Top

ಈ ಕಲರ್‌ ಕಲರ್‌ ಐಸ್ ಕ್ಯೂಬ್ಸ್ ಬಳಕೆ ನಿಮ್ಮ ತ್ವಚೆಯ ಮೇಲೆ ಹೇಗೆ ಪರಿಣಾಮ ಬೀರತ್ತೆ ಗೊತ್ತಾ..?

ಈ ಕಲರ್‌ ಕಲರ್‌ ಐಸ್ ಕ್ಯೂಬ್ಸ್ ಬಳಕೆ ನಿಮ್ಮ ತ್ವಚೆಯ ಮೇಲೆ ಹೇಗೆ ಪರಿಣಾಮ ಬೀರತ್ತೆ ಗೊತ್ತಾ..?
X

ನಾವೀಗ ಚಳಿಗಾಲದ ಕೊನೆಯ ತಿಂಗಳಲ್ಲಿದೀವಿ. ಇನ್ನೇನು ಕೆಲ ದಿನಗಳಲ್ಲೇ ಬೇಸಿಗೆ ಶುರುವಾಗತ್ತೆ. ಬಿಸಿಲ ಝಳದಿಂದ ತಮ್ಮ ತ್ವಚೆ ಕಾಪಾಡಿಕೊಳ್ಳಲು ನಮ್ಮ ಮಹಿಳಾಮಣಿಯರಂತೂ ಸರ್ಕಸ್ ಮಾಡೋದಂತೂ ಗ್ಯಾರಂಟಿ. ಬಿಸಿಲಿನಿಂದ ತ್ವಚೆ ಕಾಪಾಡಿಕೊಳ್ಳೋದು ಒಂದು ಸಾಹಸವೇ ಸರಿ.

ಈ ಟೈಮಲ್ಲಿ ತಾಜಾ ಹಣ್ಣಿನ ರಸ, ರಸಭರಿತ ಹಣ್ಣುಗಳು, ನಿಂಬೆ ಪಾನಕ, ದೇಹಕ್ಕೆ ತಂಪು ನೀಡುವ ಹಸಿ ತರಕಾರಿ ಹೀಗೆ ಆರೋಗ್ಯಕರ ಆಹಾರವನ್ನು ಸೇವಿಸಿ, ನಮ್ಮ ಆರೋಗ್ಯ ಮತ್ತು ಸೌಂದರ್ಯವನ್ನ ಕಾಪಾಡಿಕೊಳ್ಳಬಹುದು.

ಹಾಗೇನೆ ಈ ಬೇಸಿಗೆಯಲ್ಲಿ ಸೆಕೆಯಿಂದ ಮೈ, ಮುಖವೆಲ್ಲ ಬೆವೆತುಹೋಗುವುದರಿಂದ ದಿನಕ್ಕೆ 3-4 ಬಾರಿ ಸ್ನಾನ ಮಾಡಬೇಕೆನಿಸುತ್ತದೆ. ಈ ವೇಳೆ ಐಸ್ ಕ್ಯೂಬ್‌ಗಳನ್ನ ಬಳಸೋದು ಉತ್ತಮ. ಬರೀ ಐಸ್ ಕ್ಯೂಬ್ಸ್ ಬದಲು ಅದರ ಜೊತೆ ಕೆಲ ತರಕಾರಿ ಹಣ್ಣುಗಳನ್ನು ಬೆರೆಸಿ ಐಸ್ ಕ್ಯೂಬ್ಸ್ ತಯಾರಿಸಿದ್ರೆ, ಎಕ್ಸ್‌ಟ್ರಾ ಸೌಂದರ್ಯವನ್ನ ನಿಮ್ಮದಾಗಿಸಿಕೊಳ್ಳಬಹುದು.

