ಎತ್ತಿಗೆ 25ನೇ ವರ್ಷದ ಬರ್ತ್​ಡೇ ಆಚರಣೆ ಮಾಡಿದ ಅನ್ನದಾತ!

ಹುಬ್ಬಳ್ಳಿ: ಇತ್ತೀಚಿನ ಡಿಜಿಟಲ್​​ ಯುಗದಲ್ಲಿ ಮನುಷ್ಯರು ಅದ್ದೂರಿಯಾಗಿ ಜನ್ಮ ದಿನ ಆಚರಣೆ ಮಾಡಿಕೊಳ್ಳುವದು ಇದೀಗ ಟ್ರೆಂಡ್ ಆಗಿದೆ. ಆದರೆ, ಇಲ್ಲೊಬ್ಬ ಅನ್ನದಾತ ತನ್ನ ಮನೆಯಲ್ಲಿ ಹುಟ್ಟಿ ಬೆಳೆದು ಮನೆಗಾಗಿ ದುಡಿದ ಎತ್ತಿಗಾಗಿ 25ನೇ ವರ್ಷದ ಹುಟ್ಟು ಹಬ್ಬ ಆಚರಿಸುವ ಮೂಲಕ ರೈತ ಮಿತ್ರನಿಗೆ ಗೌರವ ಸಲ್ಲಿಸಿದ್ದಾರೆ.

ಅರೇ ಇದು ಸತ್ಯ, ಈ ರೀತಿಯಾಗಿ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸುತ್ತಿರುವವರು ಗಾಮನಗಟ್ಟಿ ಕುಟುಂಬದ ಸದಸ್ಯರಾಗಿದ್ದಾರೆ. ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದ ಅಶೋಕ ಗಾಮನಗಟ್ಟಿ ಎನ್ನುವವರಿಗೂ ಈ ಎತ್ತಿಗೂ ಅವಿನಾಭಾವ ಸಂಬಂಧವಿದೆ. ಹೀಗಾಗಿ ತಮ್ಮ ಮನೆಯ ಎತ್ತಿಗೆ ಮನುಷ್ಯರು ಆಚರಣೆ ಮಾಡಿಕೊಳ್ಳುವಂತೆ ಹುಟ್ಟುಹಬ್ಬ ಆಚರಿಸುವ ಮೂಲಕ ಗಮನ ಸೆಳೆದಿದ್ದಾರೆ.

ಅಶೋಕ ಗಾಮನಗಟ್ಟಿ ಕುಟುಂಬಸ್ಥರು ಎತ್ತಿಗೆ ವಿಶೇಷ ಪೂಜೆ ಮಾಡಿ, ಆರತಿ ಬೆಳಗಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡುವ ಮೂಲಕ‌ ವಿಶಿಷ್ಟವಾಗಿ ಹುಟ್ಟು ಹಬ್ಬ ಆಚರಿಸಿದರು. 1994 ಜುಲೈ 12ರಂದು ಅದರಗುಂಚಿ ಗ್ರಾಮದಲ್ಲಿ ಈ ಎತ್ತು ಜನಿಸಿತ್ತು. ಗಾಮನಗಟ್ಟಿಯವರ ಮನೆಯಲ್ಲಿ ಸಾಕಿದ ಆಕಳಿಗೆ ಜನಿಸಿದ ಎತ್ತು ಇದಾಗಿದೆ. ಇದಕ್ಕೆ ‘ರಾಮ‌’ ಎಂದು ನಾಮ‌ಕರಣ ಮಾಡಿದ್ದಾರೆ.‌ ಸುಮಾರು 16 ವರ್ಷಗಳ ಕಾಲ ಮನೆತನದ ವ್ಯವಸಾಯದಲ್ಲಿ ಭಾಗಿಯಾಗಿ ಮನೆಗಾಗಿ ದುಡಿದಿದೆ.‌ ಮನೆಯಲ್ಲಿ ಹುಟ್ಟಿ, ಮನೆಯ ವ್ಯವಸಾಯದಲ್ಲಿ ಭಾಗಿಯಾಗಿದ್ದ ಎತ್ತನ್ನು ಮಾರಾಟ ಮಾಡದೆ ಕುಟುಂಬ ಜೋಪಾನ ಮಾಡುತ್ತಿದೆ.‌

ಎತ್ತಿಗೆ ವಯಸ್ಸಾದ ಮೇಲೆ ಅದೆಷ್ಟು ರೈತರು ಎತ್ತುಗಳನ್ನು ಮಾರಾಟ ಮಾಡುತ್ತಾರೆ. ಆದರೆ, ಈ ಕುಟುಂಬಸ್ಥರು ಎತ್ತನ್ನು ಮಾರಾಟ ಮಾಡದೆ ಬಹಳ ಜೋಪಾನ ಮಾಡಿ ಹುಟ್ಟುಹಬ್ಬ ಆಚರಿಸುವ ಮೂಲಕ ಇತರರಿಗಿಂತ ಭಿನ್ನವಾಗಿ ತಮ್ಮ ನಡೆಯನ್ನು ಪ್ರದರ್ಶನ ಮಾಡಿದ್ದಾರೆ. ಅದರ ಜೊತೆಗೆ ಇವರ ಕುಟುಂಬದ ಜೊತೆಗಿನ ಎತ್ತಿನ ಆತ್ಮೀಯತೆಗೆ ಇದು ಸಾಕ್ಷಿಯಾಗಿದೆ.‌

ಒಟ್ಟಾರೇ ಪ್ರಾಣಿಗಳನ್ನು ಮನೆಯಲ್ಲಿ ಸಾಕಿ ಅವುಗಳಿಗೆ ಬೇಕಾದಂತಹ ಆಹಾರ ನೀಡಿ ಸತ್ಕಾರ ಮಾಡೋದು ಸಾಮಾನ್ಯ. ಆದರೆ, ಜಮೀನಿನಲ್ಲಿ ಕಷ್ಟಪಟ್ಟು ರೈತನಿಗೆ ಮಿಷಿನಂತೆ ಕೆಲಸ ಮಾಡಿ ರೈತರ ಮಿತ್ರರಾಗಿರುವ ಇಂತಹ ಮೂಕ ಪ್ರಾಣಿಗಳಿಗೆ ಈ ಪರಿಯ ಪ್ರೀತಿ, ಜೋಪಾನ ಮಾಡಿರೋದು ಬಹಳ ಅಪರೂಪ ಸುದ್ದಿ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.