ಆಡಿಯೋ ಲೀಕ್ ಬಗ್ಗೆ ನಟ ಯಶ್ ಪ್ರಶ್ನಿಸಿದ್ದು ಹೀಗೆ ..!

ಸಕ್ಕರೆ ನಾಡಿನ ರಣಾಂಗಣದಲ್ಲಿ ಕ್ಷಣ-ಕ್ಷಣಕ್ಕೂ ಕುತೂಹಲ ಹೆಚ್ಚಾಗ್ತಿದ್ದು, ಮತದಾರ ಪ್ರಭುವಿನ ಮನ ಗೆಲ್ಲೋಕೆ ಅಭ್ಯರ್ಥಿಗಳು ಕೂಡ ನಾನಾ ಕಸರತ್ತು ಮಾಡ್ತಿದ್ದಾರೆ. ಮದರ್ ಇಂಡಿಯಾ ಪರ ಅಖಾಡಕ್ಕೆ ಇಳಿದಿರೋ ಜೋಡೆತ್ತು ಭರ್ಜರಿ ಕ್ಯಾಂಪೇನ್ ಮಾಡ್ತಿವೆ.

ಲೋಕಸಭಾ ಚುನಾವಣೆಯಲ್ಲಿ ಕ್ಷಣ-ಕ್ಷಣಕ್ಕೂ ಕುತೂಹಲ ಕೆರಳಿಸುತ್ತಿರೋ ಕ್ಷೇತ್ರವೆಂದ್ರೆ ಮಂಡ್ಯ ಅಖಾಡ.ಅಂಬಿ ನಿಧನದ ಅನುಕಂಪವೇ ಸುಮಲತಾಗೆ ಶ್ರೀರಕ್ಷೆಯಾಗಿದ್ದು, ದರ್ಶನ್, ಯಶ್ ಬಲ ತುಂಬ್ತಿದ್ದಾರೆ.. ಭಾನುವಾರವಾದ್ರೂ ಸಕ್ಕರೆ ನಾಡಲ್ಲಿ ಸುಮಲತಾ, ದರ್ಶನ್, ಯಶ್ ಮೂವರು ಆಯ್ದ ಮೂರು ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ನಡೆಸಿದರು.

ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಪ್ರಚಾರ ಭರ್ಜರಿಯಾಗಿ ನಡೀತು.. ಇದಕ್ಕೂ ಮುನ್ನ  ಅಂಬೇಡ್ಕರ್ ಜಯಂತಿ ಪ್ರಯುಕ್ತ ಜಿಲ್ಲಾಧಿಕಾರಿ ಕಚೇರಿ ಎದುರಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಅಲ್ದೇ ಕ್ರೈಸ್ತ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟಿರುವ ಸುಮಕ್ಕ, ಮಂಡ್ಯ ನಗರದ ಸಾಡೆ ಚರ್ಚ್‌ಗೆ ಭೇಟಿ ನೀಡಿ, ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾದರು. ಜೊತೆಗೆ ಭಯ ಇರೋದಕ್ಕೇ ಚುನಾವಣಾ ಆಯೋಗಕ್ಕೆ ದೂರು ನೀಡಿರೋದು ಅಂತ ದೋಸ್ತಿಗಳಿಗೆ ತಿರುಗೇಟು ಕೊಟ್ಟರು.

ಮದರ್ ಇಂಡಿಯಾ ಸುಮಲತಾ ಅಂಬರೀಶ್ ಗೆಲುವಿಗೆ ಟೊಂಕ ಕಟ್ಟಿ ನಿಂತಿರುವ ಜೋಡೆತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿ ಭಾಯ್ ಯಶ್, ಮದ್ದೂರು, ಕೆ.ಆರ್.ಪೇಟೆಯಲ್ಲಿ ಮತಬೇಟೆ ನಡೆಸಿದರು. ಮಲ್ಲನಕುಪ್ಪೆ, ನಿಡಘಟ್ಟ, ಕೆಸ್ತೂರು, ಬೆಸಗರಹಳ್ಳಿ ಸೇರಿದಂತೆ ಹಲವು ಹಳ್ಳಿಗಳಿಗೆ ಭೇಟಿ ನೀಡಿದ ದರ್ಶನ್ ಕ್ರಮಶಂಖ್ಯೆ 20 ಸುಮಕ್ಕನಿಗೆ ಮತ ನೀಡುವಂತೆ ಕರೆ ನೀಡಿದರು.

