ಬಾಂಬ್​​ ದಾಳಿಯಲ್ಲಿ ಮೂಲಭೂತವಾದಿ ಮುಸ್ಲಿಂ ಸಂಘಟನೆಗಳ ಕೈವಾಡ – ಶ್ರೀಲಂಕಾ ಆರೋಪ

ಶ್ರೀಲಂಕಾ, ಕೊಲಂಬೊ: ಒಂದರ ಮೇಲೊಂದರಂತೆ ಸಿಡಿದ 8 ಬಾಂಬ್‌ಗಳಿಗೆ ಬಲಿಯಾದವರ ಸಂಖ್ಯೆ 290ಕ್ಕೇರಿದೆ. ಇಂದು ಕೂಡ ಮತ್ತೊಂದು ಬಾಂಬ್‌ ಸ್ಫೋಟಿಸಿದ್ದು, ಮೂವರು ಬಲಿಯಾಗಿದ್ದಾರೆ. ರಾಷ್ಟ್ರೀಯ ತುರ್ತುಪರಿಸ್ಥಿತಿ ಘೋಷಿಸಿದ್ದು, ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಸರಣಿ ಸ್ಫೋಟದ ಹಿಂದೆ ಸ್ಥಳೀಯ ಇಸ್ಲಾಮಿಕ್ ಸಂಘಟನೆಯಾದ ನ್ಯಾಷನಲ್ ತೌಹೀತ್ ಜಮಾ ಅತ್  ಕೈವಾಡದ ಶಂಕೆ ವ್ಯಕ್ತವಾಗಿದೆ.

ಸರಣಿ ಬಾಂಬ್‌ ಸ್ಫೋಟಕ್ಕೆ ರಕ್ತಮಯ ಆಗಿರುವ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಈಗ ಎಲ್ಲಿ ನೋಡಿದರೂ ಯೋಧರು ಕಾವಲು. ಮೃತರ ಸಂಖ್ಯೆ 290ಕ್ಕೆ ಏರಿದೆ. ದೇಶದಲ್ಲಿ ಆತಂಕದ ವಾತಾವಣ ಇದೆ. ಈ ನಡುವೆ, ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ರಾಷ್ಟ್ರೀಯ ತುರ್ತುಪರಿಸ್ಥಿತಿ ಘೋಷಿಸಿದ್ದು, ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ತುರ್ತುಪರಿಸ್ಥಿತಿ ಘೋಷಣೆ ಮಾಡುವ ಮೂಲಕ ಪೊಲೀಸರು ಹಾಗೂ  ಭೂ ಸೇನೆ, ವಾಯು ಸೇನೆ ಹಾಗೂ ನೌಕಾ ಸೇನೆಗೆ ಸಾರ್ವಜನಿಕರ ಭದ್ರತೆಗಾಗಿ ವಿಶೇಷ ಅಧಿಕಾರ ಸಿಕ್ಕಂತಾಗಿದೆ. ಎಲ್ಲ ಸಾಮಾಜಿಕ ಮಾಧ್ಯಮಗಳಿಗೂ ನಿರ್ಬಂಧ ವಿಧಿಸಲಾಗಿದೆ. ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ 24 ಮಂದಿ ಶಂಕಿತರು ಅರೆಸ್ಟ್‌ ಆಗಿದ್ದಾರೆ.

ಮೂಲಭೂತವಾದಿ ಮುಸ್ಲಿಂ ಸಂಘಟನೆಗಳ ಕೈವಾಡ

ಸರಣಿ ಸ್ಫೋಟದ ಹಿಂದೆ ಸ್ಥಳೀಯ ಇಸ್ಲಾಮಿಕ್ ಸಂಘಟನೆಯಾದ ನ್ಯಾಷನಲ್ ತೌಹೀತ್ ಜಮಾ ಅತ್  ಕೈವಾಡದ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಶ್ರೀಲಂಕಾ ಕೇಂದ್ರ ಸಚಿವರೂ ಆಗಿರುವ ಸರ್ಕಾರದ ವಕ್ತಾರ, ರಜಿತ ಸೇನಾರತ್ನೆ, ಈ ಸಂಘಟನೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ಲಭಿಸಿದೆಯೇ ಎಂಬುದರ ಬಗ್ಗೆಯೂ ಸರ್ಕಾರ ತನಿಖೆ ಮಾಡುತ್ತಿದೆ ಎಂದಿದ್ದಾರೆ. ನ್ಯಾಷನಲ್ ತೌಹೀತ್ ಜಮಾ ಅತ್ ಮೇಲೆ ಕಳೆದ ವರ್ಷ ಶ್ರೀಲಂಕಾದ ಹಲವೆಡೆ ಬೌದ್ಧ ಪ್ರತಿಮೆ ನಾಶಪಡಿಸಿದ ಆರೋಪವೂ ಇದೆ.

