Top

ಲಸಿಕೆಗೆ 100 ಕೋಟಿ ಕೊಡುವ ವಿಚಾರದ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ

ರಾಜಕಾಲುವೆ ಮೇಲೆ ಕಟ್ಟಡ ಕಟ್ಟಿಲ್ಲ ಅಂದರೆ ಹೇಗೆ(?) ಕಟ್ಟಿದ್ದರೆ ತನಿಖೆ ಮಾಡಲಿ. ಕಟ್ಟಿದ್ದಾರಾ(?) ಕಟ್ಟಿಲ್ಲವಾ(?) ಎಂಬುದನ್ನ ತನಿಖೆ ಮಾಡಲಿ.

ಲಸಿಕೆಗೆ 100 ಕೋಟಿ ಕೊಡುವ ವಿಚಾರದ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ
X

ಬೆಂಗಳೂರು: ಜಮೀರ್ ಎಲ್ಲರಿಗೆ ನೆರವು ನೀಡುತ್ತಿದ್ದಾರೆ. ಆಶಾ ಕಾರ್ಯಕರ್ತೆಯರು, ಎಲ್ಲ ಧರ್ಮದ ಅರ್ಚಕರು, ಪೌರಕಾರ್ಮಿಕರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಗುರುವಾರ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಐದು ಸಾವಿರ ನಗದು, ಫುಡ್ ಕಿಟ್ ಕೊಡುತ್ತಿದ್ದಾರೆ. ಕ್ಷೇತ್ರದಲ್ಲಿ ೨೫ ಸಾವಿರ ಲಸಿಕೆಯನ್ನು ಕೊಡುತ್ತಿದ್ದಾರೆ. ೧೮ ವರ್ಷ ಮೇಲ್ಪಟ್ಟವರಿಗೆ ಕೊಡುತ್ತಿದ್ದಾರೆ. ಸ್ವಂತ ಹಣದಿಂದ ನೀಡುತ್ತಿದ್ದಾರೆ. ಇದೊಂದು ಉತ್ತಮ ಕೆಲಸ ಎಂದು ಸಿದ್ದರಾಮಯ್ಯ ಅವರು ಚಾಮರಾಜಪೇಟೆ ಕಾಂಗ್ರೆಸ್​ ಶಾಸಕ ಜಮಿರ್​ ಅಹ್ಮದ್​ ಖಾನ್​ ಅವರ ಕೆಲಸಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಇದೇ ವೇಳೆ ವಿದ್ಯುತ್ ಬಿಲ್ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕೆಇಆರ್​ಸಿ ದರ ಏರಿಕೆಗೆ ಮನವಿ ಸಲ್ಲಿಸಿತ್ತು. ಹಾಗಾಗಿ ಸರಾಸರಿ ಯೂನಿಟ್​ಗೆ ಶೇ.