IPL 2020: ಇಂದು ಮುಂಬೈ ವಸರ್ಸ್ ಪಂಜಾಬ್ ತಂಡಗಳ ನಡುವೆ ಕಾದಾಟ, ಯಾರಿಗೆ ಒಲಿಯಲಿದೆ ಜಯ?
ಇಂದು ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ ಇಲೆವನ್ ಪಂಜಾಬ್ ತಂಡಗಳು ಮುಖಾಮುಖಿಯಾಗಲಿವೆ.

ಅಬುಧಾಬಿ: ಐಪಿಎಲ್ 2020, ಇಂದು ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ ಇಲೆವನ್ ಪಂಜಾಬ್ ತಂಡಗಳು ಮುಖಾಮುಖಿಯಾಗಲಿದ್ದು, ಎರಡು ತಂಡಗಳು ಜಯದ ಹಾದಿಗೆ ಮರಳಲು ಪ್ರಯತ್ನಿಸಲಿವೆ. ಇವೆರೆಡು ತಂಡಗಳಲ್ಲಿಯೂ ಬ್ಯಾಟಿಂಗ್ ಬಲ ಇರುವ ಕಾರಣ ಈ ಪಂದ್ಯದಲ್ಲಿ ರನ್ ಹೊಳೆ ಹರಿಯುವ ಸಾಧ್ಯತೆ ಇದೆ.
ಭಾನುವಾರ ನಡೆದಿದ್ದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 223 ರನ್ ಟಾರ್ಗೇಟ್ ನೀಡಿತ್ತು. ಈ ಮೊತ್ತವನ್ನು ಯಶಸ್ವಿಯಾಗಿ ಬೆನ್ನತ್ತಿದ ಎದುರಾಳಿಗಳು ದಾಖಲೆಯೊಂದಿಗೆ ಗೆದ್ದಿದ್ದರು. ಸೋಮವಾರ ನಡೆದಿದ್ದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 202 ರನ್ಗಳ ಗೆಲುವಿನ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಟೈ ಆಗಿ, ಸೂಪರ್ ಓವರ್ನಲ್ಲಿ ಸೋಲು ಎಡವಿದ್ದರು.
ಮುಂಬೈ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತಿದ್ದರೂ ಚೇತರಿಸಿಕೊಂಡು ಕೋಲ್ಕತ್ತ ಎದುರು ಗೆಲುವು ಸಾಧಿಸಿತ್ತು. ಆರ್ಸಿಬಿ ಎದುರಿನ ಪಂದ್ಯದಲ್ಲಿ ಇಶಾನ್ ಕಿಶನ್ ಮತ್ತು ಕೀರನ್ ಪೊಲಾರ್ಡ್ ಕೊನೆಯ ವರೆಗೂ ಹೋರಾಟ ನಡೆಸಿದ್ದರು. ಆದರೆ, ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.
ಮುಂಬೈ ತಂಡ ಬಲಿಷ್ಠ ಬ್ಯಾಟಿಂಗ್ ಬಳಗವನ್ನೇ ಹೊಂದಿದೆ. ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳಾಗಿ ಭರವಸೆ ಮೂಡಿಸಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಎದುರಾಳಿ ಬೌಲರ್ಗಳನ್ನು ದಂಡಿಸಲು ಆಲ್ರೌಂಡರ್ ಕೀರನ್ ಪೊಲಾರ್ಡ್ ಮತ್ತು ಹಾರ್ದಿಕ್ ಪಾಂಡ್ಯ ಇದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬೂಮ್ರಾ ಸಾಮರ್ಥ್ಯಕ್ಕೆ ತಕ್ಕಂತೆ ಮಿಂಚಲು ಆಗಲಿಲ್ಲ ಎಂಬುದು ಟೀಂ ಚಿಂತೆಯಾಗಿದೆ. ಬೂಮ್ರಾ ಇಲ್ಲಿಯ ತನಕ ಆಡಿರುವ ಮೂರು ಪಂದ್ಯಗಳಲ್ಲಿ ಕೇವಲ ಮೂರು ವಿಕೆಟ್ ಪಡೆದುಕೊಂಡಿದ್ದಾರೆ.
ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಕೂಡ ಹೋರಾಟ ನಡೆಸಿ ಗೆಲುವಿನ ನಗೆ ಬೀರಲು ವಿಫಲವಾಗಿತ್ತು. ರಾಜಸ್ಥಾನ ರಾಯಲ್ಸ್ ಎದುರಿನ ಪಂದ್ಯದಲ್ಲಿ ರಾಹುಲ್ ತೆವಾಟಿಯಾ ಅವರ ಸ್ಫೋಟಕ ಬ್ಯಾಟಿಂಗ್ಗೆ ತಡೆ ಹಾಕಲು ಪಂಜಾಬ್ ತಂಡದ ಬೌಲರ್ಗಳಿಗೆ ಸಾಧ್ಯವಾಗಲಿಲ್ಲ. ಮೊಹಮ್ಮದ್ ಶಮಿ ಮೂರು ವಿಕೆಟ್ ಪಡೆದಿದ್ದರೂ 53 ರನ್ ನೀಡಿ ದುಬಾರಿ ಬೌಲರ್ ಎನ್ನಿಸಿಕೊಂಡರು. ಲೆಗ್ ಸ್ಪಿನ್ನರ್ ರವಿ ಬಿಷ್ನೋಯ್ ಮಾತ್ರ ಸ್ವಲ್ಪ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದರು.
ಕಿಂಗ್ಸ್ ಇಲೆವೆನ್ ಪಂಜಾಬ್ಗೆ ಕೆ.ಎಲ್.ರಾಹುಲ್ ಮತ್ತು ಮಯಂಕ್ ಅಗರವಾಲ್ ಬ್ಯಾಟಿಂಗ್ನಲ್ಲಿ ಲಯ ಉಳಿಸಿಕೊಂಡಿರುವುದು ತಂಡಕ್ಕೆ ಆತ್ಮವಿಶ್ವಾಸ ಹೆಚ್ಚಿಸಿದೆ. ಆರ್ಆರ್ ಎದುರಿನ ಪಂದ್ಯದಲ್ಲಿ ಈ ಜೋಡಿ ಮೊದಲ ವಿಕೆಟ್ಗೆ 183 ರನ್ಗಳ ಜೊತೆಯಾಟ ಆಡಿತ್ತು.