ಕಟೀಲ್ ಅವರೇ ನಿಮಗೆ ತಾಕತ್ತಿಲ್ವಾ, ಏನು ಸಮಸ್ಯೆ ಭಯನಾ - ಡಿ.ಕೆ ಸುರೇಶ್
ಬಿಜೆಪಿ ಅಧ್ಯಕ್ಷ ನಳೀನ್ ಕಟೀಲ್ ಕೂಡ ಸಂಸದರು. ಕಟೀಲ್ ಅವರೇ ನಿಮಗೆ ತಾಕತ್ತಿಲ್ವಾ(?) ಏನು ಸಮಸ್ಯೆ, ಭಯನಾ(?) ಅದನ್ನಾದ್ರೂ ಜನರಿಗೆ ಹೇಳಿ
ಬೆಂಗಳೂರು: ಸಿಎಂ ನೆರೆ ಪೀಡಿತ ಪ್ರದೇಶಗಳಿಗೆ ವೈಮಾನಿಕ ಸಮೀಕ್ಷೆ ಮಾಡಿದರು ಇದು ಕೇವಲ ಕಣ್ಣೊರೆಸುವ ತಂತ್ರ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ ಸುರೇಶ್ ಅವರು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗುರುವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ರಾಜ್ಯದ ಜನರಿಗೂ ಇದರ ಬಗ್ಗೆ ಗೊತ್ತಾಗಿದೆ. ಕಳೆದ ಬಾರಿ ಅನೇಕ ಭರವಸೆ ಘೋಷಣೆ ನೀಡಿದ್ದರು. ಆ ಭರವಸೆಗಳು ಇದುವರೆಗೆ ಈಡೇರಿಲ್ಲ, ಅದಕ್ಕೆ ಜನ ಮೇಲೆ ಹಾರಡಬೇಡಿ ಕೆಳಕ್ಕೆ ಬನ್ನಿ ಅಂತಿದ್ದಾರೆ. ಸಿಎಂ, ಕಂದಾಯ ಸಚಿವರು ವಸ್ತುಸ್ಥಿತಿ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ.
ಇನ್ನು ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ಸಾಕು ಅನ್ನಿಸುವಂತಾಗಿದೆ. ಸರ್ಕಾರ ಉಳಿಸಿಕೊಳ್ಳಲು ಯಾರಿಗೆಲ್ಲ ಹಣ ಪಾವತಿ ಮಾಡಿದರು. ಅಂಥವರ ಮಾತನ್ನು ಮಾತ್ರ ಸಿಎಂ ಉಳಿಸಿಕೊಳ್ಳುತ್ತಿದ್ದಾರೆ. ಆದರೆ, ರೈತರು ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ ಎಂದರು.
ಸದ್ಯ ಜಿಎಸ್ಟಿ ಬಾಕಿ ಇದೆ, ರಾಜ್ಯದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ, ಬಿಜೆಪಿ ಅಧ್ಯಕ್ಷ ನಳೀನ್ ಕಟೀಲ್ ಕೂಡ ಸಂಸದರು. ಕಟೀಲ್ ಅವರೇ ನಿಮಗೆ ತಾಕತ್ತಿಲ್ವಾ(?) ಏನು ಸಮಸ್ಯೆ, ಭಯನಾ(?) ಅದನ್ನಾದ್ರೂ ಜನರಿಗೆ ಹೇಳಿ. ನಿಮ್ಮ ಸಂಸದರ ಮೂಲಕ ಸರ್ಕಾರಕ್ಕೆ ಒತ್ತಡ ತನ್ನಿ. ಸಾಲ ಮಾಡುವ ಅವಶ್ಯಕತೆ ಏನಿದೆ(?) ಸಾಲ ಅಂದ್ರೆ ಅದು ರಾಜ್ಯದ ಜನರ ಮೇಲೆ ಹೊರೆ ಹಾಕೋದು. ಬಿಜೆಪಿ ಸಂಸದರು ರಾಜ್ಯದ ಹಿತಕ್ಕೋಸ್ಕರ ಕೆಲಸ ಮಾಡಿ. ಚುನಾವಣೆ ರಾಜಕೀಯ ಬಿಡಿ. ವಿಧಾನಸಭೆ, ಲೋಕಸಭೆ ಚುನಾವಣೆ ದೂರವಿದೆ. ಸಂಸದರು ಕೇಂದ್ರದ ಮೇಲೆ ಒತ್ತಾಯ ಹೇರಬೇಕು. ನಾನು ಯಾವ ನಿಯೋಗದ ಜೊತೆಗೆ ಬೇಕಾದರೂ ಹೋಗುತ್ತೇನೆ ಎಂದು ಸಂಸದ ಡಿಕೆ ಸುರೇಶ್ ಅವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.