೆಟ್ ಸಿದ್ಧತೆಗಳು ಶುರುವಾಗುತ್ತವೆ ಎಂದಿದ್ದಾರೆ.
ಇನ್ನು ಏನೇನು ಕೊಡಬಹುದು, ಎಷ್ಟೆಷ್ಟು ಖರ್ಚಾಗಿದೆ ಎಂಬುದರ ಬಗ್ಗೆ ಚರ್ಚೆ ಮಾಡಿದ್ದೇವೆ ಬಹಳ ಉಪಯುಕ್ತವಾದ ಸಭೆ ಆಗಿದೆ. ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತಿದ್ದೇವೆ. ಬಜೆಟ್ ಸಿದ್ಧತೆ ಕೂಡ ಒಂದು ರೂಪಕ್ಕೆ ಬರ್ತಿದೆ ಎಂದರು.
ವಿವಿಧ ಸಮುದಾಯಗಳಿಂದ ಮೀಸಲಾತಿಗೆ ಬೇಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈಗಾಗಲೇ ಈ ಬಗ್ಗೆ ಕ್ಯಾಬಿನೆಟ್ ಸಭೆಯಲ್ಲಿ ಸ್ಪಷ್ಟ ಮಾಡಿದ್ದೇನೆ. ಪ್ರತಿಯೊಬ್ಬ ಸಚಿವರು ಕೂಡ ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದೆ ಯಾವ ರೀತಿ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ಆಗುತ್ತಿದೆ ಎಂದು ಸಿಎಂ ಬಿಎಸ್ವೈ ಅವರು ಮಾತನಾಡಿದ್ದಾರೆ.