'ಆರ್ಥಿಕ ಸುಧಾರಣೆ ಆಗಬೇಕಾದರೆ ಬಡವರ ಜೇಬಿನಲ್ಲಿ ದುಡ್ಡು ಇರಬೇಕು'

ರಾಮನಗರ: ಕೊರೊನಾ ಮಹಾಮಾರಿ ಕಾಯಿಲೆಗೆ ಲಸಿಕೆ ಇಲ್ಲ, ಇಡೀ ಜಗತ್ತಿಗೆ ಒಕ್ಕರಿಸಿದೆ. ಮುಂದುವರೆದ ದೇಶಗಳೇ ಈ ಮಹಾಮಾರಿ ರೋಗಕ್ಕೆ ತತ್ತರಿಸಿ ಹೋಗಿವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಕುದೂರಿನಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ನಮ್ಮ ದೇಶದಲ್ಲೂ ಕೂಡ ಮಹಾಮಾರಿ ಕೊರೊನಾ ಒಕ್ಕರಿಸಿದೆ. ಪ್ರತಿ ದಿನ ಕೂಡ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸಾರ್ವಜನಿಕರು ಸ್ವಯಂ ಜಾಗೃತರಾಗಬೇಕಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೊರೊನಾ ಬರದಂತೆ ನೋಡಿಕೊಳ್ಳಬೇಕಿದೆ ಎಂದು ಹೇಳಿದರು.
ಇನ್ನು ಹೈಕಮಾಂಡ್ ನಿರ್ದೇಶನದಂತೆ ನಾವು ಎಲ್ಲ ಕಡೆ ಕಿಟ್ ವಿತರಣೆ ಮಾಡಿದ್ದೇವೆ. ಈ ಮೂಲಕ ಬಡವರಿಗೆ ಸಹಾಯ ಮಾಡುತಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ಯಾಕೇಜ್ಗಳು ಬೋಗಸ್ ಪ್ಯಾಕೇಜ್ಗಳು. ಆರ್ಥಿಕವಾಗಿ ಸುಧಾರಣೆ ಆಗಬೇಕಾದರೆ ಬಡವರ ಜೇಬಿನಲ್ಲಿ ದುಡ್ಡು ಇರಬೇಕು. ನರೇಂದ್ರ ಮೋದಿ ಪ್ರಧಾನ ಮಂತ್ರಿ ಆದಾಗಿನಿಂದಲೂ ಸಾಕಷ್ಟು ಸುಳ್ಳು ಹೇಳಿದ್ದಾರೆ. ಇದೀಗ ಮತ್ತೆ ಸುಳ್ಳು ಹೇಳುತ್ತಿದ್ದಾರೆ ಎಂದು ಅವರು ಪ್ರಧಾನಿ ಮೋದಿಯನ್ನು ಟೀಕಿಸಿದರು.
ಸದ್ಯ ಈಗ ಪರಿಸ್ಥಿತಿ ಕಷ್ಟದಲ್ಲಿ ಇದೆ. ಆರ್ಥಿಕ ಚೇತರಿಕೆಗೋಸ್ಕರ ಲಾಕ್ಡೌನ್ ಸಡಿಲಿಕೆ ಮಾಡಿದ್ದಾರೆ. ಸರ್ಕಾರಕ್ಕೆ ನಾವೇ ಮೂರ್ನಾಲ್ಕು ಬಾರಿ ಹೋಗಿ ಮನವಿ ಮಾಡಿದ್ದೇವೆ. ಈ ಸರ್ಕಾರ ಬೇಜವಾಬ್ದಾರಿ, ಜನವಿರೋಧಿ ಸರ್ಕಾರ. ವಕ್ಪ್ ಬೋರ್ಡ್ ವಿಚಾರ ನಾನು ಮಾತಾಡೊಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನುಡಿದರು.