Top

'ಆಪರೇಷನ್ ಕಮಲ' ಪದದ ಜನಕ ಮಿಸ್ಟರ್​ ಬಿ.ಎಸ್​ ಯಡಿಯೂರಪ್ಪ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಇಂದು ಮೋದಿಯವರ ವಿರುದ್ಧ ವಾತಾವರಣವಿದೆ

ಆಪರೇಷನ್ ಕಮಲ ಪದದ ಜನಕ ಮಿಸ್ಟರ್​ ಬಿ.ಎಸ್​ ಯಡಿಯೂರಪ್ಪ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
X

ತುಮಕೂರು: ನಾನು ಎರಡು ದಿನ ಪ್ರಚಾರ ಮಾಡಿದ್ದೆ. ವಿಶೇಷವಾಗಿ ಯುವಕರು ಕಾಂಗ್ರೆಸ್​ಗೆ ಬೆಂಬಲಿಸಿದ್ದಾರೆ. ಹಿಂದೆ ಇಷ್ಟೊಂದು ಉತ್ಸಾಹ ನೋಡಿರಲಿಲ್ಲ. ಎಲ್ಲಾ ಜಾತಿಯ ಯುವಕರು ಕಾಂಗ್ರೆಸ್ ಹಿಂದೆ ನಿಲ್ತಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುರುವಾರ ಹೇಳಿದ್ದಾರೆ.

ತುಮಕೂರು ಜಿಲ್ಲೆಯ ಶಿರಾ ಉಪಚುನಾವಣೆ ಹಿನ್ನೆಲೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೊಟ್ಟ ಭರವಸೆಯನ್ನ ಮೋದಿಯವರು ಈಡೇರಿಸಲಿಲ್ಲ, ದೊಡ್ಡ ಆಶಾ ಗೋಪುರವನ್ನೇ ಅವರು ನಿರ್ಮಿಸಿದ್ದರು. ನಿರುದ್ಯೋಗಿ ಯುವಜನತೆ ಮೋದಿ ಮೇಲೆ ಭರವಸೆಯಿಟ್ಟಿದ್ದರು. ಆದ್ದರಿಂದ ಅವರನ್ನ ಬೆಂಬಲಿಸಿದ್ದರು. ಪ್ರಧಾನಿಯವರು ಅಧಿಕಾರಕ್ಕೆ ಬಂದು ಆರು ವರ್ಷವಾಯ್ತು. ಆದರೆ, ಯಾವುದೇ ಜನಪರ ಕೆಲಸ ಮಾಡಲಿಲ್ಲ. ಇಂದು ಮೋದಿಯವರ ವಿರುದ್ಧ ವಾತಾವರಣವಿದೆ ಎಂದರು.

5 ವರ್ಷಕ್ಕೆ 10 ಕೋಟಿ ಉದ್ಯೋಗ ಅಂದಿದ್ದರು. ಆದರೆ, ಯಾವ ಉದ್ಯೋಗವನ್ನ ಸೃಷ್ಟಿಸಲಿಲ್ಲ. ಪಕೋಡ ಮಾರಿ ಅಂತ ಯುವಕರಿಗೆ ಹೇಳಿದರು. ಅತ್ಯಂತ ಬೇಜವಾಬ್ದಾರಿ ಹೇಳಿಕೆಯನ್ನ ಕೊಟ್ಟಿದರು. ಇದರಿಂದ ಯುವಕರು ಭ್ರಮ ನಿರಸನಗೊಂಡಿದ್ದಾರೆ. ನೋಟ್​ಬ್ಯಾನ್ ಮಾಡಿದರು. ಜಿಎಸ್​ಟಿ ತಂದರು, ಕೊರೊನಾ ಬಂತು ಎಲ್ಲವೂ ಹೋಯ್ತು. ಕೈಗಾರಿಕೆಗಳೇ ಮುಚ್ಚಿಹೋದ್ವು. ಇದರಿಂದ ಯುವಕರು ನಮ್ಮಕಡೆ ನೋಡುತ್ತಿದ್ದಾರೆ ಎಂದಿದ್ದಾರೆ.