೩೦ರಷ್ಟು ಹೆಚ್ಚಳವಾಗಿದ್ದು, ಸರ್ಕಾರ ಹೆಚ್ಚಳ ಮಾಡಿದೆ ಅಂತಿದ್ದಾರೆ. ಆದರೆ, ಇಂತಹ ಪರಿಸ್ಥಿತಿಯಲ್ಲಿ ಏರಿಸಿದ್ದು ಸರಿಯಲ್ಲ, ಜನಸಾಮಾನ್ಯರು ಊಟಕ್ಕಾಗಿ ಪರದಾಡುತ್ತಿದ್ದಾರೆ ಇದನ್ನ ನಾನು ಖಂಡಿಸುತ್ತೇನೆ. ಪೆಟ್ರೋಲ್ ಬೆಲೆಯನ್ನೂ ಹೆಚ್ಚಳ ಮಾಡ್ತಾನೇ ಇದ್ದಾರೆ. ಗ್ಯಾಸ್ ಬೆಲೆ ಹೆಚ್ಚಿಸಿದ್ದಾರೆ. ಅಚ್ಚೇದಿನ ಆಯೇಗಾ ಅಂತಾರೆ, ಇದೇ ಅಚ್ಚೇದಿನ್, ನಿರಂತರವಾಗಿ ಏರಿಸುತ್ತಲೇ ಬರುತ್ತಿದ್ದಾರೆ. ಅನೇಕ ರಾಜ್ಯಗಳಲ್ಲಿ ೧೦೦ ರೂ.ದಾಟಿದೆ. ಇಷ್ಟೊಂದು ಬೆಲೆ ಯಾವ ಕಾಲದಲ್ಲೂ ಇರಲಿಲ್ಲ ಎಂದು ಸರ್ಕಾರ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಾಗಿದೆ. ಹೆಚ್ಚು ಬೆಲೆ ಕೊಟ್ಟು ಕೇಂದ್ರದಿಂದ ತೆಗೆದುಕೊಳ್ತಿದ್ದಾರೆ. ಅದಾನಿ ಕಂಪನಿಯಿಂದ ವಿದ್ಯುತ್ ಖರೀದಿಸುತ್ತಿದ್ದಾರೆ. ಯಾಕೆ ಅವರಿಂದ ವಿದ್ಯುತ್ ಖರೀದಿಸಬೇಕು. ಇಲ್ಲೇ ಹೆಚ್ಚು ಉತ್ಪಾದನೆ ಆಗುತ್ತಿದೆಯಲ್ಲ ಎಂದು ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರದ ಸಮರ್ಥನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಪೆಟ್ರೋಲ್ ಬೆಲೆ ಕಡಿಮೆಯಿದೆ. ಕಡಿಮೆ ಇದ್ದಾಗ ಇಲ್ಲೂ ಕಡಿಮೆ ಮಾಡಬೇಕಲ್ವಾ(?) ಡಿಸೇಲ್ ಮೇಲೆ ೩೧.೮೦ ಪೈಸೆ ಹೆಚ್ಚಳ ಮಾಡಿದ್ದಾರೆ. ಪೆಟ್ರೋಲ್ ಮೇಲೆ ೩೨.೭೮ ಪೈಸೆ ಹೆಚ್ಚಳ ಮಾಡಿದ್ದಾರೆ. ಕೇಂದ್ರ ಸರ್ಕಾರ ಎಕ್ಸೈಸ್ ಡ್ಯೂಟಿ ಹೆಚ್ಚು ಮಾಡಿದೆ. ರಾಜ್ಯ ಸರ್ಕಾರ ಶೇ.೩೧ ಸೇಲ್ಸ್ ಟ್ಯಾಕ್ಸ್ ಹಾಕುತ್ತಿದೆ. ಸರ್ಕಾರ ಈ ಟ್ಯಾಕ್ಸ್​ಗಳನ್ನ ಕಡಿಮೆ ಮಾಡಲಿ. ಗ್ರಾಹಕರಿಗೆ ಅನುಕೂಲ ಮಾಡಿಕೊಡಬೇಕಲ್ವಾ(?) ಎಂದು ಪ್ರಶ್ನೆ ಮಾಡಿದ್ದಾರೆ.

ಸದ್ಯ ಪೆಟ್ರೋಲ್ ಬೆಲೆ ಹೆಚ್ಚಳ ಖಂಡಿಸಿ ಪ್ರತಿಭಟನೆ ನಡೆಸಲಾಗುವುದು. ಪ್ರತಿಭಟನೆ ಮಾಡುವಂತೆ ಎಐಸಿಸಿ ಸೂಚಿಸಿದೆ. ನಾಳೆಯಿಂದ ಐದು ದಿನಗಳ ಕಾಲ ಧರಣಿ ಮಾಡ್ತೇವೆ. ಪೆಟ್ರೋಲ್ ಬಂಕ್ ಮುಂದೆ ನಾವು ಧರಣಿ ಮಾಡ್ತೇವೆ. ದೇಶಾದ್ಯಂತ ಈ ಪ್ರತಿಭಟನೆಯನ್ನ ಮಾಡ್ತೇವೆ ಎಂದು ತಿಳಿಸಿದರು.

ಧಾರ್ಮಿಕ ದತ್ತಿ ಇಲಾಖೆಯಿಂದ ಆದೇಶ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಹಿಂದೂ ದೇವಾಲಯಗಳಿಗೂ ಕೊಡಿ, ಗುರುಧ್ವಾರ, ಚರ್ಚ್, ಮಸೀದಿಗಳಿಗೂ ಕೊಡಿ, ಧಾರ್ಮಿಕ ದತ್ತಿಯಿಂದ ಹಿಂದೆ ಕೊಟ್ಟಂತೆ ಕೊಡಿ, ಸರ್ಕಾರದ ಹಣ ಅಂದರೆ ಜನರ ಹಣ. ಸಾರ್ವಜನಿಕವಾಗಿ ಎಲ್ಲರಿಗೂ ಕೊಡಿ, ಜಾತಿ ಧರ್ಮ ಅಂತ ಬೇದಭಾವ ಮಾಡುವುದು ಬೇಡ ಎಂದಿದ್ದಾರೆ.

ಲಸಿಕೆಗೆ 100 ಕೋಟಿ ಕೊಡುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ವ್ಯಾಕ್ಸಿನ್ ಕೊಡುವುದು ಪಕ್ಷದ ಕಾರ್ಯಕ್ರಮವೇ, ಇದು ಪಕ್ಷದ ಕಾರ್ಯಕ್ರಮವಲ್ಲ, ನಿಮ್ಮ ಪಕ್ಷದ ಶಾಸಕರು ಕೊಡಲಿ ಬೇಡ ಅನ್ನುತ್ತೇವಾ(?) ಜಮೀರ್ ಅವರ ಹಣದಲ್ಲಿ ಕೊಡ್ತಿಲ್ವಾ(?) ನಾನು ನನ್ನ ಹಣದಲ್ಲಿ ಕೊಡ್ತಿಲ್ವಾ(?) ಇವರಿಂದ ನಾವು ಪಾಠ ಕಲಿಯಬೇಕಾ(?) ಜನರ ದುಡ್ಡನ್ನ ಜನರಿಗೆ ಕೊಡುವುದಲ್ವೇ(?) ಎಂದು ಮರು ಪ್ರಶ್ನೆ ಮಾಡಿದ್ದಾರೆ.

ರೋಹಿಣಿ ಸಿಂಧೂರಿ ಅವರು ಮಾಜಿ ಸಚಿವ ಸಾ.ರಾ.ಮಹೇಶ್ ವಿರುದ್ಧ ಮಾಡಿರುವ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು, ಇದರ ಬಗ್ಗೆ ಎನ್ ಕ್ವಯರಿ ಮಾಡಲಿ. ಅದೊಂದು ಪೊಲಿಟಿಕಲ್ ಮೊಟಿವೇಟೆಡ್. ಹಗರಣ ನಡೆದಿದ್ದರೆ ಸಮಗ್ರ ತನಿಖೆ ನಡೆಸಲಿ. ರಾಜಕಾಲುವೆ ಮೇಲೆ ಕಟ್ಟಡ ಕಟ್ಟಿಲ್ಲ ಅಂದರೆ ಹೇಗೆ(?) ಕಟ್ಟಿದ್ದರೆ ತನಿಖೆ ಮಾಡಲಿ. ಕಟ್ಟಿದ್ದಾರಾ(?) ಕಟ್ಟಿಲ್ಲವಾ(?) ಎಂಬುದನ್ನ ತನಿಖೆ ಮಾಡಲಿ. ತನಿಖೆ ಮಾಡಿದರೆ ತಪ್ಪಿದ್ದರೆ ತಿಳಿಯಲ್ವಾ(?) ಆಯಮ್ಮ ಸ್ಟೇಟ್​ಮೆಂಟ್ ಮಾಡಿದ್ದಾಳೆ. ಸಾ.ರಾ.ಮಹೇಶ್ ಸ್ಟೇಟ್​ಮೆಂಟ್ ಮಾಡಿದ್ದಾರೆ ಇದರ ಬಗ್ಗೆ ತನಿಖೆಯಾಗಲಿದೆ. ದಾಖಲೆಗಳು ಇದನ್ನ ಅರ್ಥ ಮಾಡಿಸುತ್ತವೆ ಎಂದು ಸಿದ್ದರಾಮಯ್ಯ ಅವರು ಮಾತನಾಡಿದ್ದಾರೆ.

Next Story

RELATED STORIES