Top

ಸೋಶಿಯಲ್​ ಮೀಡಿಯಾದಲ್ಲಿ ಚಂದನವನದ ತಾರೆಯರ ಹೊಸ ಚಾಲೆಂಜ್

ಗ್ರೀನ್​ ಇಂಡಿಯಾ ನಂತರ ಮತ್ತೊಂದು ಸಮಾಜಮುಖಿ ಚಾಲೆಂಜ್.

ಸೋಶಿಯಲ್​ ಮೀಡಿಯಾದಲ್ಲಿ ಚಂದನವನದ ತಾರೆಯರ ಹೊಸ ಚಾಲೆಂಜ್
X

ಸೋಶಿಯಲ್​ ಮೀಡಿಯಾದಲ್ಲಿ ಇತ್ತೀಚೆಗಂತೂ ಆ ಚಾಲೆಂಜ್​ ಈ ಚಾಲೆಂಜ್​ ಅಂತ ದಿನಕ್ಕೊಂದು ಹೊಸ ಚಾಲೆಂಜ್​ಗಳು ಬರ್ತಾನೇ ಇರುತ್ತೆ. ಆದರೆ, ನಿಜಕ್ಕೂ ಸಮಾಜಕ್ಕೆ ಒಳಿತಾಗೋ ಚಾಲೆಂಜ್​ವೊಂದನ್ನ ನಮ್ಮ ಚಂದನವನದ ತಾರೆಯರು ಶುರುಮಾಡಿದ್ದಾರೆ. ಈ ಹಿಂದೆ ಸೆಲಬ್ರೆಟಿಗಳು ಮಾಡಿದ ಗ್ರೀನ್​ ಇಂಡಿಯಾ ಚಾಲೆಂಜ್​ ಎಷ್ಟು ಒಳಿತಾಗಿತ್ತೋ ಈ ಚಾಲೆಂಜ್​ ಕೂಡ ಅಷ್ಟೇ ಸಮಾಜಮುಖಿಯಾಗಿದೆ.

ಸೋಶೀಯಲ್​ ಮೀಡಿಯಾ ಓಪನ್​ ಮಾಡಿದ್ರೆ ಸಾಕು. ಸ್ಯಾರಿ ಚಾಲೆಂಜ್, ಕಪಲ್​ ಚಾಲೆಂಜ್​, ಫಿಟ್ನೆಸ್ ಚಾಲೆಂಜ್ ಹೀಗೆ ಸಾಕಷ್ಟು ಚಾಲೆಂಜ್​ಗಳು ಕಣ್ಣಿಗೆ ಬೀಳ್ತವೆ. ಆದರೆ, ಕೆಲವು ಚಾಲೆಂಜ್​ಗಳು ಹಾಗಲ್ಲ. ನಿಜಕ್ಕೂ ಸಮಾಜಕ್ಕೆ ಒಳೀತನ್ನ ಉಂಟುಮಾಡುತ್ತೆ. ಅದರಲ್ಲಿ ಗ್ರೀನ್​ ಇಂಡಿಯಾ ಚಾಲೆಂಜ್​ ಕೂಡ ಒಂದು. ಬಾಲಿವುಡ್​ನಿಂದ ಸ್ಯಾಂಡಲ್​ವುಡ್​ವರೆಗೂ ಈ ಚಾಲೆಂಜ್​ ಇಂದಿಗೂ ನಡೀತಾನೆ ಇದೆ.

ಇದೀಗ ಇಂತದ್ದೇ ಒಂದು ಅದ್ಭುತ ಚಾಲೆಂಜ್​ ನಮ್ಮ ಚಂದನವನದಲ್ಲಿ ಶುರುವಾಗಿದೆ. ಕೊರೊನಾ ಮಹಾಮಾರಿ ಶುರುವಾದಾಗಿನಿಂದ ಸಾಕಷ್ಟು ಕ್ಷೇತ್ರಗಳಿಗೆ ಹೊಡೆತ ಬಿದ್ದಿವೆ. ಕೆಲಸ ಇಲ್ಲದಂತಾಗಿದೆ. ಸಣ್ಣ-ಪುಟ್ಟ ವ್ಯಾಪಾರಿಗಳ ಸ್ಥಿತಿಯಂತೂ ಕೇಳೋರೆ ಇಲ್ಲ. ಈ ರೀತಿ ಸಮಸ್ಯೆಗೊಳಗಾದೋರ ಪೈಕಿ ನೇಕಾರರ ಪರಿಸ್ಥಿತಿ ಕೂಡ ಹೇಳ ತೀರದ್ದಾಗಿದೆ. ಹಾಗಾಗಿ ನಮ್ಮ ನೇಕಾರರ ನೆರವಿಗೆ ನಿಂತಿದ್ದಾರೆ ಸ್ಯಾಂಡಲ್​ವುಡ್​ ಸೆಲೆಬ್ರೆಟಿಗಳು.

