ತಂದೆ ಹುಟ್ಟುಹಬ್ಬಕ್ಕೆ ಮಹೇಶ್ ಬಾಬು ಹೊಸ ಸಿನಿಮಾ ಅನೌನ್ಸ್

ಕೊರೊನಾ ಆತಂಕದಿಂದ ಸಿನಿಮಾ ಶೂಟಿಂಗ್, ರಿಲೀಸ್ ಬಂದ್ ಆಗಿದೆ. ಮತ್ತೆ ಶೂಟಿಂಗ್ ಯಾವಾಗ ಅನುಮತಿ ಸಿಗುತ್ತೋ ಗೊತ್ತಿಲ್ಲ. ಆದರೆ, ಲಾಕ್ಡೌನ್ ನಡುವೆಯೂ ಸೂಪರ್ ಸ್ಟಾರ್ ಮಹೇಶ್ ಬಾಬು ಸಿನಿಮಾ ಅನೌನ್ಸ್ ಆಗಿದೆ.
ಸೂಪರ್ ಸ್ಟಾರ್ಗಳು ವರ್ಷಕ್ಕೆ ಎರಡು ಸಿನಿಮಾ ಮಾಡಬೇಕು ಅನ್ನೋದು ಚಿತ್ರರಂಗದ ವಾದ. ಒಂದು ಸಿನಿಮಾ ಮುಗಿಯೋಕ್ಕು ಮೊದ್ಲೇ ಸ್ಟಾರ್ ನಟನ ಮುಂದಿನ ಸಿನಿಮಾ ಯಾವ್ದು ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಇರುತ್ತೆ. ಅದಕ್ಕೆ ತಕ್ಕಂತೆ ಸ್ಟಾರ್ಸ್ ಒಂದು ಸಿನಿಮಾ ಕಂಪ್ಲೀಟ್ ಆಗೋಕ್ಕು ಮುನ್ನ ಮತ್ತೊಂದನ್ನ ಲೈನ್ನಲ್ಲಿ ಇಟ್ಟಿರ್ತಾರೆ. ಆದರೆ, ಈ ಬಾರಿ ಮಹೇಶ್ ಬಾಬು ಯಾಕೊ ಹಿಂದೆ ಬಿದ್ರು. ಅಂತೂ ಇಂತೂ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ.
ಪ್ರಿನ್ಸ್ ಮಹೇಶ್ ಬಾಬು ತಮ್ಮ ತಂದೆ ಸೂಪರ್ ಸ್ಟಾರ್ ಕೃಷ್ಣ, ಹುಟ್ಟುಹಬ್ಬದ ಸಂಭ್ರಮದಲ್ಲೇ ಹೊಸ ಸಿನಿಮಾ ಘೋಷಿಸಿದ್ದಾರೆ. ‘ಸರ್ಕಾರು ವಾರಿ ಪಾಟ’ ಅನ್ನೋ ವಿಭಿನ್ನ ಟೈಟಲ್ನಲ್ಲಿ ಮೂಡಿ ಬರಲಿರೋ ಈ ಚಿತ್ರಕ್ಕೆ ಗೀತಗೋವಿಂದಂ ಖ್ಯಾತಿಯ ಪರಶುರಾಮ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಮಹೇಶ್ ಬಾಬು ಕೊಂಚ ರಫ್ ಲುಕ್ನಲ್ಲಿ ಕುತ್ತಿಗೆ ಮೇಲೆ ರೂಪಾಯಿ ಕಾಯಿನ್ ಟ್ಯಾಟು ಹಾಕ್ಕೊಂಡಿರೋ ಪೋಸ್ಟರ್ ರಿವೀಲ್ ಆಗಿದೆ.
‘ಸರ್ಕಾರು ವಾರಿ ಪಾಟ’ ಸಿನಿಮಾದಲ್ಲಿ ಮಹೇಶ್ ಬಾಬು ನೆಗೆಟೀವ್ ಶೇಡ್ ರೋಲ್ನಲ್ಲಿ ನಟಿಸುತ್ತಿರೋ ಸೂಚನೆ ಸಿಕ್ತಿದೆ. ಶ್ರೀಮಂತುಡು, ಜನತಾ ಗ್ಯಾರೇಜ್, ರಂಗಸ್ಥಳಂ ರೀತಿಯ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನು ಕೊಟ್ಟ ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ನಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ಸರಿಲೇರು ನೀಕೆವ್ವರು ಸಿನಿಮಾ ನಂತರ ಮಹೇಶ್ ಬಾಬು ಈ ಚಿತ್ರಕ್ಕೆ ಬಣ್ಣಹಚ್ಚುತ್ತಿದ್ದಾರೆ.
ಸಂಕ್ರಾಂತಿ ಸಂಭ್ರಮದಲ್ಲಿ ಬಂದ ಸರಿಲೇರು ನೀಕೆವ್ವರು ಸಿನಿಮಾ ಸೂಪರ್ ಹಿಟ್ ಆಯ್ತು. ಆ ಸಿನಿಮಾ ಬರೋಕ್ಕು ಮೊದ್ಲೆ ಮಹೇಶ್ ಬಾಬು ಮತ್ತೊಂದು ಸಿನಿಮಾ ಫೈನಲ್ ಮಾಡಬೇಕಿತ್ತು. ಕಾರಣಾಂತರಗಳಿಂದ ತಡವಾಗುತ್ತಿದ್ದು, ಬರೋಬ್ಬರಿ ನಾಲ್ಕು ತಿಂಗಳ ನಂತ್ರ ಹೊಸ ಸಿನಿಮಾ ಘೋಷಿಸಿದ್ದಾರೆ. ನಿರ್ದೇಶಕ ಪರುಶುರಾಮ್ ಸೂಪರ್ ಸ್ಟಾರ್ಗೆ ಆ್ಯಕ್ಷನ್ ಕಟ್ ಹೇಳುವ ಖುಷಿಯಲ್ಲಿದ್ದಾರೆ.
ಸದ್ಯ ಲಾಕ್ಡೌನ್ನಿಂದ ಸಿನಿಮಾ ಶೂಟಿಂಗ್ ನಿಂತು ಹೋಗಿದೆ. ಸಮಸ್ಯೆ ಬಗೆಹರಿದು, ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿದ ನಂತರ ‘ಸರ್ಕಾರು ವಾರಿ ಪಾಟ’ ಸಿನಿಮಾ ಸೆಟ್ಟೇರಲಿದೆ. ರೆಗ್ಯುಲರ್ ಸಿನಿಮಾ ಶೂಟಿಂಗ್ ತಡವಾಗಲಿದ್ದು, ಈ ಸಿನಿಮಾ ನೋಡೋಕ್ಕೆ ಫ್ಯಾನ್ಸ್ ಮುಂದಿನ ವರ್ಷದವರೆಗೂ ಕಾಯಬೇಕು.