IPL 2020: ಕೆಕೆಆರ್ ತಂಡದ ವಿರುದ್ಧ ಸೇಡು ತೀರಿಸಿಕೊಳ್ಳುತ್ತ ಧೋನಿ ಟೀಂ ಚಿತ್ತ
ಅಂಕಪಟ್ಟಿಯಲ್ಲಿ 12 ಗಳಿಸಿಕೊಂಡಿರುವ ಕೆಕೆಆರ್ ತಂಡ ಪ್ಲೇ ಆಫ್ ಕನಸು ನಿಜವಾಗಬೇಕಾದ್ರೆ ಮುಂದೆ ತಾನು ಎದುರಿಸುವ ಎದುರಾಳಿ ತಂಡಗಳನ್ನು ಜಯಿಸಬೇಕಾದ ಒತ್ತಡದಲ್ಲಿದೆ

ದುಬೈ: 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ 2020 ಪ್ಲೇ ಆಫ್ನಿಂದ ಈಗಾಗಲೇ ಹೊರಬಿದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೋಲ್ಕತ್ತ ರೈಡರ್ಸ್ ತಂಡದ ಆಸೆಗೆ ತಣ್ಣೀರೆರಚುವ ಸಾಧ್ಯತೆಯಿದ್ದು, ಇಂದು ಈ ಎರಡೂ ತಂಡಗಳು ಮುಖಾಮುಖಿಯಾಗಲಿವೆ.
ಸದ್ಯ 12 ಪಂದ್ಯಗಳನ್ನು ಆಡಿರುವ ಕೋಲ್ಕತ್ತ ನೈಟ್ ರೈಡರ್ಸ್ ತಂಡವು 6ರಲ್ಲಿ ಗೆದ್ದು ಉಳಿದೆಲ್ಲಾ ಪಂದ್ಯವನ್ನು ಸೋತಿದೆ. ಅಂಕಪಟ್ಟಿಯಲ್ಲಿ 12 ಗಳಿಸಿಕೊಂಡಿರುವ ಕೆಕೆಆರ್ ತಂಡ ಪ್ಲೇ ಆಫ್ ಕನಸು ನಿಜವಾಗಬೇಕಾದ್ರೆ ಮುಂದೆ ತಾನು ಎದುರಿಸುವ ಎದುರಾಳಿ ತಂಡಗಳನ್ನು ಜಯಿಸಬೇಕಾದ ಒತ್ತಡದಲ್ಲಿದೆ.
ಆದರೆ, ಮಹೇಂದ್ರ ಸಿಂಗ್ ಧೋನಿ ನೇತೃತ್ವದ ತಂಡಕ್ಕೆ ಯಾವುದೇ ಒತ್ತಡವಿಲ್ಲ, ಚೆನ್ನೈ ಪ್ಲೇ ಆಫ್ನಿಂದ ಹೊರಬಿದ್ದಿದೆ. ಕಳೆದ ಪಂದ್ಯದಲ್ಲಿ ಚೆನ್ನೈ ಟೀಮ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿತ್ತು. ಅದೇ ಮಾದರಿಯಲ್ಲಿ ಇಲ್ಲಿಯೂ ಪಂದ್ಯ ಗೆದ್ದುಬಿಟ್ಟರೇ ಏಯಾನ್ ಮಾರ್ಗನ್ ನಾಯಕತ್ವದ ಕೆಕೆಆರ್ ಕನಸು ಭಂಗವಾಗುತ್ತದೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದು ಬೀಗುತ್ತಿದ್ದ ಕೆಕೆಆರ್ ತಂಡಕ್ಕೆ ಹೋದ ಪಂದ್ಯದಲ್ಲಿ ಕೆ.ಎಲ್. ರಾಹುಲ್ ನೇತೃತ್ವದ ಕಿಂಗ್ಸ್ ಇಲೆವನ್ ಪಂಜಾಬ್ ಟೀಂ ಮಣ್ಣುಮುಕ್ಕಿಸಿತ್ತು. ಆ ಪಂದ್ಯದಲ್ಲಿ ಕೆಕೆಆರ್ ಪರ ಶುಭಮನ್ ಗಿಲ್ ಮತ್ತು ಏಯಾನ್ ಮಾರ್ಗನ್ ಬಿಟ್ಟರೆ ಉಳಿದವರೆಲ್ಲರೂ ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸಿದ್ದರು. ಚೆನ್ನೈನ ದೀಪಕ್ ಚಾಹರ್, ಸ್ಯಾಮ್ ಕರನ್ ಮತ್ತು ಶಾರ್ದೂಲ್ ಠಾಕೂರ್ ಬಳಗದ ಮುಂದೆ ಮಿಂಚಿದರೆ ಎದುರಾಳಿ ತಂಡಕ್ಕೆ ಕಷ್ಟವಾಗುವುದು ಖಚಿತ.
ಮೊದಲ ಹಂತದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಜಯಿಸಿತ್ತು. ಧೋನಿ ತಂಡ ಆ ಸೋಲನ್ನು ಕೂಡ ಮರೆತ್ತಿಲ್ಲ ಹೀಗಾಗಿ ಅದಕ್ಕೆ ಸೇಡು ತೀರಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ. ಚೆನ್ನೈ ಟೀಂನಲ್ಲಿ ಯುವ ಆಟಗಾರ ಋತುರಾಜ್ ಗಾಯಕವಾಡ್, ಫಾಫ್ ಡುಪ್ಲೆಸಿ, ಅಂಬಟಿ ರಾಯುಡು, ಧೋನಿ. ಆಲ್ರೌಂಡರ್ಗಳಾದ ರವೀಂದ್ರ ಜಡೇಜ ಮತ್ತು ಸ್ಯಾಮ ಕರನ್ ಅವರು ಬ್ಯಾಟಿಂಗ್ನಲ್ಲಿಯೂ ಮಿಂಚಲೇಬೇಕು. ಕೋಲ್ಕತ್ತ ನೈಟ್ ರೈಡರ್ಸ್ ಬೌಲರ್ಗಳಾದ ವರುಣ ಚಕ್ರವರ್ತಿ, ಪ್ಯಾಟ್ ಕಮಿನ್ಸ್ , ಸುನೀಲ್ ನಾರಾಯಣ್ ಮತ್ತು ಲಾಕಿ ಫರ್ಗ್ಯುಸನ್ ಅವರನ್ನು ಚೆನ್ನೈ ಬ್ಯಾಟಿಂಗ್ ಪಡೆ ಎದುರಿಸಬೇಕಿದೆ.