IPL 2020: ಇಂದು ಚಾಂಪಿಯನ್ ಪಟ್ಟಕ್ಕಾಗಿ ಡೆಲ್ಲಿ, ಮುಂಬೈ ನಡುವೆ ಕದನ
ಚಾಂಪಿಯನ್ ಪಟ್ಟಕ್ಕಾಗಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಇಂದು ಕದನ ನಡೆಸಲಿವೆ

ದುಬೈ: ಕೊರೊನಾ ಸಂಕಷ್ಟದ ಪರಿಸ್ಥಿತಿ ಮಧ್ಯೆಯೂ ಈ ಬಾರಿಯ ಐಪಿಎಲ್(ಇಂಡಿಯನ್ ಪ್ರೀಮಿಯರ್ ಲೀಗ್) ಟೂರ್ನಿ ಕೊನೆಹಂತಕ್ಕೆ ಬಂದು ನಿಂತಿದ್ದು, ಚಾಂಪಿಯನ್ ಪಟ್ಟಕ್ಕಾಗಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಇಂದು ಕದನ ನಡೆಸಲಿವೆ.
ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ಗೆದ್ದರೆ ಐಪಿಎಲ್ ಪ್ರಶಸ್ತಿಗೆ ಮೊದಲ ಸಲ ಚಾಂಪಿಯನ್ ಆಗಲಿದ್ದು, ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ 5ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಲಿದೆ.
ಈ ಸಲ ಮುಂಬೈ ಇಂಡಿಯನ್ಸ್ ಆರಂಭದಿಂದಲೇ ಆಧಿಪತ್ಯ ಸ್ಥಾಪಿಸಿದ್ದು ಲೀಗ್ ಹಂತ ಮುಗಿದಾಗ ಪಾಯಿಂಟ್ ಪಟ್ಟಿಯ ಅಗ್ರಸ್ಥಾನದಲ್ಲಿತ್ತು. ಮೊದಲ ಕ್ವಾಲಿಫೈಯರ್ನಲ್ಲಿ ಗೆದ್ದು ಸುಲಭವಾಗಿ ಫೈನಲ್ ಪಂದ್ಯದಲ್ಲಿ ಸ್ಥಾನವನ್ನು ಭದ್ರಪಡಿಸಿಕೊಂಡಿತ್ತು. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಸೋಲು-ಗೆಲುವಿನಲ್ಲೂ ಪ್ರಶಸ್ತಿ ಸುತ್ತಿಗೆ ಸಜ್ಜಾಗಿದೆ.
ಲೀಗ್ ಹಂತದ ಮೊದಲಾರ್ಧದಲ್ಲಿ ಅಮೋಘ ಆಟವಾಡಿದ ತಂಡ ಎರಡನೇ ಹಂತದ ಕೆಲವೆಡೆ ಎಡವಿತ್ತು. ಆದರೆ, ಭಾನುವಾರ ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಎದುರು ಜಯ ಗಳಿಸಿ ಮುಂಬೈನ ಸವಾಲು ಎದುರಿಸಲು ಸಿದ್ಧವಾಗಿದೆ.
ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಒಟ್ಟಾರೆ 15 ಪಂದ್ಯಗಳನ್ನು ಆಡಿದ್ದು 10ರಲ್ಲಿ ಗೆದ್ದಿದೆ. ಡೆಲ್ಲಿ ಒಟ್ಟು 16 ಪಂದ್ಯ ಆಡಿದ್ದು ಒಂಬತ್ತರಲ್ಲಿ ಗೆಲುವು ಸಾಧಿಸಿದೆ.
ಹಿಟ್ಮ್ಯಾನ್ ರೋಹಿತ್ ಶರ್ಮಾ ಗಾಯಗೊಂಡು ಕಣಕ್ಕೆ ಇಳಿಯದೇ ಇರುವುದಕ್ಕೂ ಮುನ್ನ ಅಮೋಘ ಆಟವಾಡಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕ್ವಿಂಟನ್ ಡಿಕಾಕ್, ಸೂರ್ಯಕುಮಾರ್ ಯಾದವ್ ಮತ್ತು 22 ವರ್ಷದ ಯುವ ಬ್ಯಾಟ್ಸ್ಮನ್ ಇಶಾನ್ ಕಿಶನ್ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಪ್ರಬಲ ಶಕ್ತಿ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಕೀರನ್ ಪೊಲಾರ್ಡ್ ಕೂಡ ಇದ್ದಾರೆ. ಈ ಬ್ಯಾಟ್ಸ್ಮನ್ಗಳನ್ನು ನಿಯಂತ್ರಿಸಲು ಕಗಿಸೊ ರಬಾಡ, ಆ್ಯನ್ರಿಚ್ ನಾಕಿಯಾ, ರವಿಚಂದ್ರನ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಯಶಸ್ವಿಯಾದರೆ ಡೆಲ್ಲಿ ತಂಡದ ಪ್ರಶಸ್ತಿ ಆಸೆ ಈಡೇರಲಿದೆ.