ಸಮ್ಮಿಶ್ರ ಸರ್ಕಾರವನ್ನ ಯಡಿಯೂರಪ್ಪ ಕೆಡವಿದರು. ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬಂದರು. ಆಪರೇಷನ್ ಕಮಲ ಪ್ರಾರಂಭವಾಗಿದ್ದು ಯಡಿಯೂರಪ್ಪ ಕಾಲದಿಂದ, 2008ರಲ್ಲೇ ಇದನ್ನ ಯಡಿಯೂರಪ್ಪ ತಂದರು. ದೇಶದ ಇತಿಹಾಸದಲ್ಲಿ ಆಪರೇಷನ್ ಕಮಲವೆಂಬ ಪದ ಮೊದಲಿಗೆ ಬಂತು. ಇದರ ಜನಕ ಮಿಸ್ಟರ್​ ಯಡಿಯೂರಪ್ಪ. ಬಿಎಸ್​ವೈ ವಿರುದ್ಧ ಸಿದ್ದರಾಮಯ್ಯ ಟೀಕಿಸಿದರು.

ಎರಡೂವರೆ ವರ್ಷದಿಂದ ಯಾವ ಕಾರ್ಯಕ್ರಮವಿಲ್ಲ, ನಮ್ಮ ಕಾರ್ಯಕ್ರಮಗಳು ಬಿಟ್ಟರೆ ಇಲ್ಲ, ನಮ್ಮ ಕೆಲವು ಕಾರ್ಯಕ್ರಮ ನಿಲ್ಲಿಸುತ್ತಿದ್ದಾರೆ. ಶಾದಿಭಾಗ್ಯ ನಿಲ್ಲಿಸಿದರು. 7 ಕೆ.ಜಿ ಅಕ್ಕಿಯನ್ನ 4 ಕೆ.ಜಿಗೆ ತಂದಿದ್ದಾರೆ. ಇಂದಿರಾ ಕ್ಯಾಂಟೀನ್ ಮುಚ್ಚೋಕೆ ಹೊರಟಿದ್ದಾರೆ. ಅನ್ನಭಾಗ್ಯದ ಅಕ್ಕಿ, ರಾಗಿ ಕಳಪೆ ಕೊಡುತ್ತಿದ್ದಾರೆ ಎಂದು ಶಿರಾದಲ್ಲಿರುವ ಹೆಣ್ಣು ಮಕ್ಕಳೇ ಹೇಳುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ನುಡಿದರು.

