IPL 2020: ಇಂದು ಮುಂಬೈ ಇಂಡಿಯನ್ಸ್ ವಸರ್ಸ್ ರಾಜಸ್ಥಾನ ರಾಯಲ್ಸ್ ತಂಡಗಳ ನಡುವೆ ಸಮರ
ಮುಂಬೈ ವಿರುದ್ಧ ಆರ್ಆರ್ ತಂಡ ಸತತ ಮೂರನೇ ಸೋಲು ತಪ್ಪಿಸಿಕೊಳ್ಳುವುದಕ್ಕೆ ಹೋರಾಟ ನಡೆಸಲಿದೆ

ಅಬುಧಾಬಿ: ಇಂಡಿಯನ್ ಪ್ರಿಮೀಯರ್ ಲೀಗ್ 2020, ಇಂದು ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳ ನಡುವೆ ಪಂದ್ಯ ನಡೆಯಲಿದ್ದು, ಮುಂಬೈ ವಿರುದ್ಧ ಆರ್ಆರ್ ತಂಡ ಸತತ ಮೂರನೇ ಸೋಲು ತಪ್ಪಿಸಿಕೊಳ್ಳುವುದಕ್ಕೆ ಹೋರಾಟ ನಡೆಸಲಿದೆ.
ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಮುಂಬೈ ಬಾಯ್ಸ್ ಸೋತು ನಿರಾಸೆಗೊಂಡಿದ್ದರು ಆದರೆ ಎರಡನೇ ಪಂದ್ಯವನ್ನು ಗೆಲ್ಲುವ ಮೂಲಕ ಜಯದ ಲಯಕ್ಕೆ ಮರಳಿದರು. ಮೂರನೇ ಪಂದ್ಯದಲ್ಲಿ ಜಸ್ಟ್ ಮಿಸ್ ಅನ್ನುವ ಹಾಗೇ ಪಂದ್ಯ ಕೈಚೆಲ್ಲಿದರು. ಇದಾದ ಬಳಿಕ ಕಳೆದ ಎರಡು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಸಂಪೂರ್ಣ ಆಧಿಪತ್ಯ ಸ್ಥಾಪಿಸಿ ಜಯ ಗಳಿಸಿತ್ತು.
ಇನ್ನು ರಾಜಸ್ಥಾನ ರಾಯಲ್ಸ್ ತಂಡ ಮೊದಲ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಭರ್ಜರಿ ಸ್ಟಾರ್ಟ್ಅಪ್ ಮಾಡಿ ಗೆಲುವಿನ ಸಂಭ್ರಮದ ಅಲೆಯಲ್ಲಿ ತೇಲಿತ್ತು. ಕ್ರಮವಾಗಿ ಎರಡು ಪಂದ್ಯಗಳಲ್ಲಿ ಸೋಲಿನ ದವಡೆಗೆ ಸಿಲುಕಿತ್ತು. ಕಳೆದ ಶನಿವಾರ ನಡೆದ ಪಂದ್ಯದಲ್ಲಂತೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ರಾಜಸ್ಥಾನ ಎಂಟು ವಿಕೆಟ್ಗಳಿಂದ ಸೋತಿತ್ತು. ಇವತ್ತು ಅದೇ ಮೈದಾನದಲ್ಲಿ ಇಂಡಿಯನ್ಸ್ ತಂಡವನ್ನು ಎದುರಿಸಬೇಕಾಗಿದೆ.
ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಸಮಬಲ ಸಾಮರ್ಥ್ಯ ತೋರಲು ಸಾಧ್ಯವಾಗುತ್ತಿರುವುದು ಮುಂಬೈ ಇಂಡಿಯನ್ಸ್ ಯಶಸ್ಸಿಗೆ ಪ್ರಮುಖ ಕಾರಣ. ರೋಹಿತ್ ಶರ್ಮಾ, ಕ್ವಿಂಟನ್ ಡಿ ಕಾಕ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಕೀರನ್ ಪೊಲಾರ್ಡ್ ಮತ್ತು ಇಶಾನ್ ಕಿಶನ್ ಬ್ಯಾಟಿಂಗ್ ಬಲದಿಂದ ರನ್ಗಳು ಸರಾಗವಾಗಿ ಹರಿದು ಬರುತ್ತಿವೆ. ಅಂತಿಮ ಓವರ್ಗಳಲ್ಲಿ ಹಾರ್ದಿಕ್ ಪಾಂಡ್ಯ ಸಾಕಷ್ಟು ರನ್ ತಂದುಕೊಡುತ್ತಿದ್ದಾರೆ.
ಜೇಮ್ಸ್ ಪ್ಯಾಟಿನ್ಸನ್, ಜಸ್ಪ್ರೀತ್ ಬೂಮ್ರಾ ಮತ್ತು ಟ್ರೆಂಟ್ ಬೌಲ್ಟ್ ಅವರ ಜೊತೆ ಹಾರ್ದಿಕ್ ಪಾಂಡ್ಯ ಕೂಡ ಸೇರಿ ತಂಡದ ಬೌಲಿಂಗ್ ವಿಭಾಗವೂ ಗಟ್ಟಿಯಾಗಿದೆ.