ಮತ್ತೊಂದು ಬಾಂಬ್‌ ಸ್ಫೋಟ..ಮೂರು ಸಾವು

ಇಂದು ಕೊಲಂಬೊದಲ್ಲಿ ಮತ್ತೊಂದು ಬಾಂಬ್‌ ಸ್ಫೋಟಿಸಿದ್ದು, ಮೂವರು ಬಲಿಯಾಗಿದ್ದಾರೆ. ಚರ್ಚ್‌ವೊಂದರ ಬಳಿ ವ್ಯಾನ್‍ನಲ್ಲಿ ಬಾಂಬ್ ಸ್ಫೋಟಿಸಿದೆ. ಬಾಂಬ್ ನಿಷ್ಕ್ರಿಯಗೊಳಿಸುವ ವೇಳೆಯೇ ಈ ಸ್ಫೋಟ ಸಂಭವಿಸಿದೆ. ಸ್ಕಾಟ್ಲೆಂಡ್‌ನ ಧನಿಕ ಆಂಡೆರ್ಸ್ಸ್ ಹಾಲ್ಚ್ ಪಾಲ್ಸೆನ್ ಅವರ ಮೂವರು ಮಕ್ಕಳು ಸಾವಿಗೀಡಾಗಿದ್ದಾರೆ. ಈಸ್ಟರ್ ರಜಾದಿನ ಕಳೆಯುವುದಕ್ಕಾಗಿ ಪಾಲ್ಸೆನ್ ಕುಟುಂಬ ಶ್ರೀಲಂಕಾಗೆ ಬಂದಿತ್ತು. ಡೆನ್ಮಾರ್ಕ್ ಮೂಲದ ಪಾಲ್ಸೆನ್ ಸ್ಕಾಟ್ಲೆಂಡ್‌ನಲ್ಲಿ ಐತಿಹಾಸಿಕ ಎಸ್ಟೇಟ್‌ಗಳನ್ನು ಖರೀದಿ ಮಾಡುವ ಮೂಲಕ ಸ್ಕಾಟ್ಲೆಂಡ್‌ನ ಮಹಾಧನಿಕ ಎನಿಸಿಕೊಂಡಿದ್ದರು.

85 ಬಾಂಬ್‌ ಡಿಟೋನೇಟರ್‌ ವಶಕ್ಕೆ

ಈ ನಡುವೆ, ಶ್ರೀಲಂಕಾದಲ್ಲಿ ಭಾರೀ ದುರಂತವೊಂದು ತಪ್ಪಿದೆ. ಈಸ್ಟರ್‌ ದುರಂತದ ಬಳಿಕ ಯೋಧರು ಮತ್ತು ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಕೊಲಂಬೊದ ಬಸ್‌ನಿಲ್ದಾಣವೊಂದರಲ್ಲಿ 85ಕ್ಕೂ ಹೆಚ್ಚು ಬಾಂಬ್‌ ಡಿಟೋನೇಟರ್‌ಗಳು ಪತ್ತೆಯಾಗಿವೆ. ಬಳಿಕ ಅವುಗಳನ್ನು ನಿಷ್ಕ್ರೀಯಗೊಳಿಸಲಾಗಿದೆ. ಇದರಿಂದ ಶ್ರೀಲಂಕಾದಲ್ಲಿ ಮತ್ತೆ ನೆತ್ತರು ಚೆಲ್ಲುವುದು ತಪ್ಪಿದಂತಾಗಿದೆ. ಪೊಲೀಸರು ಹಾಗೂ ಸೇನಾ ಯೋಧರು ಎಲ್ಲೆಡೆ ಬಿಗಿಬಂದೋಬಸ್ತ್‌ ಕೈಗೊಂಡಿದ್ದಾರೆ.

ಊರುಗಳತ್ತ ಮುಖ ಮಾಡಿದ ವಿದೇಶಿಗರು

ಬೆಳಿಗ್ಗೆ ಕರ್ಫ್ಯೂ ಹಿಂಪಡೆಯಲಾಗಿದ್ದರೂ ಕೊಲಂಬೋದಲ್ಲಿ ಜನರ ಸಂಚಾರ ತೀರಾ ಕಡಿಮೆ ಇತ್ತು. ಶಸ್ತ್ರಸಜ್ಜಿತರಾದ ಸೈನಿಕರು ಪ್ರಮುಖ ಹೋಟೆಲ್, ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ ಪಹರೆ ಕಾಯುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದ ಪ್ರಯಾಣಿಕರು ನಿರ್ಬಂಧ ಹಿಂಪಡೆದ ನಂತರ ಮನೆಗಳಿಗೆ ಹಿಂತಿರುಗುತ್ತಿದ್ದಾರೆ.

ಶ್ರೀಲಂಕಾ ದುರಂತಕ್ಕೆ ಇಡೀ ಪ್ರಪಂಚವೇ ಮರುಗಿದೆ. ಹಲವಡೆ ಸಂತಾಪ ಸೂಚಿಸಲಾಗ್ತಿದೆ. ಪ್ಯಾರೀಸ್‌ನ ಐಪಲ್‌ ಟವರ್‌ನಲ್ಲಿ ಎಲ್ಲ ವಿದ್ಯುತ್‌ದೀಪ ಆರಿಸುವ ಮೂಲಕ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಬುದ್ಧ ಹುಟ್ಟಿದ ನಾಡು ಬಿಹಾರದ ಗಯಾದಲ್ಲಿ ಮೊಂಬತ್ತಿ ಬೆಳಗಿಸಿ ಸಂತಾಪ ಸೂಚಿಸಲಾಗಿದೆ. ಇತ್ತ, ಕೇರಳದ ಹಲವು ಚರ್ಚ್‌ಗಳಿಗೆ ಬಿಗಿ ಭದ್ರತೆ ಒದಗಿಸಲಾಗಿದೆ.

 

Recommended For You

Leave a Reply

Your email address will not be published. Required fields are marked *