ಮತ್ತೆ ‘ಪ್ರೀಮಿಯರ್ ಪದ್ಮಿನಿ’ ಏರುವುದಕ್ಕೆ ಜಗ್ಗಣ್ಣ ರೆಡಿ

ಸ್ಯಾಂಡಲ್ವುಡ್ನಲ್ಲಿ ಸೀಕ್ವೆಲ್ ಸಿನಿಮಾಗಳ ಜಮಾನ ಬಹಳ ಹಿಂದೆಯೇ ಶುರುವಾಗಿದೆ. ಕಳೆದ ವರ್ಷ ಸಕ್ಸಸ್ ಕಂಡ ಪ್ರೀಮಿಯರ್ ಪದ್ಮಿನಿ ಸಿನಿಮಾ ಸೀಕ್ವೆಲ್ಗೆ ಭರ್ಜರಿ ಸಿದ್ಧತೆ ನಡೀತಿದೆ. ಲಾಕ್ಡೌನ್ ನಡುವೆಯೂ ಪೋಸ್ಟ್ ಪ್ರೊಡಕ್ಷನ್ ವರ್ಕ್ ಕಂಪ್ಲೀಟ್ ಆಗಿದ್ದು, ಶೂಟಿಂಗ್ಗೆ ಅನುಮತಿ ಸಿಕ್ಕಿದ ತಕ್ಷಣ ಪ್ರೀಮಿಯರ್ ಪದ್ಮಿನಿ-2 ಸಿನಿಮಾ ಸೆಟ್ಟೇರಲಿದೆ.
ರಮೇಶ್ ಇಂದಿರಾ ನಿರ್ದೇಶಿಸಿ, ಶ್ರುತಿ ನಾಯ್ಡು ನಿರ್ಮಾಣ ಮಾಡಿದ್ದ ‘ಪ್ರೀಮಿಯರ್ ಪದ್ಮಿನಿ’ ಸಿನಿಮಾ ಕಳೆದ ವರ್ಷ ಪ್ರೇಕ್ಷಕರ ಮನ ಗೆದ್ದಿತ್ತು. ಭಾವನಾತ್ಮಕ ಮನರಂಜನೆ ಮೂಲಕ ಸಿನಿಮಾ ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗಿತ್ತು. ಯಾವುದೇ ಆರ್ಭಟ ಇಲ್ಲದ ಈ ಕೌಟುಂಬಿಕ ಸಿನಿಮಾ ಇಡೀ ತಂಡಕ್ಕೆ ಖುಷಿ ಕೊಟ್ಟಿತ್ತು. ಜಗ್ಗೇಶ್, ಪ್ರಮೋದ್, ಸುಧಾರಾಣಿ, ಮಧು, ಹಿತಾ ಚಂದ್ರಶೇಖರ್, ದತ್ತಣ್ಣ ಹೀಗೆ ದೊಡ್ಡ ತಾರಾಗಣ ಚಿತ್ರದಲ್ಲಿತ್ತು.
ಪ್ರೀಮಿಯರ್ ಪದ್ಮಿನಿ ಚಿತ್ರದಲ್ಲಿ ಕಾರ್ ಮಾಲೀಕ ವಿನಾಯಕ್ ಪಾತ್ರದಲ್ಲಿ ಜಗ್ಗೇಶ್, ಕಾರು ಚಾಲಕ ನಂಜುಂಡಿ ಪಾತ್ರದಲ್ಲಿ ಪ್ರಮೋದ್ ಬಣ್ಣ ಹಚ್ಚಿದರು. ಎರಡು ತಲೆಮಾರಿನ ಜೀವನಶೈಲಿಯನ್ನು ಇಂದಿನ ಪ್ರಪಂಚಕ್ಕೆ ತೆರೆಗಿಡುವ ಪ್ರಯತ್ನ ಮಾಡಲಾಗಿತ್ತು. ನವರಸ ನಾಯಕ ಜಗ್ಗೇಶ್ ಆರಂಭದಲ್ಲಿ ತಮ್ಮದೇ ಶೈಲಿಯ ಡೈಲಾಗ್ಗಳಿಂದ ಎಲ್ಲರ ಹುಬ್ಬೇರಿಸಿದರು, ಬಳಿಕ ಬೇರೆಯದ್ದೇ ರೀತಿಯಲ್ಲಿ ಕಥೆಯನ್ನ ಹೆಗಲ ಮೇಲೆ ಹೊತ್ತು ಸಾಗಿದರು. ಯುವ ನಟ ಪ್ರಮೋದ್ ಕೂಡ ಸಿಕ್ಕ ಅವಕಾಶವನ್ನ ಸೊಗಸಾಗಿ ಬಳಸಿಕೊಂಡಿದರು. ಇದೀಗ ಚಿತ್ರದ ಸೀಕ್ವೆಲ್ಗೆ ತಯಾರಿ ನಡೆದಿದೆ.
