Top

ಕೇವಲ ಭರವಸೆಗೆ ಸೀಮಿತವಾದ ಶಿಕ್ಷಣ ಸಚಿವರ ಸಭೆ

ಮಾರ್ಚ್ 31ರವರೆಗೆ ಸರ್ಕಾರಕ್ಕೆ ಡೆಡ್ ಲೈನ್

ಕೇವಲ ಭರವಸೆಗೆ ಸೀಮಿತವಾದ ಶಿಕ್ಷಣ ಸಚಿವರ ಸಭೆ
X

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಕನ್ನಡ ಮಾಧ್ಯಮ ಖಾಸಗಿ ಶಾಲೆಗಳ ಒಕ್ಕೂಟದಿಂದ ಪ್ರತಿಭಟನೆಗೆ ಕರೆ ಕೊಡಲಾಗಿತ್ತು. ಶಾಲೆಗಳನ್ನೂ ಬಂದ್ ಮಾಡಲಾಗಿತ್ತು. ಆದ್ರೆ, ಪ್ರತಿಭಟನೆಗೆ ಎಚ್ಚೆತ್ತ ಶಿಕ್ಷಣ ಇಲಾಖೆ ಖಾಸಗಿ ಶಾಲಾ ಒಕ್ಕೂಟವನ್ನ ದಿಢೀರ್ ಸಭೆಗೆ ಆಹ್ವಾನಿಸಿತ್ತು. ಆದ್ರೆ, ಇವತ್ತಿನ ಮೀಟಿಂಗ್ ಸಹ ಕೇವಲ ಭರವಸೆಗೆ ಮಾತ್ರ ಸೀಮಿತವಾಗಿತ್ತು.

ಶುಲ್ಕ ಕಡಿತದ ಸಮಸ್ಯೆಯೇ ಸರ್ಕಾರಕ್ಕೆ ಕಗ್ಗಂಟಾಗಿದೆ. ಇದನ್ನೇ ಬಗೆಹರಿಸದ ಶಿಕ್ಷಣ ಇಲಾಖೆಗೆ ಹಲವು ಸವಾಲುಗಳು ಎದುರಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ನೌಕರರ ಸಂಘ, ರುಪ್ಸಾ ಕರ್ನಾಟಕ, ಕಲ್ಯಾಣ ಕರ್ಣಾಟಕ ಅನುದಾನಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಹಾಗೂ ವಿವಿಧ ಶಿಕ್ಷಕರ ಸಮನ್ವಯ ಸಮಿತಿಯಿಂದ ಇಂದು ಹೋರಾಟಕ್ಕೆ ಕರೆ ನೀಡಲಾಗಿತ್ತು. ಶಿಕ್ಷಣ ಸಚಿವರ ನಿವಾಸದ ಮುಂದೆ ಬಾಯಿಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಗೆ ಸಕಲ ಸಿದ್ದತೆಗಳನ್ನ ಮಾಡಿಕೊಳ್ಳಲಾಯ್ತು. ಆದ್ರೆ, ಪ್ರತಿಭಟನೆಗೆ ಬೆಚ್ಚಿಬಿದ್ದ ಶಿಕ್ಷಣ ಇಲಾಖೆ, ತಡರಾತ್ರಿ ಸಭೆಗೆ ಆಗಮಿಸುವಂತೆ ಆಹ್ವಾನಿಸಲಾಯ್ತು. ಬಸವೇಶ್ವರನಗರದ ಶಿಕ್ಷಣ ಸಚಿವ ಸುರೇಶ್ ಕುಮಾರ್ ನಿವಾಸದ ಮುಂಭಾಗ ನಡೆಯಬೇಕಿದ್ದ ಪ್ರತಿಭಟನೆ ಶಾಸಕರ ಭವನಕ್ಕೆ ಶಿಫ್ಟ್ ಆಯ್ತು.

ಶಾಸಕರ ಭವನದಲ್ಲಿ ನಡೆದ ಖಾಸಗಿ ಶಾಲಾ ಒಕ್ಕೂಟ ಪ್ರತಿನಿಧಿಗಳ ಜೊತೆಗಿನ ಸಭೆಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಿಕ್ಷಣ ಇಲಾಖೆ ಆಯುಕ್ತ ಅನ್ಬು ಕುಮಾರ್, ಹಣಕಾಸು ಇಲಾಖೆ ಅಧಿಕಾರಿಗಳು, ಆರ್ಥಿಕ ಇಲಾಖೆ ಅಧಿಕಾರಿಗಳು ಹಾಗೂ ಕನ್ನಡ ಮಾಧ್ಯಮಿಕ ಶಾಲಾ ಒಕ್ಕೂಟ ಪ್ರತಿನಿಧಿಗಳು ಭಾಗಿಯಾಗಿದ್ದರು. ಸುಮಾರು ಒಂದುವರೆ ಗಂಟೆಗಳ ಕಾಲ ನಡೆದ ಈ ಸಭೆಯಲ್ಲಿ ಯಾವುದೇ ಬೇಡಿಕೆ ಈಡೇರಿಸದ ಶಿಕ್ಷಣ ಸಚಿವರು ಕೇವಲ ಭರವಸೆ ನೀಡಿ ಹೊರಟ್ರು. ಎಸ್ ಎಸ್ ಎಲ್ ಸಿ ಪರೀಕ್ಷೆ ಹತ್ತಿರ ಸಮೀಪಿಸುತ್ತಿದ್ದು, ಶಾಲೆ ಬಂದ್ ಬೇಡ. ಕೆಲ ಬೇಡಿಕೆಗಳು ಈಡೇರಿಸುವ ಪ್ರಕ್ರಿಯೆ ನಡೀತಿದೆ. ಕೆಲ ಬೇಡಿಕೆಗಳಿಗಡ ಆರ್ಥಿಕ ಇಲಾಖೆಯ ಅನುಮತಿ ಪಡೆಯಬೇಕಾಗುತ್ತೆ. ಸಿಎಂ ಗಮನಕ್ಕೆ ತಂದಿದ್ದೇವೆ. ಸಾಧ್ಯವಾದಷ್ಟು ಬೇಗ ಬೇಡಿಕೆ ಈಡೇರಿಸುತ್ತೇವೆ ಅಂತ ಹೇಳಿದ್ರು.

ಇನ್ನು ಇವತ್ತಿನ ಸಭೆಯಲ್ಲಿ ಯಾವುದೇ ನಿರ್ಣಯ ಕೈಗೊಳ್ಳದ ಶಿಕ್ಷಣ ಸಚಿವರ ವಿರುದ್ಧ ಖಾಸಗಿ ಶಾಲಾ ಒಕ್ಕೂಟ ಅಸಮಾಧಾನ ವ್ಯಕ್ತಪಡಿಸಿದ್ರು. ಬೇಡಿಕೆ ಈಡೇರಿಕೆಗೆ ಮತ್ತೆ ಮಾರ್ಚ್ 31ರವರೆಗೆ ಗಡುವು ನೀಡಲಾಗಿದೆ. ಅಷ್ಟರಲ್ಲಿ ಬೇಡಿಕೆ ಈಡೇರದಿದ್ರೆ, ಮತ್ತೆ ಹೋರಾಟ ಮಾಡೋದಾಗಿ ಕನ್ನಡ ಮಾಧ್ಯಮ ಖಾಸಗಿ ಶಾಲೆಗಳ ಒಕ್ಕೂಟ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಇವತ್ತು ಪ್ರತಿಭಟನೆ ನಡೆದಿದ್ರೆ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಯುತ್ತಿತ್ತು. ದೂರದೂರುಗಳಿಂದ ಸಾವಿರಾರು ಶಿಕ್ಷಕರು ಪ್ರತಿಭಟನೆಗೆ ಸಿದ್ದರಾಗಿ ಬಂದಿದ್ರು. ಆದ್ರೆ, ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಭೆಗೆ ಆಹ್ವಾನಿಸಿದ್ದ ಕಾರಣ, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮತ್ತೆ ಭರವಸೆಯನ್ನ ನೀಡಿದ್ದಾರೆ. ಒಂದು ವೇಳೆ ಬೇಡಿಕೆ ಈಡೇರದಿದ್ರೆ ಬೃಹತ್ ಹೋರಾಟಕ್ಕೆ ಸಜ್ಜಾಗೋದಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಎಚ್ಚರಿಕೆ ನೀಡಿದೆ.

Next Story

RELATED STORIES