Top

IPL 2020: ಹ್ಯಾಟ್ರಿಕ್​ ಮ್ಯಾಚ್​ ಗೆಲ್ಲುವ ತವಕದಲ್ಲಿ ಆರ್​ಸಿಬಿ

ಎರಡು ತಂಡಗಳು ಅಂಕಪಟ್ಟಿಯಲ್ಲಿ ತಲಾ ಆರು ಗಳಿಸಿವೆ. ರನ್‌ರೇಟ್‌ನಲ್ಲಿ ಆರ್‌ಸಿಬಿಗಿಂತ ಡೆಲ್ಲಿ ಮುಂದಿದೆ. ಈ ಪಂದ್ಯದಲ್ಲಿ ಗೆದ್ದರೆ ಆರ್‌ಸಿಬಿಗೆ ಅಗ್ರಸ್ಥಾನಕ್ಕೇರುವ ಅವಕಾಶ ಇದೆ.

IPL 2020: ಹ್ಯಾಟ್ರಿಕ್​ ಮ್ಯಾಚ್​ ಗೆಲ್ಲುವ ತವಕದಲ್ಲಿ ಆರ್​ಸಿಬಿ
X

ದುಬೈ: ಇಂದು ಡೆಲ್ಲಿ ಕ್ಯಾಪಿಟಲ್ಸ್​ ಹಾಗೂ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡಗಳ ನಡುವೆ ಕದನ ನಡೆಯಲಿದ್ದು, ಆರ್​ಸಿಬಿ ತಂಡವು ಹ್ಯಾಟ್ರಿಕ್​ ಮ್ಯಾಚ್​​ ಗೆಲ್ಲುವ ತವಕದಲ್ಲಿರುವುದು ಸುಳ್ಳಲ್ಲ.

ಸದ್ಯ ಆರ್​ಸಿಬಿ ತಂಡವು ಈವರೆಗೆ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರು ಮ್ಯಾಚ್​​ ಗೆದ್ದಿರುವುದೇ ಅದಕ್ಕೆ ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ ಮತ್ತೊಂದು ಸಂತೋಷದ ವಿಚಾರವೆಂದರೆ, ರಾಜಸ್ಥಾನ ರಾಯಲ್ಸ್ ಎದುರು ಅರ್ಧಶತಕ ಗಳಿಸಿದ ಕೊಹ್ಲಿಯು ಫಾರ್ಮ್‌ಗೆ ಮರಳಿರುವುದು ತಂಡದ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಆದರೆ, ಇದೀಗ ತಂಡದ ಮುಂದೆ ಕಠಿಣ ಸವಾಲು ಇದೆ.

ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಎದುರು ವಿರಾಟ್ ಬಳಗದ ಸತ್ವಪರೀಕ್ಷೆ ನಡೆಯುವುದು ಖಚಿತ. ಈ ಟೂರ್ನಿಯಲ್ಲಿ ಡೆಲ್ಲಿ ಮತ್ತು ಬೆಂಗಳೂರು ತಂಡದ ಸಾಧನೆ ಸಮ-ಬಲವಾಗಿದೆ. ಎರಡು ತಂಡಗಳು ಅಂಕಪಟ್ಟಿಯಲ್ಲಿ ತಲಾ ಆರು ಗಳಿಸಿವೆ. ರನ್‌ರೇಟ್‌ನಲ್ಲಿ ಆರ್‌ಸಿಬಿಗಿಂತ ಡೆಲ್ಲಿ ಮುಂದಿದೆ. ಈ ಪಂದ್ಯದಲ್ಲಿ ಗೆದ್ದರೆ ಆರ್‌ಸಿಬಿಗೆ ಅಗ್ರಸ್ಥಾನಕ್ಕೇರುವ ಅವಕಾಶ ಇದೆ.

ಡೆಲ್ಲಿ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದೆ. ಪೃಥ್ವಿ ಶಾ, ಶ್ರೇಯಸ್ ಅಯ್ಯರ್, ಶಿಖರ್ ಧವನ್, ರಿಷಭ್ ಪಂತ್ ಅವರ ಆಟದಿಂದಾಗಿ ಕಳೆದ ಪಂದ್ಯದಲ್ಲಿ ತಂಡವು 228 ರನ್ ಗಳಿಸಿತ್ತು. ಮಾರ್ಕಸ್ ಸ್ಟೋಯಿನಿಸ್, ಶಿಮ್ರೊನ್ ಹೆಟ್ಮೆಯರ್ ರನ್‌ಗಳ ಕಾಣಿಕೆ ನೀಡಬಲ್ಲವರು.

ಬೌಲಿಂಗ್ ವಿಭಾಗದಲ್ಲಿ ರಬಾಡ, ಎನ್ರಿಚ್ ನೋರ್ಟಿಯೆ ಮತ್ತು ಸ್ಪಿನ್ನರ್‌ ಆರ್.ಅಶ್ವಿನ್ ರನ್‌ಗಳನ್ನು ನಿಯಂತ್ರಿಸುವಲ್ಲಿ ಯಶಸ್ಸು ಸಾಧಿಸಿದರೆ ಎದುರಾಳಿಗಳ ನಡುಕ ಶುರುವಾಗಲಿದೆ. ಏಕೆಂದರೆ ಆರ್‌ಸಿಬಿಯ ಆರಂಭಿಕ ಬ್ಯಾಟ್ಸ್‌ಮನ್, ಕರ್ನಾಟಕದ ದೇವದತ್ತ ಪಡಿಕ್ಕಲ್ ಈಗಾಗಲೇ ಮೂರು ಅರ್ಧಶತಕಗಳನ್ನು ದಾಖಲಿಸಿದ್ದಾರೆ.

ಪದಾರ್ಪಣೆಯ ಐಪಿಎಲ್‌ನಲ್ಲಿ 20 ವರ್ಷದ ದೇವದತ್ತ ತಮ್ಮ ನಾಯಕನ ಮನಗೆದ್ದಿದ್ದಾರೆ. ಆ್ಯರನ್ ಫಿಂಚ್, ಎಬಿ ಡಿವಿಲಿಯರ್ಸ್ ಕೂಡ ಉತ್ತಮ ಲಯದಲ್ಲಿದ್ದಾರೆ. ಈ ಪಂದ್ಯದಲ್ಲಿಯೂ ಪಾರ್ಥಿವ್ ಪಟೇಲ್‌ಗೆ ಅವಕಾಶ ಕೊಡುವ ಸಾಧ್ಯತೆ ಕಡಿಮೆ ಇದೆ.

ಈ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್‌ ಗಳಿಸಿರುವ ಸ್ಪಿನ್ನರ್ ಯಜುವೇಂದ್ರ ಚಾಹಲ್, ನವದೀಪ್ ಸೈನಿ, ಶ್ರೀಲಂಕಾದ ಇಸುರು ಉಡಾನ, ವಾಷಿಂಗ್ಟನ್ ಸುಂದರ್ ಮತ್ತು ಶಿವಂ ದುಬೆ ಅವರ ಮೇಲೆ ಬೌಲಿಂಗ್ ಪಡೆ ಅವಲಂಬಿತವಾಗಿದೆ

Next Story

RELATED STORIES