ಭಾರತ-ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯ: ಟೀಂ ಇಂಡಿಯಾಗೆ ಸೋಲು
ಅಂತಿಮವಾಗಿ ನಿಗದಿತ 50 ಓವರ್ಗಳಲ್ಲಿ ಭಾರತ ತಂಡ 308 ರನ್ಗಳಿಗೆ 8 ವಿಕೆಟ್ ಕಳೆದುಕೊಂಡು ಎದುರಾಳಿ ತಂಡಕ್ಕೆ ಶರಣಾಯಿತು

Photo Source: BCCI Twitter
ಸಿಡ್ನಿ: ಭಾರತ ವಸರ್ಸ್ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿದ್ದು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 50 ಓವರ್ಗೆ ಆರು ವಿಕೆಟ್ ನಷ್ಟಕ್ಕೆ 374 ರನ್ಗಳಿಸಿ ಟೀಂ ಇಂಡಿಯಾಗೆ ಬೃಹತ್ ಗುರಿಯನ್ನು ಮುಂದಿಟ್ಟಿತು. ಇದನ್ನು ಬೆನ್ನಟ್ಟಿದ ಭಾರತ ತಂಡ 50 ಓವರ್ಗೆ 8 ವಿಕೆಟ್ ಕಳೆದುಕೊಂಡು 308 ರನ್ ಗಳಿಗೆ ತನ್ನ ಆಟವನ್ನು ಮುಗಿಸಿತು.
ಆಸ್ಟ್ರೇಲಿಯಾ ತಂಡದ ಪರ ಡೇವಿಡ್ ವಾರ್ನರ್ ಹಾಗೂ ಫಿಂಚ್ ಜೋಡಿ ಮೊದಲ ವಿಕೆಟ್ ನಷ್ಟಕ್ಕೆ 156 ರನ್ಗಳ ಬೃಹತ್ ಮೊತ್ತವನ್ನು ಕಲೆಹಾಕಿತ್ತು. ವಾರ್ನರ್ (69) ಗಳಿಸಿ ವಿಕೆಟ್ ಒಪ್ಪಿಸಿದ ನಂತರ ನಾಯಕ ಆರೋನ್ ಫಿಂಚ್ಗೆ ಸ್ಟೀವ್ ಸ್ಮಿತ್ ಜೊತೆಯಾದರು. ಈ ಇಬ್ಬರು ಕೂಡ ಶತಕದ ಜೊತೆಯಾಟ ಮಾತ್ರವಲ್ಲದೇ ಇಬ್ಬರೂ ಸೆಂಚುರಿ ಬಾರಿಸಿದರು. ಫಿಂಚ್(114) ಗಳಿಸಿದರೆ ಸ್ಮಿತ್ (105) ಗಳಿಸಿದರು. ಆಲ್ರೌಂಡರ್ ಮ್ಯಾಕ್ಸ್ವೆಲ್ ಕೇವಲ 19 ಎಸೆತಗಳನ್ನು ಎದುರಿಸಿ 45 ರನ್ ಸೇರಿಸಿ ಬೃಹತ್ ಮೊತ್ತಕ್ಕೆ ಉತ್ತಮ ಕೊಡುಗೆ ನೀಡಿದರು.
ಈ ಮೊತ್ತವನ್ನು ಟೀಮ್ ಇಂಡಿಯಾ ಬೆನ್ನಟ್ಟಲು ಆರಂಭಿಸಿತು. ಮೊದಲ ವಿಕೆಟ್ಗೆ ಅರ್ಧ ಶತಕದ ಜೊತೆಯಾಟವನ್ನು ನೀಡಿದ ಆರಂಭಿಕ ಬ್ಯಾಟ್ಸ್ಮನ್ಗಳಾದ ಮಯಾಂಕ್-ಧವನ್ ಜೋಡಿ ಇನ್ನೇನು ಉತ್ತಮವಾಗಿ ಪಂದ್ಯ ಸಾಗುತ್ತಿರುವಾಗಲೇ ಮಯಾಂಕ್ ಅವರ ವಿಕೆಟ್ ಪತನವಾಯಿತು.
ಮಯಾಂಕ್ ಅಗರ್ವಾಲ್ (22) ಗಳಿಸಿ ಔಟಾದ ಬಳಿಕ ಬಂದ ನಾಯಕ ವಿರಾಟ್ ಕೊಹ್ಲಿ (21) ಗಳಿಸಿ ಬೇಗ ವಿಕೆಟ್ ಒಪ್ಪಿಸಿ ಮೈದಾನದಿಂದ ಹೊರನಡೆದರು. ಶ್ರೇಯಸ್ ಅಯ್ಯರ್ ಬಂದ ಹಾಗೆಯೇ ಫೆವಿಲಿಯನ್ನತ್ತ ಮುಖಮಾಡಿದರು. ಕೆ.ಎಲ್. ರಾಹುಲ್ ಕೂಡ ಕೇವಲ (12) ರನ್ಗಳಿಗೆ ತಮ್ಮ ಆಟ ಮುಗಿಸಿದರು.
ಈ ನಡುವೆ ಹಾರ್ದಿಕ್ ಪಾಂಡ್ಯ ಆರಂಭಿಕ ಆಟಗಾರ ಧವನ್ಗೆ ಜೊತೆಯಾದರು. ಈ ಜೋಡಿ ಅದ್ಭುತವಾಗಿ ಇನ್ನಿಂಗ್ಸ್ ಕಟ್ಟಲು ಮುಂದಾದರು. ಈ ಜೋಡಿಯ ಆಟದಿಂದ ಭಾರತಕ್ಕೆ ಗೆಲುವು ತಂದುಕೊಡಬಹುದು ಎಂಬ ಕನಸಿತ್ತು. 128 ರನ್ಗಳ ಜೊತೆಯಾಟ ಆಡಿದ ಈ ಜೋಡಿ 74 ರನ್ಗಳಿಸಿದ್ದಾಗ ಶಿಖರ್ ಧವನ್ ವಿಕೆಟ್ ಉರುಳಿತು.
ಹಾರ್ದಿಕ್ ಪಾಂಡ್ಯಗೆ ಜಡೇಜಾ ಜೊತೆಯಾದರು. ಆದರೆ, ಈ ಹಂತದಲ್ಲಿ ಪಾಂಡ್ಯ 90 ರನ್ ಗಳಿಸಿ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿ ತಮ್ಮ ವಿಕೆಟ್ ಒಪ್ಪಿಸಿದರು. ಅಲ್ಲಿಗೆ ಭಾರತದ ಗೆಲುವಿನ ಕನಸು ಭಗ್ನವಾಯಿತು. ಅಂತಿಮವಾಗಿ ನಿಗದಿತ 50 ಓವರ್ಗಳಲ್ಲಿ ಭಾರತ ತಂಡ 308 ರನ್ಗಳಿಗೆ 8 ವಿಕೆಟ್ ಕಳೆದುಕೊಂಡು ಎದುರಾಳಿ ತಂಡಕ್ಕೆ ಶರಣಾಯಿತು.