ಪ್ರವಾಹ ನಷ್ಟ ವಿಚಾರವಾಗಿ ಚರ್ಚಿಸಲು ವಿಶೇಷ ಅಧಿವೇಶನ ಕರೆಯಬೇಕು - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯ
ಅಫಜಲಪುರ ತಾಲ್ಲೂಕಿನಲ್ಲಿ ಮೂರು ಸಣ್ಣ ನೀರಾವರಿ ಕೆರೆಗಳು ಡ್ಯಾಮೇಜ್ ಆಗಿವೆ. ಇದರಿಂದಾಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದ್ದು, ಈ ಕೂಡಲೇ ಇಂತಹ ಒಡೆದ ಕೆರೆಗಳನ್ನು ದುರಸ್ತಿ ಮಾಡಬೇಕು.

ಕಲಬುರಗಿ: ರಾಜ್ಯದಲ್ಲಿ ಸಂಭವಿಸಿರುವ ಪ್ರವಾಹದ ನಷ್ಟ ವಿಚಾರದ ಬಗ್ಗೆ ಚರ್ಚಿಸಲು ಶೀಘ್ರ ವಿಶೇಷ ಅಧಿವೇಶನ ಕರೆಯಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಕಲಬುರ್ಗಿ ನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಪರಿಸ್ಥಿತಿ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಎಡವಿದ್ದು, ಇಲ್ಲಿಯತನಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರವಾಹ ಸಂತ್ರಸ್ತರಿಗಾಗಿ ನಯಾಪೈಸೆಯನ್ನೂ ಬಿಡುಗಡೆ ಮಾಡಿಲ್ಲ. ಬೆಳೆ ನಷ್ಟದಿಂದಾಗಿ ರೈತರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ ಎಂದಿದ್ದಾರೆ.
ಜಿಲ್ಲೆಯ ಅಫಜಲಪುರ ತಾಲ್ಲೂಕಿನಲ್ಲಿ ಮೂರು ಸಣ್ಣ ನೀರಾವರಿ ಕೆರೆಗಳು ಡ್ಯಾಮೇಜ್ ಆಗಿವೆ. ಇದರಿಂದಾಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದ್ದು, ಈ ಕೂಡಲೇ ಇಂತಹ ಒಡೆದ ಕೆರೆಗಳನ್ನು ದುರಸ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಇನ್ನು ರಾಜ್ಯಕ್ಕೆ ಕೇಂದ್ರ ಸರ್ಕಾರ ನಿರಂತರವಾಗಿ ಅನ್ಯಾಯ ಮಾಡುತ್ತಿದ್ದು, 15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ 5,495 ಕೋಟಿ ವಿಶೇಷ ಅನುದಾನಕ್ಕೆ ಶಿಫಾರಸು ಮಾಡಿತ್ತು. ಆದರೆ, ಈ ರಾಜ್ಯದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಶಿಫಾರಸು ವಾಪಸ್ ಪಡೆಯುವಂತೆ ಪತ್ರ ಬರೆದಿದ್ದಾರೆ ಎಂದು ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ.
ಸದ್ಯ ರಾಜ್ಯದಿಂದ 25 ಜನ ಬಿಜೆಪಿ ಸಂಸದರು ಆಯ್ಕೆಯಾಗಿದ್ದಾರೆ. ಆದರೆ, ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಎದುರು ನಿಂತು ಹಣ ತರುವ ಧಮ್ ಇಲ್ಲ ಎಂದರು.
ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಶಾಸಕರನ್ನು ಕರೆದು ಮಾತಾಡಿಸಲಿಲ್ಲ. ಅವರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡಲಿಲ್ಲ. ಐಷಾರಾಮಿ ಹೋಟೆಲ್ನಲ್ಲಿ ಕುಳಿತು ಅಧಿಕಾರ ನಡೆಸಿದರು. ಹೀಗೆ ಮಾಡಿದ್ದರಿಂದ ಶಾಸಕರು ಸರ್ಕಾರ ಕೆಡವಿದರು. ಆದರೆ, ನಾನೇ ಸರ್ಕಾರ ಕೆಡವಿದೆ ಎನ್ನುತ್ತಿದ್ದಾರೆ. ಕುಮಾರಸ್ವಾಮಿ ಅವರದು ಕುಣಿಯಲು ಬಾರದವರು ನೆಲ ಡೊಂಕು ಅಂದರಂತೆ ಎನ್ನುವ ಸ್ಥಿತಿಯಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದರು.