Top

ಮನೆ ಮನೆಗೆ ತೆರಳಿ ಸೋಂಕಿತರಿಗೆ ಚಿಕಿತ್ಸೆ: ಡಾ.ಮುಲ್ಕಿ ಪಾಟೀಲ್​ರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ

ಕೊರೊನಾ ಸೋಂಕಿತರಿಗಾಗಿ ಸಹಾಯವಾಣಿ ತೆರೆದ ವೈದ್ಯರು

ಮನೆ ಮನೆಗೆ ತೆರಳಿ ಸೋಂಕಿತರಿಗೆ ಚಿಕಿತ್ಸೆ: ಡಾ.ಮುಲ್ಕಿ ಪಾಟೀಲ್​ರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ
X

ಕೊರೊನಾದಿಂದ ಬಳಲುತ್ತಿರೋ ಅದೆಷ್ಟೋ ಜನ ಪ್ರತಿದಿನ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಬೆಡ್ ಹಾಗೂ ಚಿಕಿತ್ಸೆ ಸಿಗದೆ ಅದೆಷ್ಟೋ ಜನ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ದಿನೇ ದಿನೇ ಹೆಚ್ಚುತ್ತಿರೋ ಕೇಸ್‌ಗಳಿಗೆ ಆಸ್ಪತ್ರೆಯಲ್ಲಿ ಬೆಡ್ ಸಿಕ್ತಿಲ್ಲ. ಅಲ್ಲದೇ, ಆಸ್ಪತ್ರೆಗೆ ಹೊಗೋಕೆ ಕೆಲವರಿಗೆ ಭಯ ಕೂಡ ಶುರುವಾಗಿದೆ. ಅಂಥವರ ಪಾಲಿಗೆ ಹುಬ್ಬಳ್ಳಿಯ ಕಿಮ್ಸ್ ವೈದ್ಯ ಎಸ್.ವೈ.ಮುಲ್ಕಿ ಪಾಟೀಲ್ ದೇವರಂತೆ ಕಂಡಿದ್ದಾರೆ.

ಬೆಡ್‌ ಸಿಗದೇ ಲಕ್ಷಾಂತರ ಜನರು ಹೋಂ ಐಸೋಲೇಷನ್‌ನಲ್ಲಿದ್ದಾರೆ. ಕೆಲವರಿಗೆ ಆಸ್ಪತ್ರೆಗೂ ಕೂಡ ಹೋಗಲು ಆಗದಂತಹ ಪರಿಸ್ಥಿತಿ ಇದೆ. ವೈದ್ಯರೇ ಸಿಗದಂತಹ ಈಗಿನ ಪರಿಸ್ಥಿತಿಯಲ್ಲಿ ಮುಲ್ಕಿ ಪಾಟೀಲ್ ಅವರು ಮನೆ ಮನೆಗೆ ತೆರಳಿ ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ.

ಇವರು ಪ್ರತಿದಿನ ಬೆಳಿಗ್ಗೆ 8ರಿಂದ ಮಧ್ಯಾಹ್ನ 2 ಗಂಟೆವರೆಗೆ ಕಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಕಾರ್ಯನಿರ್ವಹಿಸುತ್ತಾರೆ. ಮಧ್ಯಾಹ್ನದ ನಂತರ ಹೋಂ ಐಸೋಲೇಷನ್‌ ಮನೆಗಳಿಗೆ ತೆರಳಿ ಚಿಕಿತ್ಸೆ ನೀಡುತ್ತಿದ್ದಾರೆ. ಇದಕ್ಕಾಗಿ ಸಹಾಯವಾಣಿ ತೆರೆದಿದ್ದಾರೆ. ಯಾರಿಗೆ ಚಿಕಿತ್ಸೆ ಅಗತ್ಯವಿದೆಯೋ ಅವರು ಸಹಾಯವಾಣಿ ಮೂಲಕ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಕಿಮ್ಸ್‌ ಆಸ್ಪತ್ರೆಯಲ್ಲಿ ಡ್ಯುಟಿ ಮುಗಿದ ನಂತರ ಅಂತಹವರ ಮನೆಗಳಿಗೆ ತೆರಳಿ ಉಚಿತ ಚಿಕಿತ್ಸೆ ನೀಡುತ್ತಾರೆ.

