IPL 2020: ಇಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಸಮರ
ಮತ್ತೆ ಇಂದು ಈ ಎರಡೂ ತಂಡಗಳು ಮುಖಾಮುಖಿ

ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ 2020ರ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಸದ್ಯದ ಪರಿಸ್ಥಿತಿಯಲ್ಲಿ ಅಂಕಪಟ್ಟಿಯ ಕೊನೆ ಸ್ಥಾನದಲ್ಲಿದೆ. ಅಂದು ಚೆನ್ನೈ ವಿರುದ್ಧ ಸೋತಿದ್ದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಹೊಸ್ತಿಲಿಗೆ ಬಂದು ನಿಂತಿದೆ.
ಮತ್ತೆ ಇಂದು ಈ ಎರಡೂ ತಂಡಗಳು ಮುಖಾಮುಖಿಯಾಗಲಿದ್ದು, ಒಟ್ಟು ಒಂಬತ್ತು ಪಂದ್ಯಗಳನ್ನು ಆಡಿರುವ ಮುಂಬೈ ಇಂಡಿಯನ್ಸ್ ತಂಡ 6ರಲ್ಲಿ ಗೆದ್ದು, 3ರಲ್ಲಿ ಸೋತಿದೆ. ಆದರೆ, ಮಹೇಂದ್ರ ಸಿಂಗ್ ಧೋನಿ ಟೀಮ್ 10 ಪಂದ್ಯಗಳನ್ನು ಆಡಿ 3 ಗೆದ್ದು, 7ರಲ್ಲಿ ಸೋತಿದೆ.
ಸದ್ಯ ಪಂದ್ಯದಲ್ಲಿ ಎನ್. ಜಗದೀಶನ್ ಮತ್ತು ಇತರ ಯುವ ಆಟಗಾರರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಕೇದಾರ್ ಜಾಧವ್, ಅಂಬಟಿ ರಾಯುಡು ಅವರಂತಹ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಆದರೆ, ಬೌಲಿಂಗ್ನಲ್ಲಿ ದೀಪಕ್ ಚಾಹರ್. ಸ್ಯಾಮ್ ಕರನ್, ಕರ್ಣ ಶರ್ಮಾ ಅವರು ಉತ್ತಮ ಫಾರ್ಮ್ನಲ್ಲಿದ್ದಾರೆ. ತಂಡದ ಪರಿಸ್ಥಿತಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಅವರಲ್ಲಿದೆ.
ಇನ್ನು ಕಳೆದ ಒಂದು ತಿಂಗಳ ಅವಧಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ತಂಡವು ಎಲ್ಲ ವಿಭಾಗಗಳಲ್ಲಿಯೂ ಬಲಿಷ್ಠವಾಗಿರುವುದನ್ನು ಸಾಬೀತುಪಡಿಸಿದೆ. ಬ್ಯಾಟಿಂಗ್ ವಿಭಾಗದಲ್ಲಿ 8 ಮಂದಿವರೆಗೂ ಬ್ಯಾಟ್ ಬೀಸುವ ಸಾಮರ್ಥ್ಯ ಹೊಂದಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬೂಮ್ರಾ, ಕೃಣಾಲ್ ಪಾಂಡ್ಯ ಅವರ ಜಾದೂ ಮುಂದುವರೆಯುವ ಸಾಧ್ಯತೆಯಿದೆ.
ಕಳೆದ ಪಂದ್ಯದಲ್ಲಿ ಮುಂಬೈ ಡಬಲ್ ಸೂಪರ್ ಓವರ್ನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು. ಇದು ಮುಂಬೈ ತಂಡದ ಜಿದ್ದಾಜಿದ್ದಿನ ಹೋರಾಟಕ್ಕೊಂದು ನಿದರ್ಶನ. ಆದ್ದರಿಂದ ಚೆನ್ನೈ ಅಂಕಪಟ್ಟಿಯಲ್ಲಿ ತುಸು ಮೇಲೆರಬೇಕಾದರೆ ಮುಂಬೈ ಎದುರು ತನ್ನೆಲ್ಲ ಸಾಮರ್ಥ್ಯವನ್ನು ಪಣಕ್ಕೊಡ್ಡುವ ಸವಾಲು ಇದೆ.