Top

ಆಶಾ ಕಾರ್ಯಕರ್ತರಿಗೆ ನಿಖಿಲ್ ಕುಮಾರಸ್ವಾಮಿ ಆರ್ಥಿಕ ನೆರವು

ಕೊರೊನಾ ವಾರಿಯರ್ಸ್ ನಿಜವಾದ ಹಿರೋಗಳು ಎಂದ ನಿಖಿಲ್​

ಆಶಾ ಕಾರ್ಯಕರ್ತರಿಗೆ ನಿಖಿಲ್ ಕುಮಾರಸ್ವಾಮಿ ಆರ್ಥಿಕ ನೆರವು
X

ರಾಮನಗರ: ಜಿಲ್ಲೆಯಲ್ಲಿ ಕೊರೊನ ಸಂಕಷ್ಟದ ಪರಿಸ್ಥಿತಿಯಲ್ಲೂ ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತರಿಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರ್ಥಿಕ ನೆರವು ನೀಡಿದ್ದಾರೆ.

ರಾಮನಗರ ಜಿಲ್ಲಾ ವೈದ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ನಿಖಿಲ್ ಕುಮಾರಸ್ವಾಮಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸ್ಟಾಪ್ ನರ್ಸ್​ಗಳಿಗೆ ಆರ್ಥಿಕ ನೆರವು ನೀಡಿದ್ದಾರೆ.

ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ತೀವ್ರವಾಗಿದೆ. ಕಳೆದ ವರ್ಷ ಹಾಗೂ ಈ ಬಾರಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಕೊರೋನಾ ವಾರಿಯರ್ಸ್ ತಮ್ಮ ಪ್ರಾಣ ಪಣಕ್ಕಿಟ್ಟು ಲಕ್ಷಾಂತರ ಜನರ ಪ್ರಾಣ ಉಳಿಸುತ್ತಿದ್ದಾರೆ. ಇವತ್ತು ಎಲ್ಲಾ ಕೊರೊನಾ ವಾರಿಯರ್ಸ್ ನಿಜವಾದ ಹಿರೋಗಳು. ನಿಮಗೆ ನಮ್ಮ ಕೈಲಾದ ಸಹಾಯ ಮಾಡಬೇಕು ಅಂತಾ ತಿಂಗಳಿಂದ ಕೊರೆಯುತ್ತಿತ್ತು, ಇವತ್ತು ಕಾಲ ಕೂಡಿ ಬಂದಿದೆ ಎಂದರು.

ಈಗಾಗಲೇ 16 ಆಶಾ ಕಾರ್ಯಕರ್ತರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಸರ್ಕಾರ ಪ್ರತೀ ಕುಟುಂಬಕ್ಕೆ ₹50 ಲಕ್ಷ ಪರಿಹಾರ ಕೊಡ್ತೀವಿ ಅಂತಾ ಹೇಳಿದ್ರು. ಆದ್ರೆ, ಇಲ್ಲಿವರೆಗೆ ಒಂದೇ ಕುಟುಂಬಕ್ಕೆ ಹಣ ಸಿಕ್ಕಿದೆ ಎಂಬುದು ಗೊತ್ತಾಯ್ತು. ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ನೀಡ್ತೀವಿ ಅಂದಿದ್ರು ಅದ್ರಲ್ಲೂ ಸರ್ಕಾರ ವಿಫಲವಾಗಿದೆ. ತಮ್ಮ ಪ್ರಾಣ ಪಣಕ್ಕಿಟ್ಟು, ನಮ್ಮ ಪ್ರಾಣ ಉಳಿಸುವ ಕೆಲಸವನ್ನ ಕೊರೋನಾ ವಾರಿಯರ್ಸ್ ಮಾಡ್ತಿದಾರೆ. ಅವರನ್ನ, ಅವರ ಕುಟುಂಬವನ್ನ ಉಳಿಸುವ ಕೆಲಸವನ್ನ ನಾವು ಮಾಡಬೇಕು. ನಮ್ಮ ಪಕ್ಷದ ಕಡೆಯಿಂದ ನಾವು ಕೈಲಾದಷ್ಟು ಆರ್ಥಿಕ ಸಹಾಯ ಮಾಡುತ್ತಿದ್ದೇವೆ. ಕುಮಾರಣ್ಣ, ಅನಿತಾ ಕುಮಾರಸ್ವಾಮಿ ನಿರಂತರವಾಗಿ ಅಧಿಕಾರಿಗಳ ಸಂಪರ್ಕದಲ್ಲಿದ್ದಾರೆ. ರಾಮನಗರ, ಚನ್ನಪಟ್ಟಣ ಎರಡು ಕಣ್ಣುಗಳಿದ್ದಂತೆ. ಚನ್ನಪಟ್ಟಣದಲ್ಲೂ ಕೂಡ ಆಶಾ ಕಾರ್ಯಕರ್ತೆಯರಿಗೆ ಆರ್ಥಿಕ ನೆರವು ನೀಡುತ್ತೇವೆ ಎಂದರು.

Next Story

RELATED STORIES