ಮತ್ತೊಮ್ಮೆ ನವರಸ ನಾಯಕ ಜಗ್ಗೇಶ್ ಮತ್ತು ಪ್ರಮೋದ್ ಪ್ರೀಮಿಯರ್ ಪದ್ಮಿನಿ ಏರಿ ಜಾಲಿ ರೈಡ್ ಹೊರಡೋಕ್ಕೆ ಸಿದ್ಧರಾಗಿದ್ದಾರೆ. ಚಿತ್ರದಲ್ಲಿ ಪ್ರೀಮಿಯರ್ ಪದ್ಮಿನಿ ಕಾರ್ ಕೂಡ ಮಹತ್ವದ ಪಾತ್ರ ವಹಿಸಿತ್ತು.ಇದೀಗ ಸೀಕ್ವೆಲ್ನಲ್ಲಿ ಬಹುತೇಕ ಅದೇ ತಾರಾಗಣ ಮತ್ತು ತಂತ್ರಜ್ಞರ ತಂಡ ಕೆಲಸ ಮಾಡಲಿದೆ. ಲಾಕ್ಡೌನ್ ನಡುವೆಯೇ ಪ್ರೀಮಿಯರ್ ಪದ್ಮಿನಿ ಮುಂದುವರೆದ ಭಾಗದ ಕಥೆಯನ್ನ ಸಿದ್ಧಪಡಿಸಲಾಗಿದೆ. ಪ್ರೀ ಪ್ರೊಡಕ್ಷನ್ ವರ್ಕ್ ಸಹ ನಡೀತಿದೆ.
ಈಗಾಗಲೇ ಚಿತ್ರತಂಡ ಪ್ರೀಮಿಯರ್ ಪದ್ಮಿನಿ ಸೀಕ್ವೆಲ್ ಅನೌನ್ಸ್ ಮಾಡಿದೆ. ಪ್ರೀಕ್ವೆಲ್ನಲ್ಲಿ ಭಾವನಾತ್ಮಕವಾಗಿ ಕಥೆ ಹೇಳಿದ್ದ ನಿರ್ದೇಶಕರು ಈ ಬಾರಿ ಕಾಮಿಡಿ ಮೂಲಕ ಪ್ರೇಕ್ಷಕರನ್ನ ರಂಜಿಸೋಕ್ಕೆ ಸಜ್ಜಾಗಿದ್ದಾರೆ. ನಟ ಜಗ್ಗೇಶ್ ಕೂಡ ಟ್ವೀಟ್ ಮಾಡಿ ಪ್ರೀಮಿಯ್ ಪದ್ಮಿನಿ ಸೀಕ್ವೆಲ್ನಲ್ಲಿ ನಟಿಸೋಕ್ಕೆ ಉತ್ಸುಕರಾಗಿರೋದಾಗಿ ತಿಳಿಸಿದ್ದಾರೆ.
ಸದ್ಯ ಲಾಕ್ಡೌನ್ನಿಂದ ಸಿನಿಮಾ ಶೂಟಿಂಗ್ ಮತ್ತು ಪ್ರದರ್ಶನಕ್ಕೆ ಅನುಮತಿ ಇಲ್ಲ. ಸ್ಕ್ರಿಪ್ಟ್ ರೆಡಿಯಾಗಿದ್ದು, ಪ್ರೀ ಪ್ರೊಡಕ್ಷನ್ ವರ್ಕ್ ಕೂಡ ನಡೀತಿದ್ದು, ಸರ್ಕಾರ ಶೂಟಿಂಗ್ ಅನುಮತಿ ನೀಡಿದ ತಕ್ಷಣ ಪ್ರೀಮಿಯರ್ ಪದ್ಮಿನಿ ಸ್ಟಾರ್ಟ್ ಆಗಲಿದೆ.