ರಾಷ್ಟ್ರೀಯ ಪಕ್ಷದ ನಾಯಕನಾಗುವ ಸಾಮರ್ಥ್ಯ ರಾಹುಲ್ಗೆ ಇಲ್ಲ - ಹೆಚ್ ವಿಶ್ವನಾಥ್
ಸಚಿವ ಸ್ಥಾನಕ್ಕಾಗಿ ನಾನು ಸಿಎಂ ಮುಂದೆ ಬೇಡಿಕೆ ಇಟ್ಡಿಲ್ಲ, ಅವರೇ ತಿಳಿದು ಸಚಿವ ಸ್ಥಾನ ಕೊಡಬೇಕು
ಬೆಂಗಳೂರು: ಸಚಿವ ಸ್ಥಾನಕ್ಕಾಗಿ ನಾನು ಸಿಎಂ ಮುಂದೆ ಬೇಡಿಕೆ ಇಟ್ಡಿಲ್ಲ, ಅವರೇ ತಿಳಿದು ಸಚಿವ ಸ್ಥಾನ ಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಅವರು ಪರೋಕ್ಷವಾಗಿ ಸಚಿವ ಸ್ಥಾನಕ್ಕೆ ಮತ್ತೊಮ್ಮೆ ಬೇಡಿಕೆ ಇಟ್ಟಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ನಾನು ರಾಜ್ಯದ ಅತ್ಯಂತ ಹಿರಿಯ ರಾಜಕಾರಣಿ. 1978 ರಾಜಕೀಯ ಪ್ರವೇಶ ಮಾಡಿದವನು. ನನಗೆ ಸುದೀರ್ಘ ಆಡಳಿತದ ಅನುಭವವಿದೆ. ಈ ಅನುಭವವನ್ನು ಸರ್ಕಾರ ಬಳಸಿಕೊಳ್ಳಬೇಕು ಎಂದರು.
ಇನ್ನು ಮಂತ್ರಿಯಾಗಬೇಕೆಂದು, ನಾವು ಬಿಜೆಪಿಗೆ ಬೆಂಬಲ ಕೊಟ್ಟಿಲ್ಲ. ಉತ್ತಮ ಬದಲಾವಣೆಗಾಗಿ ಬೆಂಬಲ ನೀಡಿದ್ದೇವೆ. ರಾಜ್ಯದಲ್ಲಿ ನಾಲಿಗೆ ಮೇಲೆ ನಿಂತ ನಾಯಕನೆಂದರೆ ಅದು ಬಿಎಸ್ವೈ. ಅವರು ಕೊಟ್ಟ ಮಾತು ತಪ್ಪಲ್ಲ ಎಂಬ ನಂಬಿಕೆ ಇದೆ. ಯಡಿಯೂರಪ್ಪ ಸಿಎಂ ಆಗುವುದಕ್ಕೆ ನನ್ನ ಪಾತ್ರವೂ ಇದೆ ಎಂದು ಹೇಳಿದರು.
ದೇಶದಲ್ಲಿ ಕಾಂಗ್ರೆಸ್ ನಾಯಕತ್ವ ಬದಲಾವಣೆ ವಿಚಾರದ ಕುರಿತು ಮಾತನಾಡಿದ ಅವರು, ನಾನು ಕಾಂಗ್ರೆಸ್ನಲ್ಲಿದ್ದಾಗಲೇ ಈ ಬಗ್ಗೆ ಮಾತನಾಡಿದ್ದೆ. ರಾಹುಲ್ ಗಾಂಧಿ ಬದಲಾಗಿ ಪ್ರಿಯಾಂಕ ಗಾಂಧಿಗೆ ನಾಯಕತ್ವ ನೀಡುವಂತೆ ಸಲಹೆ ನೀಡಿದ್ದೆ. ಅತ್ಯಂತ ದೊಡ್ಡ ಗಣತಂತ್ರ ರಾಷ್ಟ್ರ ಭಾರತ. ಈ ದೇಶದ ರಾಷ್ಟ್ರೀಯ ಪಕ್ಷದ ನಾಯಕನಾಗುವ ಸಾಮರ್ಥ್ಯ ರಾಹುಲ್ಗೆ ಇಲ್ಲ. ಪ್ರಿಯಾಂಕ ಗಾಂಧಿಗೆ ಕೊಡುವುದು ಒಳಿತು ಎಂದು ತಮ್ಮ ಅಭಿಪ್ರಾಯ ತಿಳಿಸಿದರು.
ಇನ್ನು ಬೆಳಗಾವಿ ಸುವರ್ಣಸೌಧದಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆ ಆಗಲೇಬೇಕು. ರಾಯಣ್ಣ ಸ್ವಾತಂತ್ರ್ಯ ಹೋರಾಡಿದ ಅಪ್ರತಿಮ ವೀರ. ಅವರ ತ್ಯಾಗ, ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದೆ. ಅವರ ಪ್ರತಿಮೆ ಸ್ಥಾಪಿಸುವುದು ಸರ್ಕಾರದ ಕರ್ತವ್ಯ ಎಂದು ನುಡಿದರು.