Top

ದಯಮಾಡಿ ಎಚ್ಚರದಿಂದಿರಿ, ಇದು ನನ್ನ ಕಳಕಳಿಯ ಮನವಿ - ಮಾಜಿ ಸಿಎಂ ಹೆಚ್ಡಿಕೆ

ದಯಮಾಡಿ ಎಚ್ಚರದಿಂದಿರಿ, ಇದು ನನ್ನ ಕಳಕಳಿಯ ಮನವಿ - ಮಾಜಿ ಸಿಎಂ ಹೆಚ್ಡಿಕೆ
X

ಬೆಂಗಳೂರು: ಕೊರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈಗಿರುವ ಮೂರ್ನಾಲ್ಕು ಸಾವಿರ ರೋಗಿಗಳಿಗೆ ಚಿಕಿತ್ಸೆ ನೀಡಲು ಬೆಡ್​ಗಳಿಲ್ಲ, ವೆಂಟಿಲೇಟರ್​ಗಳ ಕೊರತೆ ಇದೆ ಇದಕ್ಕೆ ಸ್ವಯಂ ಪ್ರೇರಿತ ಲಾಕ್​ಡೌನ್ ಒಂದೇ ಪರಿಹಾರ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರು ಟ್ವಿಟ್​ ಮಾಡಿದ್ದಾರೆ.

ಬುಧವಾರ ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಬೆಂಗಳೂರು ಸೇರಿದಂತೆ ರಾಜ್ಯದ ನಿವಾಸಿಗಳೇ, ನೀವು ಕೋವಿಡ್​ 19ನಿಂದ ಪಾರಾಗಲು ಈಗ ಉಳಿದಿರುವುದು ಒಂದೇ ದಾರಿ. ಮನೆಯಲ್ಲೇ ಉಳಿದು ನೀವೇ ಸ್ವಯಂ ಘೋಷಿತ ಬಂದ್ ಆಚರಿಸಿ. ಪ್ರಾಣಕ್ಕಿಂತಲೂ ಹಣ ಮುಖ್ಯವಲ್ಲ.‌ ಜೀವ ಇದ್ದರೆ ಹೇಗಾದರೂ ಬದುಕಬಹುದು. ನಿಮ್ಮ ಜೀವ ಜೀವನ ಈಗ ನಿಮ್ಮ ಕೈಯಲ್ಲಿದೆ ಎಂದು ಅವರು ರಾಜ್ಯದ ಜನರಿಗೆ ಸಲಹೆ ನೀಡಿದ್ದಾರೆ.

ಇನ್ನು ರಾಜ್ಯ ಸರ್ಕಾರ ಕೂಡ ಇದನ್ನೇ ಪರೋಕ್ಷವಾಗಿ ಹೇಳುತ್ತಿದೆ. ಕೊರೊನಾ ವೈರಸ್ ಸಮೂಹ ಪ್ರಸರಣದ ಈಗಿನ ಸ್ಥಿತಿಯಲ್ಲಿ ಮನೆಯಲ್ಲಿರುವುದೇ 'ಮನೆ ಮದ್ದು'. ಈ ಸೋಂಕಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸರ್ಕಾರ ನಿಗದಿಪಡಿಸಿರುವುದು ದಿನಕ್ಕೆ 10-15 ಸಾವಿರ ರೂ. ಈ ದರ ಬಡವರಿಗಿರಲಿ, ಮಧ್ಯಮ ವರ್ಗದವರಿಗೂ ಭರಿಸಲು ಸಾಧ್ಯವಾಗದು ಎಂದು ಅವರು ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಫಿಕ್ಸ್​ ಮಾಡಿರುವ ದರಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಸದ್ಯ ಒಂದು ಕುಟುಂಬದ ನಾಲ್ಕು ಜನರಿಗೆ ಕೊರೊನಾ ಬಂದರೆ ಖಾಸಗಿ ಆಸ್ಪತ್ರೆಯಲ್ಲಿ 15 ದಿನಗಳ ಚಿಕಿತ್ಸೆಗೆ ಸರ್ಕಾರ ನಿಗದಿಪಡಿಸಿರುವ ದರದ ಪ್ರಕಾರ 5-6 ಲಕ್ಷ ರೂ ಬೇಕು. ಬಡವರು ಮಧ್ಯಮ ವರ್ಗದವರು ಎಲ್ಲಿಂದ ತರುತ್ತಾರೆ(?) ಸರ್ಕಾರ ಕೈಚೆಲ್ಲಿ ಕುಳಿತಿರುವಾಗ ನಮ್ಮ ಜೀವ ನಾವೇ ಉಳಿಸಿಕೊಳ್ಳಬೇಕು. ದಯಮಾಡಿ ಎಚ್ಚರದಿಂದಿರಿ. ಇದು ನನ್ನ ಕಳಕಳಿಯ ಮನವಿ ಎಂದು ಹೆಚ್​.ಡಿ ಕುಮಾರಸ್ವಾಮಿ ಅವರು ರಾಜ್ಯದ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Next Story

RELATED STORIES