ಆಸ್ಪತ್ರೆಗೆ ಬಂದ್ರೆ ಬೆಡ್ ಸಮಸ್ಯೆ ಅಂತ ಅಷ್ಟೇನು ರೋಗಲಕ್ಷಣಗಳಿಲ್ಲದ ವ್ಯಕ್ತಿಗಳಿಗೆ ಮನೆಗಳಲ್ಲಿಯೇ ಮಾತ್ರೆ, ಔಷಧ ನೀಡಿ ಸೋಂಕು ಕಂಟ್ರೋಲ್ ಮಾಡ್ತಿದ್ದಾರೆ. ಅಲ್ಲದೇ, ನಾನ್ ಕೋವಿಡ್‌ ರೋಗಿಗಳ ಮನೆಗಳಿಗೂ ತೆರಳಿ ಚಿಕಿತ್ಸೆ ನೀಡುತ್ತಿದ್ದಾರೆ. ಕೊರೊನಾ ಅಂತ ಆಸ್ಪತ್ರೆಗೆ ಹೋಗಲು ಹೆದರುತ್ತಿರೊ ಜನರಿಗೆ ಈ ವೈದ್ಯರು ಆಶಾಕಿರಣವಾಗಿದ್ದಾರೆ.

ಈ ವೈದ್ಯರಿಗೆ ಬೆನ್ನೆಲುಬಾಗಿ ನಿಂತಿರೋದು ಭಾರತೀಯ ಜೈನ್ ಸಂಘಟನೆ ಹಾಗೂ ಅದರ ಅಧ್ಯಕ್ಷ ಪ್ರಕಾಶ್ ಜೈನ್. ಇವರೇ ಬೆಳಿಗ್ಗೆಯಿಂದ ಬಿಜೆಎಸ್ ಎನ್ನೋ ಸಂಘಟನೆಯ ಸಹಾಯವಾಣಿಗೆ ಬರೋ ಕರೆಗಳನ್ನ ನೋಟ್ ಮಾಡಿಕೊಂಡು ವೈದ್ಯರನ್ನ ಮನೆಮನೆಗಳಿಗೆ ಕರೆದುಕೊಂಡು ಹೋಗ್ತಾರೆ. ಕೋವಿಡ್ ಹಾಗೂ ನಾನ್ ಕೋವಿಂಡ್ ರೋಗಿಗಳಿಗೆ ಬೇಕಾದ ಅಗತ್ಯ ವೈದ್ಯಕೀಯ ಸೌಲಭ್ಯ ಒದಗಿಸುವ ಮೂಲಕ ಡಾ.ಮುಲ್ಕಿ ಪಾಟೀಲ್ ಅವರಿಗೆ ಚಿಕಿತ್ಸೆಗೆ ನೆರವಾಗ್ತಿದ್ದಾರೆ.

ಪ್ರತಿದಿನ ಭಾರತೀಯ ಜೈನ್ ಸಂಘಟನೆಯ ಸದಸ್ಯರು ವೈದ್ಯರನ್ನ ಕರೆದುಕೊಂಡು ರೋಗಿಗಳ ಮನೆಮನೆಗೆ ತೆರಳಿ ಚಿಕಿತ್ಸೆ ನೀಡಿ, ಆತ್ಮಸ್ಥೈರ್ಯ ತುಂಬುವಂತಹ ಕೆಲಸ ಮಾಡುತ್ತಿದ್ದಾರೆ. ಚಿಕಿತ್ಸೆ ಪಡೆಯುತ್ತಿರೋ ಸೋಂಕಿತರು ಹಾಗೂ ಸಾರ್ವಜನಿಕರಿಂದ ಉತ್ತಮ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವೈದ್ಯೋ ನಾರಾಯಣ ಹರಿ ಎನ್ನುವ ಮಾತಿಗೆ ಡಾ.ಮುಲ್ಕಿ ಪಾಟೀಲ್ ನಿದರ್ಶನವಾಗಿದ್ದು, ಲಾಕ್‌ಡೌನ್ ಸಮಯದಲ್ಲೂ ಯಾವುದೇ ಫಲಾಪೇಕ್ಷೆ ಪಡೆಯದೇ ಸೋಂಕಿತರ ಮನೆಗಳಿಗೆ ತೆರಳಿ ಉಚಿತ ಚಿಕಿತ್ಸೆ ನೀಡೋ ಮೂಲಕ ಮಾನವೀಯತೆ ಎತ್ತಿಹಿಡಿದಿದ್ದಾರೆ.

Next Story

RELATED STORIES