IPL 2020: ಸ್ಟೋಕ್ಸ್ ಮತ್ತು ಸ್ಯಾಮ್ಸನ್ ಭರ್ಜರಿ ಜೊತೆಯಾಟ ಮುಂಬೈ ವಿರುದ್ಧ ರಾಯಲ್ಸ್ಗೆ ಜಯ
ಪಂದ್ಯದ ಗೆಲುವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ಆ ವೃತ್ತಿಯಲ್ಲಿ ಪ್ಲೇ ಆಫ್ಗೆ ಲಗ್ಗೆಯಿಡುವ ಕನಸನ್ನು ಜೀವಂತವಾಗಿಸಿಕೊಂಡಿದೆ

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ 2020, ಮುಂಬೈ ಇಂಡಿಯನ್ಸ್ ತಂಡ ನೀಡಿದ 196 ರನ್ಗಳ ಟಾರ್ಗೆಟ್ಅನ್ನು ಬೆನ್ನಟ್ಟಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಅಲ್ರೌಂಡರ್ ಬೆನ್ ಸ್ಟೋಕ್ಸ್ ಮತ್ತು ಸಂಜು ಸ್ಯಾಮ್ಸನ್ ತಮ್ಮ ತಂಡಕ್ಕೆ ಎಂಟು ವಿಕೆಟ್ಗಳ ಅಂತರದಿಂದ ಗೆಲುವು ತಂದುಕೊಟ್ಟಿದ್ದಾರೆ. ಪಂದ್ಯದ ಗೆಲುವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ಆ ವೃತ್ತಿಯಲ್ಲಿ ಪ್ಲೇ ಆಫ್ಗೆ ಲಗ್ಗೆಯಿಡುವ ಕನಸನ್ನು ಜೀವಂತವಾಗಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಇಶಾನ್ ಕಿಶನ್ (37), ಸೂರ್ಯಕುಮಾರ್ ಯಾದವ್ (40), ಸೌರಭ್ ತಿವಾರಿ (37) ಮತ್ತು ಹಾರ್ದಿಕ್ ಪಾಂಡ್ಯ (ಅಜೇಯ 60) ಇವರುಗಳ ಬ್ಯಾಟಿಂಗ್ ಬಲದಿಂದ 20 ಓವರ್ಗಳಲ್ಲಿ ಐದು ವಿಕೆಟ್ಗಳನ್ನು ಕಳೆದುಕೊಂಡು ಮುಂಬೈ ತಂಡ 195 ರನ್ಗಳ ಬೃಹತ್ ಮೊತ್ತವನ್ನು ಗಳಿಸಿತ್ತು.
ರಾಜಸ್ಥಾನ್ ರಾಯಲ್ಸ್ ತಂಡ 195 ರನ್ಗಳ ಗುರಿ ಬೆನ್ನತ್ತಿದ ಆರ್ಆರ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ರಾಬಿನ್ ಉತ್ತಪ್ಪ (13) ಎರಡನೇ ಓವರ್ನಲ್ಲೇ ಪೆವಿಲಿಯನ್ ಸೇರಿಕೊಂಡರು. ಬಳಿಕ ಕ್ರೀಸ್ಗೆ ಬಂದ ನಾಯಕ ಸ್ಟೀವ್ ಸ್ಮಿತ್ ಕೇವಲ 11 ರನ್ ಗಳಿಸಿ ಮೈದಾನದಿಂದ ಹೊರ ನಡೆದರು. ರಾಯಲ್ಸ್ ಪಡೆಯಲ್ಲಿ 44 ರನ್ಗಳಿಗೆ 2 ವಿಕೆಟ್ ಪತನವಾಗಿದ್ದಾಗ ಜೊತೆಯಾದ ಬೆನ್ ಸ್ಟೋಕ್ಸ್ ಮತ್ತು ಸಂಜು ಸ್ಯಾಮ್ಸನ್ ಇವರಿಬ್ಬರು ಮುಂಬೈ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದರು. ಈ ಜೋಡಿ ಅಜೇಯ 152 ರನ್ ಕಲೆಹಾಕಿತು.
ಕೇವಲ 60 ಎಸೆತಗಳನ್ನು ಎದುರಿಸಿದ ಸ್ಟೋಕ್ಸ್ 14 ಬೌಂಡರಿ ಮತ್ತು 3 ಸಿಕ್ಸರ್ ಸಹಿತ 107 ರನ್ ಗಳಿಸಿಕೊಂಡರು. ಇದು ಐಪಿಎಲ್ನಲ್ಲಿ ಸ್ಟೋಕ್ಸ್ ಗಳಿಸಿದ ಎರಡನೇ ಶತಕ ಮತ್ತು ಈ ಆವೃತ್ತಿಯಲ್ಲಿ ದಾಖಲಾದ ಐದನೇ ಶತಕವಾಯಿತು. ಸ್ಟೋಕ್ಸ್ಗೆ ಉತ್ತಮ ಬೆಂಬಲ ನೀಡಿದ ಸಂಜು ಸ್ಯಾಮ್ಸನ್ ಕೇವಲ 31 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 54 ರನ್ ಗಳಿಸಿದರು. ಹೀಗಾಗಿ ರಾಯಲ್ಸ್ ತಂಡ ಇನ್ನೂ 10 ಎಸೆತಗಳು ಬಾಕಿ ಇರುವಂತೆಯೇ 196 ರನ್ ಗಳಿಸಿ ಜಯದ ನಗೆ ಬೀರಿತು.
ಈ ಪಂದ್ಯದಲ್ಲಿ ಸೋತರೂ ಮುಂಬೈ ಇಂಡಿಯನ್ಸ್ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಉಳಿದಿದೆ. ಇಂಡಿಯನ್ಸ್ ಪಡೆ ಆಡಿರುವ 11 ಪಂದ್ಯಗಳಲ್ಲಿ 7 ಗೆಲುವು ಸಾಧಿಸಿ 14 ಅಂಕಗಳನ್ನು ಹೊಂದಿದೆ