Top

ಕೊರೊನಾಗೂ ಜಗ್ಗದೇ ‘ಪೊಗರು’ ಅಖಾಡಕ್ಕೆ ಶಿವ ಎಂಟ್ರಿ

ಕೊರೊನಾಗೂ ಜಗ್ಗದೇ ‘ಪೊಗರು’ ಅಖಾಡಕ್ಕೆ ಶಿವ ಎಂಟ್ರಿ
X

ಸಹೋದರ ಚಿರಂಜೀವಿ ಸರ್ಜಾ ಅಕಾಲಿಕ ಅಗಲಿಕೆಯಿಂದ ಕುಗ್ಗಿ ಹೋಗಿದ್ದ ಧ್ರುವ ಸರ್ಜಾ ಮತ್ತೆ ಫೀನಿಕ್ಸ್​ ರೀತಿ ಎದ್ದು ಬರೋಕ್ಕೆ ಸಿದ್ಧತೆ ನಡೆಸಿದ್ದಾರೆ. ಕೊರೊನಾ ಗೆದ್ದು ಬಂದ ಧ್ರುವ ಪೊಗರು ತೋರ್ಸೋಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಲಾಕ್​ಡೌನ್​ ಟೈಮಲ್ಲೇ ಮತ್ತೊಂದು ಹೊಸ ಚಿತ್ರಕ್ಕೂ ಭರ್ಜರಿ ಕಸರತ್ತು ಶುರು ಮಾಡಿದ್ದಾರೆ. ಅಣ್ಣನ ಕೊನೆಯ ಚಿತ್ರಕ್ಕೆ ಡಬ್​ ಮಾಡೋದಕ್ಕೂ ಹ್ಯಾಟ್ರಿಕ್ ಆ್ಯಕ್ಷನ್​ ಪ್ರಿನ್ಸ್ ಉತ್ಸುಕರಾಗಿದ್ದಾರೆ.

ಇವರನ್ನ ಅದ್ಧೂರಿ ಹುಡ್ಗ ಅನ್ಬೇಕಾ(?) ಬಹದ್ದೂರ್ ಗಂಡು ಅನ್ಬೇಕಾ(?) ಅಥವಾ ಭರ್ಜರಿ ಹೀರೋ ಅಂತ ಕರೀಬೇಕೋ ಗೊತ್ತಿಲ್ಲ. ಯಾಕಂದ್ರೆ ಅದ್ದೂರಿ, ಬಹದ್ದೂರ್, ಭರ್ಜರಿಯಂತಹ ಬ್ಯಾಕ್ ಟು ಬ್ಯಾಕ್ ಮೂರು ಬ್ಲಾಕ್ ಬಸ್ಟರ್ ಸಿನಿಮಾಗಳನ್ನ ಕೊಟ್ಟ ನಾಯಕನಟ ಧ್ರುವ ಸರ್ಜಾ. ಜೀವಕ್ಕೆ ಜೀವ ಅನ್ನುವಂತಿದ್ದ ಅಣ್ಣನ ಅಗಲಿಕೆಯಿಂದ ಧ್ರುವ ಸರ್ಜಾ ಕುಗ್ಗಿ ಹೋಗಿದ್ದಾರೆ. ಕೊನೆಗೂ ಆ ನೋವಿನಿಂದ ಹೊರಬರೋಕ್ಕೆ ಧ್ರುವ ಮುಂದಾಗಿದ್ದಾರೆ. ಅಣ್ಣನ ಶ್ರೀರಕ್ಷೆಯಿಂದ ಅಣ್ಣನ ಮಾರ್ಗದರ್ಶನದಲ್ಲೇ ಧ್ರುವ ದರ್ಬಾರ್​ಗೆ ವೇದಿಕೆ ಸಿದ್ಧವಾಗ್ತಿದೆ.

