ಬಿಜೆಪಿ ಕುದುರೆ ವ್ಯಾಪಾರದ ವಿರುದ್ಧ ಕಾಂಗ್ರೆಸ್ – ಜೆಡಿಎಸ್ ಪ್ರತಿತಂತ್ರ

ಬಿಜೆಪಿ ಕುದುರೆ ವ್ಯಾಪಾರದಲ್ಲಿ ತೊಡಗಿದ್ದು, ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ಆಮಿಷವೊಡ್ಡಿ ಪ್ರಜಾಪ್ರಭುತ್ವವನ್ನೇ ಕಗ್ಗೊಲೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಜಿ.ಡಿ.ಮಂಜುನಾಥ್ ನೇತೃತ್ವದಲ್ಲಿ ಜಿಲ್ಲಾ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು  ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿದರು.

ಶಿವಮೊಗ್ಗದ ಗಾಂಧೀ ಪಾರ್ಕ್ ನಲ್ಲಿರುವ ಗಾಂಧಿ ಪ್ರತಿಮೆಯ ಎದುರು ಪ್ರತಿಭಟನೆ ನಡೆಸಿದ ಜೆಡಿಎಸ್ ನ ಕಾರ್ಯಕರ್ತರು, ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿಗೆ ಬಿಜೆಪಿಯೇ ಕಾರಣ. ಪಕ್ಷದ ಮುಖಂಡರ ಕುಮ್ಮಕ್ಕಿನಿಂದ ಪ್ರಜಾಪ್ರಭುತ್ವ ವ್ಯವಸ್ಥೆಯೇ ದಾರಿತಪ್ಪುತ್ತಿದೆ ಎಂದರು.

ಆಮಿಷವೊಡ್ಡಿ ಜೆಡಿಎಸ್- ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಬಿಜೆಪಿಯ ಕುತಂತ್ರ ರಾಜಕಾರಣ ಖಂಡನೀಯ. ಸಾಲಮನ್ನಾ ಮಾಡುವ ಮೂಲಕ ಜನಪರ ಆಡಳಿತ ನೀಡುತ್ತಿದ್ದ ಮೈತ್ರಿ ಸರ್ಕಾರವನ್ನು ಅಸ್ತಿರಗೊಳಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡರ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವವನ್ನೇ ಕಗ್ಗೊಲೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೆಪಿಸಿಸಿ ಕಾರ್ಯದರ್ಶಿ ದೇವೇಂದ್ರಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಇಂದು ಶಿವಮೊಗ್ಗದ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿಗೆ ಬಿಜೆಪಿಯೇ ಕಾರಣ. ಪಕ್ಷದ ಮುಖಂಡರ ಕುಮ್ಮಕ್ಕಿನಿಂದ ಪ್ರಜಾಪ್ರಭುತ್ವ ವ್ಯವಸ್ಥೆಯೇ ದಾರಿತಪ್ಪುತ್ತಿದೆ. ಇದೊಂದು ಅಸಂವಿಧಾನಿಕ ಕ್ರಿಯೆ. ಆಮಿಷವೊಡ್ಡಿ ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಬಿಜೆಪಿಯ ಕುತಂತ್ರ ರಾಜಕಾರಣ ಖಂಡನೀಯ ಎಂದು ಬಿಜೆಪಿ ಮುಖಂಡರ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮುಂಬೈಗೆ ಅತೃಪ್ತ ಶಾಸಕರನ್ನು ಭೇಟಿ ಮಾಡಲು ತೆರಳಿದ್ದ ರಾಜ್ಯದ ಪ್ರಭಾವಿ ಸಚಿವರಾದ ಡಿ.ಕೆ.ಶಿವಕುಮಾರ್ ಅವರನ್ನು ಮುಂಬೈ ಪೊಲೀಸರು ನಡೆಸಿಕೊಂಡ ರೀತಿಯ ವಿರುದ್ಧವು ಸಹ ಪ್ರತಿಭಟನಾಕಾರರು ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದರು.

ಇತ್ತ ತುಮಕೂರಿನಲ್ಲಿಯೂ ರಾಜ್ಯದ ಮೈತ್ರಿ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಕುತಂತ್ರ ನಡೆಸುತ್ತಿದೆ ಎಂದು ಆರೋಪಿಸಿ ಜೆಡಿಎಸ್‌ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಟೌನ್‌ಹಾಲ್‌ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಜೆಡಿಎಸ್‌ ಜಿಲ್ಲಾ ಕಾರ್ಯಾಧ್ಯಕ್ಷ ಅಂಜನಪ್ಪ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಸಮ್ಮಿಶ್ರ ಸರಕಾರಕ್ಕೆ ಬಿಜೆಪಿ ನಿರಂತರವಾಗಿ ಕಿರುಕುಳ ನೀಡುತ್ತಿದೆ. ಶಾಸಕರ ಕುದುರೆ ವ್ಯಾಪಾರ ಮಾಡುವ ಮೂಲಕ ಮೈತ್ರಿ ಸರಕಾರವನ್ನು ಕೆಡವಲು ಬಿಜೆಪಿ ಮುಂದಾಗಿರುವುದು ಖಂಡನೀಯ ಎಂದರು.

ಪ್ರಜಾಪ್ರಭುತ್ವದ ತೀರ್ಮಾನದಂತೆ ಅಧಿಕಾರದಲ್ಲಿರುವ ಸರಕಾರವನ್ನು ಕೆಡವಲು ಬಿಜೆಪಿ ಆಪರೇಷನ್‌ ಕಮಲದಂತಹ ಕುಕೃತ್ಯಕ್ಕೆ ಇಳಿದಿರುವುದು ನಾಚಿಕೆಗೇಡಿನ ವಿಚಾರ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಬಿಜೆಪಿಯ ನಡೆ ವಿರುದ್ಧ ದೇಶದ ನಾಗರಿಕರು ಪ್ರತಿಭಟನೆ ನಡೆಸಬೇಕು. ಇಂತಹ ಕೆಟ್ಟ ರಾಜಕೀಯ ಬೆಳವಣಿಗೆಗಳನ್ನು ಮತದಾರರು ಬೀದಿಗಿಳಿದು ಪ್ರತಿಭಟಿಸಬೇಕು ಎಂದು ಮನವಿ ಮಾಡಿದರು.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.