Top

ಸಂದೀಪ್​ ಉನ್ನಿಕೃಷ್ಣನ್ ಬಯೋಪಿಕ್​ನ ಫಸ್ಟ್​ ಲುಕ್ ರಿವೀಲ್

ಗನ್​ ಹಿಡಿದ ಮೇಜರ್.. ತೆರೆ ಮೇಲೆ ಬರಲಿದೆ ವೀರನ ಬದುಕು..!

ಸಂದೀಪ್​ ಉನ್ನಿಕೃಷ್ಣನ್ ಬಯೋಪಿಕ್​ನ ಫಸ್ಟ್​ ಲುಕ್ ರಿವೀಲ್
X

ಮೇಜರ್ ಸಂದೀಪ್ ಉನ್ನಿಕೃಷ್ಣನ್. ಭಾರತಾಂಬೆಯ ಹೆಮ್ಮೆಯ ಪುತ್ರ. ಈ ಹೆಸರು ಕೇಳುತ್ತಿದ್ದಂತೆ ಪ್ರತಿಯೊಬ್ಬ ಭಾರತಿಯನ ಮೈಮನ ಕೂಡ ರೋಮಾಂಚನವಾಗುತ್ತೆ. ಉಗ್ರರ ವಿರುದ್ಧ ವೀರಾವೇಶದಿಂದ ಹೋರಾಡಿ ಪ್ರಾಣತ್ಯಾಗ ಮಾಡಿದ ಈ ವೀರಪುತ್ರನ ಬದುಕು ತೆರೆಮೇಲೆ ಬರಲಿದೆ.

2008ರ ನವೆಂಬರ್‌ 26ರಂದು ಮುಂಬೈನ ತಾಜ್‌ ಹೋಟೆಲ್‌ ಮೇಲೆ ನಡೆದ ಉಗ್ರರ ದಾಳಿ, ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಈ ಉಗ್ರರ ದಾಳಿಯಲ್ಲಿ ತನ್ನ ಜೀವವನ್ನೇ ಪಣಕ್ಕಿಟ್ಟು ವೀರಾವೇಶದಿಂದ ಹೋರಾಡಿ ಹುತಾತ್ಮರಾದವರು ಮೇಜರ್ ಸಂದೀಪ್ ಉನ್ನಿಕೃಷ್ಣನ್. ಇದೀಗ ಈ ವೀರಪುತ್ರನ ಬದುಕು ತೆರೆಮೇಲೆ ಬರಲಿದೆ.

2008ರ ಮುಂಬೈ ದಾಳಿಯಲ್ಲಿ ತಾಜ್ ಹೋಟೆಲ್‍ನಲ್ಲಿ ಸಿಲುಕಿದವರನ್ನು ಕಾಪಾಡಲು ಹೋಗಿ ಉಗ್ರರ ಗುಂಡಿಗೆ ತನ್ನ ಪ್ರಾಣವನ್ನೇ ಬಲಿ ನೀಡಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಕಥೆ ತೆಲುಗಿನಲ್ಲಿ ಸಿನಿಮಾ ಆಗುತ್ತಿದೆ. ಸಂದೀಪ್ ಉನ್ನಿಕೃಷ್ಣನ್ ಅವರ ಜೀವನದ ಕೆಲವು ಅಂಶಗಳನ್ನೇ ಸ್ಫೂರ್ತಿಯಾಗಿ ಇಟ್ಟುಕೊಂಡು ನಟ ಮಹೇಶ್ ಬಾಬು ಮೇಜರ್ ಸಿನಿಮಾ ನಿರ್ಮಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕ್ಷಣಂ, ಗೂಡಚಾರಿ, ಎವರು, ಖ್ಯಾತಿಯ ಅಡಿವಿ ಶೇಷ್, ಸಂದೀಪ್​ ಉನ್ನಿಕೃಷ್ಣನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ 'ಮೇಜರ್' ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ.

ಕೈಯಲ್ಲಿ ಗನ್ ಹಿಡಿದು, ಕಮಾಂಡೋ ಗೆಟಪ್​ನಲ್ಲಿ ನಟ ಅಡಿವಿ ಶೇಷ್ ಫಸ್ಟ್​ಲುಕ್ ಪೋಸ್ಟರ್​ನಲ್ಲಿ ಸಖತ್ ಆಗಿಯೇ ಮಿಂಚಿದ್ದಾರೆ. ಶಶಿಕಿರಣ್ ಈ ಸಿನಿಮಾಗೆ ಆಕ್ಷನ್ ಕಟ್​ ಹೇಳುತ್ತಿದ್ದಾರೆ. ಇನ್ನು ನಿರ್ಮಾಪಕ ಮಹೇಶ್ ಬಾಬು, ಈ ಸಿನಿಮಾದ ಫಸ್ಟ್​ಲುಕ್ ಶೇರ್ ಮಾಡಿಕೊಂಡು, ಅಡಿವಿ ಶೇಷ್​ಗೆ ಬರ್ತ್​ಡೇ ವಿಶ್ ಮಾಡಿದ್ದಾರೆ. ಈ ಸಿನಿಮಾಗೆ ಮಹೇಶ್ ಜೊತೆ ಸೋನಿ ಪಿಕ್ಚರ್ಸ್ ಪ್ರೊಡಕ್ಷನ್ಸ್ ಸಂಸ್ಥೆ ಕೂಡ ಬಂಡವಾಳ ಹೂಡಿದೆ.

ಸಂದೀಪ್ ಉನ್ನಿಕೃಷ್ಣನ್ ಕೇರಳಕ್ಕೆ ಸೇರಿದವರಾದರೂ, ಅವರು ಬೆಳೆದದ್ದು ಹಾಗೂ ನೆಲೆಸಿದ್ದು ಬೆಂಗಳೂರಿನಲ್ಲಿ. ಈ ಘಟನೆ ನಡೆದು 12 ವರ್ಷಗಳಾದ ನಂತರ, ಇದೀಗ ತೆಲುಗಿನಲ್ಲಿ 'ಮೇಜರ್' ಹೆಸರಿನಲ್ಲಿ ತಯಾರಾಗುತ್ತಿದೆ. ಹಿಂದಿ ಮತ್ತು ತೆಲುಗು ಭಾಷೆಯಲ್ಲಿ ಸಿದ್ಧಗೊಳ್ಳಲಿರುವ ಈ ಸಿನಿಮಾದ ಶೇ.50ರಷ್ಟು ಚಿತ್ರೀಕರಣ ಲಾಕ್​ಡೌನ್​​ಗಿಂತ ಮೊದಲೇ ಕಂಪ್ಲೀಟ್ ಆಗಿತ್ತು. ಚಿತ್ರತಂಡ ಮುಂದಿನ ಶೂಟಿಂಗ್ ಪ್ಲಾನ್ ಮಾಡಿಕೊಂಡಿದೆ.

ಉನ್ನಿಕೃಷ್ಣನ್ ಪಾತ್ರಕ್ಕೆ ಅಡಿವಿ ಭರ್ಜರಿ ಪ್ರಿಪರೇಷನ್ ಮಾಡಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಮೇಜರ್ ಚಿತ್ರತಂಡದ ಕಡೆಯಿಂದ ರಿವೀಲ್​ ಆದ ಟೆಸ್ಟ್​​ ಲುಕ್​ನಲ್ಲಿ ಸಂದೀಪ್​ ಉನ್ನಿಕೃಷ್ಣನ್ ಅರ್ಧ ಮುಖದ ಜೊತೆಗೆ, ಅಡಿವಿ ಶೇಷ್ ​ಅವರ ಅರ್ಧ ಮುಖವನ್ನ ತೋರಿಸಲಾಗಿತ್ತು. ಈ ಟೆಸ್ಟ್​ ಲುಕ್​​​ಗೆ ಜನರು ಫಿದಾ ಆಗಿದರು. ಅಡಿವಿ ಶೇಷ್​​​​ ಡಿಟ್ಟೋ ಸಂದೀಪ್​ ಉನ್ನಿಕೃಷ್ಣನ್​ ಹಾಗೇ ಕಾಣಿಸುತ್ತಿದ್ದಾರೆ.

ಒಟ್ನಲ್ಲಿ ಭಾರತಾಂಬೆಯ ವೀರಪುತ್ರನ ಸಾಹಸಗಾಥೆ ತೆರೆಮೇಲೆ ಬರಲು ಸಿದ್ದವಾಗುತ್ತಿದೆ. ಹಿಂದಿ ಮತ್ತು ತೆಲುಗಿನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು ಸಂದೀಪ್​​​​​​​​ ಉನ್ನಿಕೃಷ್ಣನ್ ಬದುಕನ್ನು ತೆರೆಮೇಲೆ ನೋಡಲು ದೇಶಭಕ್ತರು ಕಾತರದಿಂದ ಕಾಯುತ್ತಿದ್ದಾರೆ.

Next Story

RELATED STORIES