ಮೂಲತಹ ಬಾಕ್ಸರ್ ಆಗಿದ್ದ ಧ್ರುವಾ ಸರ್ಜಾ ಕನ್ನಡ ಚಿತ್ರರಂಗಕ್ಕೆ ಬಂದು ಆಕ್ಷನ್ ಪ್ರಿನ್ಸ್ ಆಗಿದ್ದಾರೆ. ನೋವನ್ನ ಮೆಟ್ಟಿ ಗೆಲುವಿನ ಲಯಕ್ಕೆ ಮರಳುವುದನ್ನ ಬಾಕ್ಸರ್​ಗಳಿಗೆ ಹೇಳಿಕೊಡಬೇಕಾಗಿಲ್ಲ. ಅಣ್ಣನ ಅಗಲಿಕೆಯಿಂದ ನೊಂದು ಬೆಂದಿರುವ ಧ್ರುವ ತಮ್ಮ ಸಕ್ಸಸ್​ನಲ್ಲೇ ಅಣ್ಣನನ್ನ ಕಾಣುವ ಮನಸು ಮಾಡಿದ್ದಾರೆ. ಅಣ್ಣನ ಆಸೆಯಂತೆ ದೊಡ್ಡ ಸೂಪರ್​ ಸ್ಟಾರ್​ ಆಗುವತ್ತ ಅಡಿ ಇಟ್ಟಿದ್ದಾರೆ. ಅದಕ್ಕಾಗಿ ದೇಹ ಮತ್ತು ಮನಸ್ಸನ್ನ ಗಟ್ಟಿಗೊಳಿಸುತ್ತಿದ್ದಾರೆ.

ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ಶೂಟಿಂಗ್ ಕೊರೊನಾ ಹಾವಳಿ ಮತ್ತು ಲಾಕ್​ಡೌನ್​ನಿಂದ ಅರ್ಧಕ್ಕೆ ನಿಂತು ಹೋಗಿದೆ. ಚಿತ್ರದ ಎರಡು ಹಾಡುಗಳನ್ನ ಬಹಳ ದೊಡ್ಡ ಮಟ್ಟದಲ್ಲಿ ಚಿತ್ರೀಕರಣ ನಡೆಸೋಕ್ಕೆ ಪೊಗರು ಟೀಮ್ ಪ್ಲಾನ್ ಮಾಡಿದೆ. ಕೊರೊನಾ ಹಾವಳಿ ಮುಗಿಯುವರೆಗೂ ಚಿತ್ರೀಕರಣ ಸಾಧ್ಯವಿಲ್ಲ ಅಂತ್ಲೇ ನಿರ್ದೇಶಕರು ಹೇಳಿದರು. ಆದರೆ, ಡೆಡ್ಲಿ ವೈರಸ್​ ಸದ್ಯಕ್ಕೆ ನಾಶವಾಗುವ ಸುಳಿವು ಸಿಕ್ತಿಲ್ಲ.. ಹಾಗಾಗಿ ಧೈರ್ಯವಾಗಿ ಸಿನಿಮಾ ಶೂಟಿಂಗ್​ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಧ್ರುವ ಕೂಡ ಶೂಟಿಂಗ್​ನಲ್ಲಿ​ ಭಾಗಿಯಾಗಲು ಒಪ್ಪಿದ್ದಾರೆ.

ಇನ್ನು ಧ್ರುವ ಸರ್ಜಾ ಮತ್ತು ಪ್ರೇರಣ ದಂಪತಿಗೂ ಕೊರೊನಾ ಸೋಂಕು ತಗುಲಿತ್ತು. ಆದರೆ, ಅಣ್ಣನ ಆಶೀರ್ವಾದದಿಂದ ಬೇಗ ಗುಣಮುಖರಾಗಿ ಬಂದಿದ್ದ ಧ್ರುವ ಸರ್ಜಾ, ಜಿಮ್​ನಲ್ಲಿ ಬೆವರಿಸಲು ಶುರು ಮಾಡಿದ್ದಾರೆ. ಕೊರೊನಾ ಗೆದ್ದ ಧ್ರುವ, ಕೊರೊನಾ ವಿರುದ್ಧ ಹೋರಾಡುತ್ತಲೇ ಶೂಟಿಂಗ್​ನಲ್ಲಿ ಪಾಲ್ಗೊಳ್ಳಲು ತೀರ್ಮಾನಿಸಿದ್ದಾರೆ. ಈಗಾಗಲೇ ಪೊಗರು ಸಾಂಗ್​ ಶೂಟಿಂಗ್​ಗಾಗಿ ಲೊಕೇಶನ್​ ಹುಡುಕಾಟ ಶುರುವಾಗಿದೆ.