ನೇಕಾರರ ಬಳಿ ಬಟ್ಟೆ ಖರೀದಿ ಮಾಡಿ, ದೇಸಿಯ ಖಾದಿ ಬಟ್ಟೆ ತೊಡೋದ್ರಿಂದ ನಮ್ಮ ನೇಕಾರರನ್ನ ಉಳಿಸಿಬಹುದು ಅನ್ನೋ ನಿಟ್ಟಿನಲ್ಲಿ, ದೇಸಿ ಉಡುಪುಗಳನ್ನ ಖರೀದಿ ಮಾಡುವಂತೆ ಮನವಿ ಮಾಡಿದ್ದಾರೆ ಸೆಲೆಬ್ರೆಟಿಗಳು. ನಟ ದುನಿಯಾ ವಿಜಿಯ್​ ಕೂಡ ಈ ಬಗ್ಗೆ ದನಿಯೆತ್ತಿದ್ದು, "ನಾವು ಮಾತಾಡೋ ಭಾಷೆ ಕನ್ನಡ, ಕುಡಿಯೋ ನೀರು ಕಾವೇರಿ ನಿಂತಿರೋ ನೆಲ ಕರ್ನಾಟಕವಾಗಿರೋವಾಗ. ನಾವು ಹಾಕೋ ಬಟ್ಟೆ ಕೂಡ ಕನ್ನಡವಾಗಿರಬೇಕು. ಕೊರೋನಾ ಪಿಡುಗು ಶುರುವಾದಾಗಿನಿಂದ ದೇಸಿ ಸಂಸ್ಥೆಯ ನೇಕಾರರು ತಯಾರಿಸುವ ಬಟ್ಟೆ ಸುಮಾರಿದೆ. ಹನಿಹನಿಗೂಡಿದರೆ ಹಳ್ಳ ಅನ್ನೋಹಾಗೆ ನೀವೆಲ್ಲರೂ ಒಂದೊಂದು ಬಟ್ಟೆ ಖರೀದಿಸಿದರೂ ನಮ್ಮ ನೇಕಾರರ ಬೆವರಿನ ದುಡಿಮೆಗೆ ಹೆಗಲಾಗಿ ನಿಂತಂತೆ ಎಂದು ತಮ್ಮ ಸೋಶಿಯಲ್​ ಮೀಡಿಯಾ ಅಕೌಂಟ್​ನಲ್ಲಿ ಬರೆದುಕೊಂಡಿದ್ದಾರೆ. ಇನ್ನು ನಟ ದುನಿಯಾ ವಿಜಿ ಕೂಡ ಖಾದಿ ಬಟ್ಟೆ ತೊಟ್ಟು ಪೋಟೋವೊಂದನ್ನ ಪೋಸ್ಟ್ ಮಾಡಿದ್ದು, ಈ ಬಟ್ಟೆಗಳು ದೊರೆಯುವ ಏರಿಯಾಗಳನ್ನು ಕೂಡ ತಿಳಿಸಿದ್ದಾರೆ.

ದುನಿಯಾ ವಿಜಿ ಮಾತ್ರವಲ್ದೆ ನಟಿ ಪ್ರಿಯಾಂಕ ಉಪೇಂದ್ರ ಕೂಡ ದೇಸಿ ಬಟ್ಟೆ ತೊಟ್ಟು, ಫೋಟೋಗಳನ್ನ ಫೇಸ್​ಬುಕ್​ನಲ್ಲಿ ಅಪ್​ಲೋಡ್​ ಮಾಡಿದ್ದು, ಸುಮಾರು 800 ದೇಸಿ ಟ್ರಸ್ಟ್‌ನ ಕುಶಲಕರ್ಮಿಗಳ ಮಾರಾಟವು ಕುಂಠಿತಗೊಂಡಿದ್ದು, ಅಂದಾಜು 87000 ಮೀಟರ್ ಬಟ್ಟೆಗಳು ಮಾರಾಟವಾಗದೆ ಬಿದ್ದಿವೆ. ಹಾಗಾಗಿ ಈ ದೇಸಿ ಅಭಿಯಾನಕ್ಕೆ ಎಲ್ಲರೂ ಕೈ ಜೋಡಿಸಿ ಅಂತ ಹೇಳಿದ್ದಾರೆ.

ಇನ್ನು ನಟಿ ಆಶಿಕಾ ರಂಗನಾಥ್​ ಕೂಡ, ಕೈಮಗ್ಗ ಬಟ್ಟೆಗಳನ್ನ ಖರೀದಿಸಿ, ನೇಕಾರರ ಕಿರುನಗೆಗೆ ಸಹಾಯ ಮಾಡಿ ಅಂತ ಹೇಳಿದ್ದಾರೆ. ಸದ್ಯ ನಮ್ಮ ಸ್ಯಾಂಡಲ್​ವುಡ್​ ಸೆಲೆಬ್ರೆಟಿಗಳು ಶುರುಮಾಡಿರೋ ಈ ಅಭಿಯಾನ, ನಿಜಕ್ಕೂ ನೇಕಾರರ ಬದುಕನ್ನ ಮತ್ತೆ ಕಟ್ಟಿಕೊಡುವ ನಿಟ್ಟಿನಲ್ಲಿದೆ. ಕೇವಲ ಸೆಲೆಬ್ರೆಟಿಗಳು ಮಾತ್ರವಲ್ಲದೇ ಪ್ರತಿಯೊಬ್ಬರು ಕೂಡ ದೇಸಿ ಬಟ್ಟೆ ಖರೀದಿ ಮಾಡಿದ್ರೆ,ನೇಕಾರರ ಬದುಕು ಹಸನಾಗುತ್ತದೆ.

Next Story

RELATED STORIES