ಐಸ್ ಕ್ಯೂಬ್ಸ್ : ಏನೂ ಹಾಕದೇ ಬರೀ ಐಸ್ ಕ್ಯೂಬ್ಸ್‌ ಬಳಸಿದ್ರೂ ಕೂಡ ನಿಮ್ಮ ತ್ವಚೆ ಆರೋಗ್ಯಕರವಾಗಿರತ್ತೆ. ನಾವು ಈ ಮೊದಲೇ ಐಸ್ ಫೇಶಿಯಲ್ ಬಗ್ಗೆ ನಿಮಗೆ ಮಾಹಿತಿ ನೀಡಿದ್ದೇವೆ. ಅಲ್ಲದೇ, ಇದು ಬಾಲಿವುಡ್ ಖ್ಯಾತ ತಾರೆ ಕತ್ರೀನಾ ಕೈಫ್ ಬ್ಯೂಟಿ ಸಿಕ್ರೇಟ್ ಕೂಡಾ ಹೌದು. ಹಲವು ನಟಿಮಣಿಯರು ಬೆಳಿಗ್ಗೆ ಐಸ್ ಕ್ಯೂಬ್ಸ್‌ನಿಂದ ತಮ್ಮ ಮುಖವನ್ನ ರಬ್ ಮಾಡಿಕೊಂಡೇ ತಮ್ಮ ದಿನ ಶುರು ಮಾಡ್ತಾರೆ. ನೀವು ಕೂಡ ಪ್ರತಿನಿತ್ಯ ಬೆಳಿಗ್ಗೆ ಐಸ್‌ಕ್ಯೂಬ್‌ನಿಂದ ನಿಮ್ಮ ಮುಖವನ್ನ ರಬ್ ಮಾಡಿಕೊಂಡ್ರೆ ನಿಮ್ಮ ಸ್ಕಿನ್ ಹೊಳೆಯುವುದ್ರಲ್ಲಿ ನೋ ಡೌಟ್.

ಬೀಟ್‌ರೂಟ್ ಐಸ್‌ ಕ್ಯೂಬ್ಸ್ : ಬೀಟ್‌ರೂಟ್‌ ಸೇವನೆ ಹೃದಯದ ಆರೋಗ್ಯಕ್ಕೆ ಒಳ್ಳೆಯದು ಅನ್ನೋದನ್ನ ಕೇಳಿರ್ತಿವಿ. ಆದ್ರೆ ಸೌಂದರ್ಯ ಇಮ್ಮಡಿಗೊಳಿಸೋಕ್ಕೂ ಕೂಡ ಬೀಟ್‌ರೂಟ್ ಸಹಕಾರಿ. ಕ್ಯಾರೇಟ್- ಬೀಟ್ರೂಟ್‌ ಜ್ಯೂಸ್ ಕುಡಿಯುವುದರಿಂದ ನಿಮ್ಮ ತ್ವಚೆ ಆರೋಗ್ಯಕರವಾಗಿರುತ್ತೆ. ಹಾಗೆಯೇ ಬೀಟ್‌ರೂಟ್‌ನಿಂದ ಮಾಡಿದ ಐಸ್‌ ಕ್ಯೂಬ್‌ನಿಂದ ನಿಮ್ಮ ಮುಖ ರಬ್ ಮಾಡಿದ್ರೆ, ಪಿಂಕ್ ಪಿಂಕ್ ಫೇಸ್ ನಿಮ್ಮದಾಗತ್ತೆ.

ಒಂದು ಬೀಟ್‌ರೂಟನ್ನ ಚೆನ್ನಾಗಿ ತೊಳೆದು ಸಿಪ್ಪೆ ತೆಗೆದುಕೊಳ್ಳಿ. ನಂತರ ಬೀಟ್ರೂಟ್‌ ತುರಿದು, ಈ ಮಿಶ್ರಣವನ್ನು ಮಿಕ್ಸಿಗೆ ಹಾಕಿ ಸಣ್ಣಗೆ ರುಬ್ಬಿ. ಈಗ ಈ ಬೀಟ್‌ರೂಟ್ ಪೇಸ್ಟ್‌ಗೆ ಎರಡು ಸ್ಪೂನ್ ನಿಂಬೆರಸ ಮತ್ತು ಒಂದು ಸ್ಪೂನ್ ಮುಲ್ತಾನಿ ಮಿಟ್ಟಿ ಹಾಕಿ ಕದಡಿ. ಈಗ ಈ ಮಿಶ್ರಣವನ್ನು ಐಸ್ ಕ್ಯೂಬ್ ಟ್ರೇನಲ್ಲಿ ಹಾಕಿ, ಫ್ರಿಜರ್‌ನಲ್ಲಿರಿಸಿ ಐಸ್ ಕ್ಯೂಬ್ ತಯಾರಿಸಿ. ಪ್ರತಿದಿನ ಈ ಐಸ್ ಕ್ಯೂಬ್‌ನಿಂದ ಫೇಸ್‌ ಮಸಾಜ್ ಮಾಡಿ.

ಟೊಮೆಟೋ ಐಸ್ ಕ್ಯೂಬ್ಸ್ : ಎರಡು ಟೊಮೆಟೋ ತೆಗೆದುಕೊಂಡು ಅದನ್ನ ಚೆನ್ನಾಗಿ ತೊಳೆದು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ಈ ತುಂಡುಗಳಿಗೆ ನೀರು ಹಾಕದೇ ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಿ. ಈ ಮಿಶ್ರಣಕ್ಕೆ ಅರ್ಧ ಚಮಚ ಅರಿಷಿಣ ಪುಡಿ, ಒಂದು ಸ್ಪೂನ್ ನಿಂಬೆರಸ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣದಿಂದ ಐಸ್ ಕ್ಯೂಬ್ಸ್ ತಯಾರಿಸಿ ಪ್ರತಿದಿನ ಉಪಯೋಗಿಸಿ.

ನಿಂಬೆಹಣ್ಣಿನ ಐಸ್‌ ಕ್ಯೂಬ್ಸ್ : ಒಂದು ನಿಂಬೆಹಣ್ಣನ್ನ ತುರಿದು, ಆ ತುರಿದ ಸಿಪ್ಪೆಯ ಮಿಶ್ರಣವನ್ನ ಸಪರೇಟ್ ಆಗಿರಿಸಿ. ಸಣ್ಣ ಕಪ್ ಆ್ಯಲೋವೇರಾ ಜ್ಯೂಸ್, ಒಂದು ಸ್ಪೂನ್ ಆ್ಯಲೋವೇರಾ ಜೆಲ್, ಒಂದು ವಿಟಮಿನ್ ಈ ಕ್ಯಾಪ್ಸೂಲ್ ಈ ಎಲ್ಲ ಮಿಶ್ರಣವನ್ನು ಸೇರಿ ತಯಾರಿಸಿದ ರಸವನ್ನು ಐಸ್ ಕ್ಯೂಬ್‌ ಟ್ರೇಗೆ ಹಾಕಿ. ಇದರ ಮೇಲೆ ತುರಿದ ನಿಂಬೆಹಣ್ಣಿನ ಸಿಪ್ಪೆಯನ್ನ ಉದುರಿಸಿ. ಹೀಗೆ ಮಾಡಿ, ಮುಖಕ್ಕೆ ಹಚ್ಚಿಕೊಂಡರೆ, ಈ ಕ್ಯೂಬ್ ಸ್ಕ್ರಬ್‌ ರೀತಿ ಕೆಲಸ ಮಾಡುತ್ತದೆ.

ಹಾಲಿನ ಐಸ್‌ ಕ್ಯೂಬ್ಸ್ : ಹಾಲಿನ ಐಸ್‌ಕ್ಯೂಬ್ ಮಾಡೋದು ಸಿಕ್ಕಾಪಟ್ಟೆ ಸುಲಭ. ಒಂದು ಗ್ಲಾಸ್ ಹಾಲಿಗೆ ಒಂದು ಸ್ಪೂನ್ ಜೇನುತುಪ್ಪ ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣದಿಂದ ಐಸ್ ಕ್ಯೂಬ್‌ ತಯಾರಿಸಿ ಬಳಸಿ.

ಸೌತೆಕಾಯಿ ಐಸ್‌ ಕ್ಯೂಬ್ಸ್ : ಬೇಸಿಗೆಯಲ್ಲಿ ಸೌತೆಕಾಯಿ ಬಳಕೆ ಅತೀ ಉತ್ತಮ. ಇದರಿಂದ ತಯಾರಿಸಿದ ಐಸ್‌ಕ್ಯೂಬ್ ಬಳಸಿದ್ರೆ ಗ್ಲೋಯಿಂಗ್ ಸ್ಕಿನ್ ನಿಮ್ಮದಾಗುತ್ತದೆ. ಒಂದು ಸೌತೇಕಾಯಿಯ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ, ಅದಕ್ಕೆ 3 ಸ್ಪೂನ್ ರೋಸ್‌ ವಾಟರ್, 4 ಸ್ಪೂನ್ ನಿಂಬೆರಸ ಮಿಶ್ರಣ ಮಾಡಿ ಚೆನ್ನಾಗಿ ರುಬ್ಬಿ. ಈಗ ಈ ಪೇಸ್ಟ್‌ನಿಂದ ಐಸ್ ಕ್ಯೂಬ್ ತಯಾರಿಸಿ, ಬಳಸಿ.

ಪಪಾಯಾ ಐಸ್ ಕ್ಯೂಬ್ಸ್ : ಚಿಕ್ಕ ತುಂಡು ಪಪ್ಪಾಯಿ ಹಣ್ಣನ್ನು ಮಿಕ್ಸಿಗೆ ಹಾಕಿ ರುಬ್ಬಿ ಜ್ಯೂಸ್ ತಯಾರಿಸಿಕೊಳ್ಳಿ. ಈ ಜ್ಯೂಸ್‌ನಿಂದ ಐಸ್ ಕ್ಯೂಬ್ ತಯಾರಿಸಿ, ಬಳಸಿ.

ಈ ರೀತಿಯಾಗಿ ನೀವು ಆ್ಯಲೋವೇರಾ ಜೆಲ್, ಕಿತ್ತಳೆ ಹಣ್ಣು, ಕಲ್ಲಂಗಡಿ ಹಣ್ಣುಗಳನ್ನು ಬಳಸಿ ಐಸ್ ಕ್ಯೂಬ್ ತಯಾರಿಸಿ ಬಳಸಬಹುದು.

ವಿಶೇಷ ಸೂಚನೆ: ಈ ಮೇಲಿನ ಐಸ್‌ ಕ್ಯೂಬ್‌ಗಳಲ್ಲಿ ಯಾವುದಾದರೂ ಒಂದು ಐಸ್ ಕ್ಯೂಬನ್ನು ಬಳಸಿ. ಕೆಲ ದಿನಗಳ ಗ್ಯಾಪ್‌ ನೀಡಿ ಬೇರೆ ಬೇರೆ ಐಸ್ ಕ್ಯೂಬ್‌ಗಳನ್ನ ಬಳಸಬಹುದು.

ಇನ್ನು ಕೆಲವರಿಗೆ ಹಾಲು, ಹಣ್ಣು, ತರಕಾರಿಗಳನ್ನ ಬಳಸಿದ್ರೆ ಅಲರ್ಜಿಯಾಗುವ ಸಾಧ್ಯತೆ ಇರುತ್ತದೆ. ಅಂಥವರು ಐಸ್ ಕ್ಯೂಬನ್ನ ಕೈಗೆ ಮಸಾಜ್ ಮಾಡಿ. ಅಲರ್ಜಿಯಾಗದಿದ್ದರಷ್ಟೇ ಮುಖಕ್ಕೆ ಬಳಸಿ.

ಈ ಐಸ್ ಕ್ಯೂಬ್‌ಗಳನ್ನ ತುಂಬಾ ದಿನಗಳ ಕಾಲ ಫ್ರಿಜ್‌ನಲ್ಲಿರಿಸಬೇಡಿ. ದಿನಕ್ಕೆ 2 ಐಸ್‌ ಕ್ಯೂಬ್ಸ್‌ ಬಳಸಿದ್ರೂ ಪರವಾಗಿಲ್ಲ. ಆದ್ರೆ 3-4ಕ್ಕಿಂತ ಹೆಚ್ಚು ದಿನ ಈ ಐಸ್‌ ಕ್ಯೂಬ್ಸನ್ನ ಫ್ರಿಜ್‌ನಲ್ಲಿರಿಸಬೇಡಿ.

ಬಳಸುವ ಹಣ್ಣು, ತರಕಾರಿಗಳು ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಆದಷ್ಟು ಫ್ರೆಶ್‌ ಆಗಿರುವ ಹಣ್ಣು, ತರಕಾರಿಗಳನ್ನ ಬಳಸಿದ್ರೆ ಉತ್ತಮ.

ಒಳ್ಳೆಯ ರಿಸಲ್ಟ್‌ಗಾಗಿ ಐಸ್‌ ಕ್ಯೂಬ್‌ಗಳಿಂದ 5ರಿಂದ6 ನಿಮಿಷಗಳ ಕಾಲ ಮಸಾಜ್ ಮಾಡಬೇಕು.

ಈ ಎಲ್ಲ ಪ್ರಯೋಗಗಳನ್ನು ಮಾಡಿಯೂ ಕೂಡ ಮುಖದಲ್ಲಿನ ಸಮಸ್ಯೆ ದೂರವಾಗದಿದ್ದರೆ ವೈದ್ಯರಲ್ಲಿ ತೋರಿಸಿ.

Next Story

RELATED STORIES