ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ 50 ವರ್ಷ
ಅಂದೇ ಎಂಸಿಜಿಯಲ್ಲಿ ಸುಮಾರು 45 ಸಾವಿರ ಕ್ರಿಕೆಟ್ ಪ್ರೇಮಿಗಳು ಪಂದ್ಯ ವೀಕ್ಷಿಸಿದ್ದು ಇಂದು ಇತಿಹಾಸ.

ಸಾಮಾನ್ಯವಾಗಿ ಮಳೆಯ ಕಾರಣದಿಂದಾಗಿ ಸಾಕಷ್ಟು ಕ್ರಿಕೆಟ್ ಪಂದ್ಯಗಳು ರದ್ದಾಗಿರುವ ಬಗ್ಗೆ ಹಲವು ನಿದರ್ಶನಗಳಿವೆ ಆದರೆ ಈ ಮಳೆಯಿಂದಲೇ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಜನಿಸಿದ ಪರಿಕಲ್ಪನೆಗೆ ಈಗ 50 ವರ್ಷ ಪೂರೈಸಿದೆ.
ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ 1970ರ ಡಿಸೆಂಬರ್ 31ರಿಂದ 1971ರ ಜನವರಿ 4ರವರೆಗೆ ಆಸೀಸ್ ಟೆಸ್ಟ್ ಸರಣಿಯ ಮೂರನೇ ಪಂದ್ಯ ನಿಗದಿಯಾಗಿತ್ತು ಆದರೆ ಈ ಪಂದ್ಯವು ಮಳೆಯ ಕಾರಣದಿಂದಾಗಿ ರದ್ದಾಯಿತು.
ಈ ವೇಳೆ ಪ್ರೇಕ್ಷಕರ ಮನರಂಜಿಸಲು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು ಜನವರಿ 5ರಂದು 40 ಓವರ್ಗಳ ಏಕದಿನ ಪಂದ್ಯವನ್ನು ಆಯೋಜಿಸಿತು. ಇದೇ ನೋಡಿ ಮೊಟ್ಟಮೊದಲ ಅಂತರರಾಷ್ಟ್ರೀಯ ಏಕದಿನ ಪಂದ್ಯವಾಗಿ ಗಮನ ಸೆಳೆಯಿತು. ಅಂದೇ ಎಂಸಿಜಿಯಲ್ಲಿ ಸುಮಾರು 45 ಸಾವಿರ ಕ್ರಿಕೆಟ್ ಪ್ರೇಮಿಗಳು ಪಂದ್ಯ ವೀಕ್ಷಿಸಿದ್ದು ಇಂದು ಇತಿಹಾಸ.
ಮೊಟ್ಟಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ಗೆ ಇಳಿದ ಇಂಗ್ಲೆಂಡ್ ತಂಡವು 39.4 ಓವರ್ಗಳಲ್ಲಿ 190 ರನ್ ಗಳಿಸಿತು. ಆಸ್ಟ್ರೇಲಿಯಾ 35 ಓವರ್ಗಳಲ್ಲಿ 5 ವಿಕೆಟ್ಗಳಿಗೆ 191 ರನ್ ಗಳಿಸಿ ಜಯದಾಖಲಿಸಿತು. 119 ಎಸೆತಗಳನ್ನು ಎದುರಿಸಿ 82 ರನ್ ಗಳಿಸಿದ್ದ ಇಂಗ್ಲೆಂಡ್ನ ಜಾನ್ ಎಡ್ರಿಕ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಈ ಪಂದ್ಯದ ಜನಪ್ರಿಯತೆಯನ್ನು ಅರ್ಥ ಮಾಡಿಕೊಂಡು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ 1972ರ ಆಗಸ್ಟ್ನಲ್ಲಿ ಎರಡನೇ ಏಕದಿನ ಪಂದ್ಯಕ್ಕೆ ಆತಿಥ್ಯ ವಹಿಸಿಕೊಂಡಿತು. ಇದರಲ್ಲಿ ಇಂಗ್ಲೆಂಡ್ ಗೆದ್ದಿತು. ಬಳಿಕ ಇಂಗ್ಲೆಂಡ್ 1975ರಲ್ಲಿ ಮೊಟ್ಟಮೊದಲ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯನ್ನೂ ಆಯೋಜಿಸಿತು. ಈ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡ ಚಾಂಪಿಯನ್ ಆಯಿತು.