ಜೆಸಿಬಿ ಮೂಲಕ ಸಿಎಂ ಹಣ ಗೋರ್ತಿದ್ದಾರೆ ಅಂತ ಯತ್ನಾಳ್ ಹೇಳ್ತಾರೆ. ಯತ್ನಾಳ್ ಯಾರು(?) ಮಾಜಿ ಕೇಂದ್ರ ಸಚಿವರು. ಭ್ರಷ್ಟಾಚಾರ ಯಡಿಯೂರಪ್ಪನವರಿಗೆ ಅಚ್ಚು-ಮೆಚ್ಚಾಗಿದೆ. ಯಡಿಯೂರಪ್ಪ ಮಕ್ಕಳು ಜೆಸಿಬಿ ಮೂಲಕ ಗೋರ್ತಿದ್ದಾರೆ. ಟೆಂಡರ್ ಆಗಿದ್ದ ಕೆಲಸಗಳನ್ನೇ ರದ್ದು ಮಾಡಿದ್ದಾರೆ. 2.37 ಲಕ್ಷ ಕೋಟಿ ಬಜೆಟ್ ಖರ್ಚಾಗಬೇಕು. ಏನೇ ಕೆಲಸ ಕೇಳಿದ್ರೂ ದುಡ್ಡಿಲ್ಲ ಅಂತಾರೆ ಎಂದು ಸಿಎಂ ಬಿಎಸ್​ವೈ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇನ್ನು ಕೆಲವೊಂದು ಕೆಲಸ ಪರ್ಸೆಂಟೇಜ್ ಮೇಲೆ ಮಾರಿಕೊಳುತ್ತಿದ್ದಾರೆ. ಶೇ.10ರಷ್ಟು ಕೊಟ್ಟರೆ ಮಾತ್ರ ಅನುದಾನ ಸಿಗುತ್ತೆ. ಶಾಸಕರು ಹೇಳಿದ್ರೆ ಅನುದಾನ ಸಿಗಲ್ಲ. ಬಿಹಾರದಲ್ಲಿ ಮೋದಿ ಭ್ರಷ್ಟಾಚಾರ ವಂಶಪಾರಂಪರ್ಯ ಅಂದಿದ್ದಾರೆ. ಯಡಿಯೂರಪ್ಪ ಭ್ರಷ್ಟಾಚಾರ ಕಣ್ಣಿಗೆ ಕಾಣ್ತಿಲ್ವಾ(?) ಇಲ್ಲಾ ಯಡಿಯೂರಪ್ಪ ನೋಡಿ ಹೇಳಿರಬಹುದೇನೋ(?) ನಾ ಕಾವೂಂಗಾ ಕಾನೆದೂಂಗಾ ಅಂತಾರೆ. ಇಲ್ಲಿ ಲೂಟಿ ಹೊಡೆಯುತ್ತಿದ್ದಾರೆ. ಇದು ಮೋದಿಯವರ ಕಣ್ಣಿಗೆ ಕಾಣ್ತಿಲ್ವಾ(?) ಎಂದು ಪ್ರಧಾನಿ ನರೇಂದ್ರ ಮೋದಿಗೆ ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದ್ದಾರೆ.

ಕೆ.ಆರ್.ಪೇಟೆಯಂತೆ ಇಲ್ಲೂ ಮಾಡೋಕೆ ಹೊರಟಿದ್ದಾರೆ. ಪ್ರೀತಂಗೌಡ ಹಣ ಹಂಚೋಕೆ ಬಂದಿದ್ದಾನೆ. ಪಾಪದ ಹಣವನ್ನ ವಿಜಯೇಂದ್ರ ಖರ್ಚು ಮಾಡುತ್ತಿದ್ದಾನೆ. ಇಷ್ಟೆಲ್ಲಾ ದುಡ್ಡು ಹಂಚುತ್ತಿದ್ದಾರೆ. ಪೊಲೀಸರು ಏನಾದ್ರೂ ಹಿಡಿದಿದ್ದಾರಾ(?) ಈ ಬಾರಿ ಎರಡೂ ಕ್ಷೇತ್ರಗಳನ್ನ ನಾವು ಗೆಲ್ಲುತ್ತೇವೆ. ಶಿರಾದಲ್ಲಿ ನೂರಕ್ಕೆ ನೂರು ಗೆಲ್ಲುತ್ತೇವೆ. ಆರ್.ಆರ್.ನಗರದಲ್ಲೂ ಪ್ರಜ್ಙಾವಂತ ಮತದಾರರಿದ್ದಾರೆ. ಮುನಿರತ್ನ ನಮ್ಮಿಂದಲೇ ಓಡಿ ಹೋದವನು. ನಾನು ಅಭಿವೃದ್ಧಿ ಮಾಡಿದ್ದೇನೆ ಅಂತಾನೆ. ಆಗ ಅನುದಾನ ಕೊಟ್ಟಿದ್ದು ನಾನೇ ಅಲ್ವೇ(?) ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಉಪಚುನವಾಣೆಯಲ್ಲಿ ತಮ್ಮ ಪಕ್ಷ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Next Story

RELATED STORIES