ಲಾಕ್​ಡೌನ್​ ನಡುವೆಯೂ ಪೊಗರು ಚಿತ್ರದ ಖರಾಬು ಸಾಂಗ್ ಸೆನ್ಸೇಷನ್​ ಕ್ರಿಯೇಟ್ ಮಾಡಿತ್ತು. 4 ತಿಂಗಳಲ್ಲೇ 98 ಮಿಲಿಯನ್​ ವೀವ್ಸ್​ ಸಾಧಿಸಿರೋ ಸಾಂಗ್​, ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಇದೇ ವಾರ 100 ಮಿಲಿಯನ್ ಗಡಿ ದಾಟಲಿದೆ ಸೂಪರ್​ ಹಿಟ್​ ಸಾಂಗ್. ಇನ್ನು ಪೊಗರು ಚಿತ್ರವನ್ನ ತೆಲುಗಿಗೂ ಡಬ್​ ಮಾಡಲಾಗ್ತಿದ್ದು, ಈ ವಾರ ಖರಾಬು ತೆಲುಗು ವರ್ಷನ್ ಸಾಂಗ್​ ರಿಲೀಸ್​ ಆಗಲಿದೆ.

ಒಂದು ಸಿನಿಮಾ ಮುಗಿಯೋಕ್ಕು ಮುನ್ನ ಅದೇ ಕಾಂಬಿನೇಷನ್​ನಲ್ಲಿ ಮತ್ತೊಂದು ಸಿನಿಮಾ ಬರೋದು ವಿಶೇಷ. ಪೊಗರು ಸಿನಿಮಾ ತೆರೆಗೆ ಬರೋದಕ್ಕು ಮೊದ್ಲೇ ನಂದ ಕಿಶೋರ್​ ಮತ್ತು ಧ್ರುವ ಜೋಡಿ ಮತ್ತೊಂದು ಚಿತ್ರಕ್ಕೆ ಕೈ ಹಾಕಿದೆ. ಸದ್ಯ ಲಾಕ್​ಡೌನ್​ ಬಿಡುವಿನ ಸಮಯವನ್ನ ಆ ಚಿತ್ರಕ್ಕಾಗಿ ಬಳಸಿಕೊಳ್ತಿದ್ದಾರೆ ಧ್ರುವ ಸರ್ಜಾ. ಮುಂದಿನ ಚಿತ್ರದಲ್ಲಿ ಧ್ರುವ ಸರ್ಜಾ ಅವ್ರನ್ನ ಸ್ಟೈಲಿಶ್​ ಲುಕ್​ನಲ್ಲಿ ತೋರಿಸಲು ನಂದ ಕಿಶೋರ್​ ಮುಂದಾಗಿದ್ದಾರೆ. ಅದಕ್ಕಾಗಿ ತೂಕ ಇಳಿಸಿಕೊಳ್ಳೋಕ್ಕೆ ಹ್ಯಾಟ್ರಿಕ್​ ಆ್ಯಕ್ಷನ್​ ಪ್ರಿನ್ಸ್​ ಜಿಮ್​ನಲ್ಲಿ ಬೆವರಿಳಿಸುತ್ತಿದ್ದಾರೆ.

ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಸಿನಿಮಾಗಳಲ್ಲಿ ರಾಮ್​ ನಾರಾಯಣ್​ ನಿರ್ದೇಶನದ ರಾಜಮಾರ್ತಾಂಡ ಕೂಡ ಒಂದು. ಬಹುತೇಕ ಶೂಟಿಂಗ್​ ಮುಗಿಸಿದ್ದ ಚಿತ್ರಕ್ಕೆ ಚಿರು ಡಬ್​ ಮಾಡಬೇಕಿತ್ತು. ಅಷ್ಟರಲ್ಲಿ ಲಾಕ್​ಡೌನ್​ ಘೋಷಣೆಯಾಯ್ತು. ಡಬ್​ ಮಾಡಲು ಅನುಮತಿ ಸಿಗುವ ವೇಳೆಗೆ ಚಿರು ಸರ್ಜಾ ಅವ್ರೇ ನಮ್ಮೊಂದಿಗಿಲ್ಲ. ರಾಜಮಾರ್ತಾಂಡ ಚಿತ್ರದಲ್ಲಿ ಅಣ್ಣನ ಪಾತ್ರಕ್ಕೆ ಡಬ್​ ಮಾಡಲು ಧ್ರುವ ಸರ್ಜಾ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ.

ಎಲ್ಲಾ ಅಂದುಕೊಂಡಂತೆ ಆಗಿದ್ರೆ, ಇಷ್ಟೊತ್ತಿಗೆ ಧ್ರುವ, ರಾಜಮಾರ್ತಾಂಡ ಚಿತ್ರಕ್ಕೆ ಡಬ್ ಮಾಡ್ಬೇಕಿತ್ತು. ಆದರೆ, ಅಣ್ಣನ ಅಗಲಿಕೆ ನೋವು ಅವರನ್ನ ಕಾಡುತ್ತಲೇ ಇದೆ. ಡಬ್​ ಮಾಡುವಾಗ ತೆರೆಮೇಲೆ ಅಣ್ಣನನ್ನ ನೋಡಿದ್ರೆ, ಮತ್ತೆ ಎಮೋಷನಲ್​ ಆಗುವ ಸಾಧ್ಯತೆಯಿದೆ. ಅದೇ ಕಾರಣಕ್ಕೆ ಮತ್ತಷ್ಟು ಸಮಯ ತೆಗೆದುಕೊಳ್ಳುವ ತೀರ್ಮಾನಕ್ಕೆ ಬಂದಿದ್ದಾರೆ. ಈ ತಿಂಗಳಾಂತ್ಯಕ್ಕೆ ಅಥವಾ ಮುಂದಿನ ತಿಂಗಳು ಧ್ರುವ, ಅಣ್ಣನ ಕೊನೆಯ ಚಿತ್ರಕ್ಕೆ ಡಬ್​ ಮಾಡೋದು ಪಕ್ಕಾ ಆಗಿದೆ.

ಹ್ಯಾಟ್ರಿಕ್​ ಆ್ಯಕ್ಷನ್​ ಪ್ರಿನ್ಸ್​​ ಮೊದಲಿನಂತೆ ಎಲ್ಲರನ್ನ ನಗಿಸುತ್ತಾ, ನಗುತ್ತಾ ಇರಬೇಕು, ಅವರ ಒಂದಕ್ಕಿಂತ ಒಂದು ಹಿಟ್​ ಸಿನಿಮಾ ಕೊಡ್ಬೇಕು ಅನ್ನೋದು ಅಭಿಮಾನಿಗಳ ಆಸೆ. ಅಭಿಮಾನಿಗಳನ್ನ ರಂಜಿಸೋದೇ ಧ್ರುವ ಸರ್ಜಾ ಕರ್ತವ್ಯ. ದೈಹಿಕವಾಗಿ ಚಿರು ದೂರಾಗಿದ್ರು, ಮಾನಸಿಕವಾಗಿ ಸರ್ಜಾ ಕುಟುಂಬದ ಜೊತೆಗಿದ್ದಾರೆ. ಧ್ರುವ ಕೂಡ ಅಣ್ಣನ ಹಾದಿಯಲ್ಲೇ ಸದಾ ನಗುತ್ತಾ ಎಲ್ಲರನ್ನ ನಗಿಸಲು ಮನಸ್ಸು ಮಾಡಿದ್ದಾರೆ.

Next Story

RELATED STORIES