ಉಮೇಶ್ ಕತ್ತಿ ಹೇಳಿಕೆಗೆ ಸಚಿವ ಬಿ.ಸಿ ಪಾಟೀಲ್ ಪಂಚ್ ಡೈಲಾಗ್
- ವಾಸ್ತವವಾಗಿ ರಾಗಿಣಿ ಆರೋಪಿ ನಂಬರ್ 2, ನಂಬರ್ ಒನ್ ಆರೋಪಿ ತೋರಿಸ್ತಾನೆ ಇಲ್ಲ(?)
- ಬಿಎಸ್ವೈ ಡೆಲ್ಲಿ ಭೇಟಿಗೆ ವಿಶೇಷ ಅರ್ಥ ಬೇಡ.
- ಬಿಎಸ್ವೈ ಶಿವಮೊಗ್ಗಕ್ಕೆ ಮಾತ್ರ ಮುಖ್ಯ ಮಂತ್ರಿಯಲ್ಲ.

ಚಿಕ್ಕಬಳ್ಳಾಪುರ: ಸಮಾಜ ಹುಟ್ಟಿದಾಗಿನಿಂದಲೂ ಸಮಾಜ ಘಾತುಕ ಶಕ್ತಿ ಇದೆ. ಸಿನಿಮಾ ಒಂದರಲ್ಲೇ ಗಾಂಜಾ ಗಮ್ಮತ್ತು ಇಲ್ಲ, ಎಲ್ಲಾ ರಂಗದಲ್ಲೂ ಗಾಂಜಾ ಗಮ್ಮತ್ತಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು ಶುಕ್ರವಾರ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಮಣಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಸ್ಯಾಂಡಲ್ವುಡ್ನ ಡ್ರಗ್ಸ್ ದಂಧೆ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರದಲ್ಲಿಂದು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯ, ವ್ಯಾಪಾರ, ಅಧಿಕಾರ, ಐಟಿ, ಬಿಟಿ ಎಲ್ಲಾ ಕಡೆ ಇದೆ. ಆದರೆ, ನೀವು ಬರೀ ಸಿನಿಮಾ ಮೇಲೆ ಬಿದ್ದಿದೀರಾ(?) ಎಂದು ಅವರು ಹೇಳಿದರು.
ಇನ್ನು ಸಿನಿಮಾ ರಂಗ ಗಾಜಿನ ಮನೆ ಇದ್ದಂತೆ. ಹೀಗಾಗಿ ನೀವು ಹೆಚ್ಚು ಪ್ರಚಾರ ಕೊಡ್ತಿದ್ದೀರಿ. ವಾಸ್ತವವಾಗಿ ರಾಗಿಣಿ ಆರೋಪಿ ನಂಬರ್ 2, ನಂಬರ್ ಒನ್ ಆರೋಪಿ ತೋರಿಸ್ತಾನೆ ಇಲ್ಲ(?) ರಾಗಿಣಿ, ಸಂಜನಾ ಮೇಲೆಯೇ ಹೆಚ್ಚು ಪ್ರಾಮುಖ್ಯತೆ ಕೊಡ್ತಿದ್ದೀರಿ(?) ಇತರೆ ಆರೋಪಿಗಳನ್ನೂ ಸ್ವಲ್ಪ ತೋರಿಸಿ, ಸಮಾಜ ಘಾತುಕ ಶಕ್ತಿಯನ್ನು ತಡೆಯಲು ನಮ್ಮ ಸರ್ಕಾರ ಸಿದ್ದವಿದೆ. ಎಂದು ಮಾಧ್ಯಮದ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದರು.
ಸದ್ಯ ನಾಯಕತ್ವದ ಬದಲಾವಣೆಯ ಪ್ರಶ್ನೆಯೇ ಇಲ್ಲ, ಡೆಲ್ಲಿಗೆ ಹಿರಿಯ ನಾಯಕರು ಹೋದ್ರೆ ಸಾಕು ನಾಯಕತ್ವ ಬದಲಾವಣೆ ಗುಲ್ಲು ಹುಟ್ಟುತ್ತೆ. ಇವೆಲ್ಲವೂ ಊಹಾಪೋಹಗಳು. ನಾಲ್ಕು ಸಚಿವರು ಒಂದು ಕಡೆ ಸೇರಿದ್ರೆ ನಾಯಕತ್ವ ಬದಲಾವಣೆ ಅಂತಾ ಹುಟ್ಟಿಸ್ತಾರೆ. ಮುಂದಿನ ಮೂರು ವರ್ಷ ಬಿಎಸ್ವೈ ಮುಖ್ಯಮಂತ್ರಿ ಆಗಿ ಮುಂದುವರೆಯುತ್ತಾರೆ ಎಂದು ಅವರು ತಿಳಿಸಿದರು.
ಸದ್ಯ ಉಮೇಶ್ ಕತ್ತಿ ಹೇಳಿಕೆ ಅವರ ವೈಯಕ್ತಿಕ ಹೇಳಿಕೆ. ಬಿಎಸ್ವೈ ಶಿವಮೊಗ್ಗಕ್ಕೆ ಮಾತ್ರ ಮುಖ್ಯ ಮಂತ್ರಿಯಲ್ಲ. ಅವರು ಇಡೀ ಕರ್ನಾಟಕ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಅವರ ಕನಸು. ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಅವರು ಕತ್ತಿ ಹೇಳಿಕೆಯನ್ನು ತಿರಸ್ಕರಿಸಿದ್ದಾರೆ.
ಬಿಎಸ್ವೈ ಡೆಲ್ಲಿ ಭೇಟಿಗೆ ವಿಶೇಷ ಅರ್ಥ ಬೇಡ. ಕೊರೋನಾ ಹಿನ್ನೆಲೆ ಕೇಂದ್ರಕ್ಕೆ ಹೋಗಲು ಆಗಿರಲಿಲ್ಲ. ಕೊರೊನಾ ಸಂಕಷ್ಟ, ನೆರೆ ಹಾವಳಿ ಸೇರಿದಂತೆ ಹಲವು ಪರಿಹಾರ ಕೇಂದ್ರದಿಂದ ಬರಬೇಕು. ಹಣಕಾಸಿನ ವಿಚಾರ ಚರ್ಚಿಸಲು ಅವರು ಡೆಲ್ಲಿಗೆ ಹೋಗಿದ್ದಾರೆ. ನಾಯಕತ್ವ ಬದಲಾವಣೆ ವಿಚಾರ ಇಲ್ಲ ಎಂದು ಸಚಿವ ಬಿ.ಸಿ ಪಾಟೀಲ್ ಅವರು ಸ್ಪಷ್ಟನೆ ನೀಡಿದ್ದಾರೆ.