ಸಿನಿಮಾ ನಟರನ್ನ ನೋಡಲು ಜನ ಬರ್ತಾರೆ ಓಟ್ ಹಾಕಲ್ಲ ಅನ್ನೋ JDS ನಾಯಕರ ಹೇಳಿಕೆಗೆ ತಿರುಗೇಟು ಕೊಟ್ಟರು. ಒಂದು ಜೋಡೆತ್ತು ತೆಗೆದುಕೊಳ್ಳಲು ಒಂದೂವರೆ ಲಕ್ಷ ಬೇಕು. ನಾಯಿ ತಗೋತೀನಿ ಅಂದರು 20ಸಾವಿರ ಬೇಕೆ ಬೇಕು. ಅಂಥದ್ರಲ್ಲಿ  500-ಸಾವಿರಕ್ಕೆ ಮತ ಮಾರಿಕೊಂಡು ಪ್ರಾಣಿಗಳಿಗಿಂತ ಕೀಳಾಗೋದು ಬೇಡ. ಈ ಬಾರಿ ಅಭಿಮಾನ ಪಕ್ಕಕ್ಕಿಟ್ಟು ಸ್ವಾಭಿಮಾನಕ್ಕಾಗಿ ಸುಮಲತಾಗೆ ಮತ ಹಾಕಿ ಅಂತ ಮಲ್ಲನಕುಪ್ಪೆ ಗ್ರಾಮದಲ್ಲಿ ಮತದಾರರಿಗೆ ಕರೆಕೊಟ್ಟರು.

ಈ ಕಡೆ  ಕೆಸ್ತೂರು ಗ್ರಾಮದಲ್ಲಿ  2 ಕ್ವಿಂಟಾಲ್ ತೂಕದ ಆ್ಯಪಲ್ ಹಾರ ಹಾಕಿ ಐರಾವತನಿಗೆ ಸ್ವಾಗತಿಸಲಾಯ್ತು… ಆದ್ರೆ ಕೈ ನೋವಿನ ಕಾರಣಕ್ಕೆ ಅರ್ಧಕ್ಕೆ ದರ್ಶನ್ ಪ್ರಚಾರ ಮೊಟಕುಗೊಳಿಸಿದರು.

ಗ್ರಾಮಸ್ಥರಿಗೆ ಆಡಿಯೋ ಕೇಳಿದೀರ ಅಲ್ವಾ ಅಂತ ಪ್ರಶ್ನಿಸಿದ ಯಶ್

ಮತ್ತೊಂದೆಡೆ ಸುಮಲತಾ ಪರ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ರಾಕಿ ಭಾಯ್ ಯಶ್ ರೋಡ್ ಶೋ ನಡೆಸಿದ್ರು. ಸಾಸಲು ಗ್ರಾಮದಿಂದ ಪ್ರಚಾರ ಆರಂಭಿಸಿದ ಯಶ್‌ಗೆ  ಕ್ರೇನ್ ಮೂಲಕ ಬೃಹತ್ ಹಾರ ಹಾಕಿ ಅದ್ಧೂರಿ ಸ್ವಾಗತ ಕೋರಲಾಯ್ತು. ಇದೇ ವೇಳೆ ಆಡಿಯೋ ಲೀಕ್ ಮಾತನಾಡಿದ ಯಶ್, ಗ್ರಾಮಸ್ಥರಿಗೆ ಆಡಿಯೋ ಕೇಳಿದೀರ ಅಲ್ವಾ ಅಂತ ಪ್ರಶ್ನಿಸಿ ಭ್ರಷ್ಟಾಚಾರವನ್ನ ತೆರೆದಿಟ್ಟರು.

ಬಹಿರಂಗ ಪ್ರಚಾರಕ್ಕೆ ಕಡೆ ದಿನವಾದ ಮಂಗಳವಾರ ಸುಮಲತಾ ಶಕ್ತಿಪ್ರದರ್ಶನಕ್ಕೆ ಮುಂದಾಗಿದ್ದಾರೆ. ಬೆಳಗ್ಗೆ  10 ಗಂಟೆಗೆ ಕಾಳಿಕಾಂಭ ದೇವಾಲಯದಲ್ಲಿ ಪೂಜೆ ಸಲ್ಲಿಸಲಿರೋ ಸುಮಕ್ಕ, ಸಿಲ್ವರ್ ಜ್ಯುಬಿಲಿ ಪಾರ್ಕಲ್ಲಿ ಬೃಹತ್ ಸಮಾವೇಶ ನಡೆಸಲಿದ್ದಾರೆ. ನಂತ್ರ  ಸ್ವಾಭಿಮಾನಿ ಸಮ್ಮಿಲನ ಹೆಸರಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು ಜೋಡೆತ್ತುಗಳಾದ ದರ್ಶನ್ ಮತ್ತು ಯಶ್ ಕೂಡ ಭಾಗವಹಿಸಲಿದ್ದಾರೆ.

ಒಟ್ನಲ್ಲಿ ಮಂಡ್ಯ ರಣಕಣ ಕ್ಷಣ-ಕ್ಷಣಕ್ಕೂ ಕುತೂಹಲ ಕೆರಳಿಸುತ್ತಿದೆ. ಗೆಲುವಿಗಾಗಿ ರಣತಂತ್ರ ರೂಪಿಸಿರೋ ಸುಮಲತಾ ಬಿಡುವಿಲ್ಲದೇ ಪ್ರಚಾರ ಮಾಡ್ತಿದ್ದಾರೆ. ಮತ್ತೊಂದೆಡೆ ಮದರ್ ಇಂಡಿಯಾ ಗೆಲುವಿಗೆ ಪಣ ತೊಟ್ಟಿರೋ ಜೋಡೆತ್ತುಗಳು ರಣಾಂಗಣದಲ್ಲಿ ಅಬ್ಬರಿಸ್ತಿವೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.