ಎಲೆಕ್ಷನ್​ ಮುಗಿದ ಬೆನ್ನಲೆ ಆಂಧ್ರ ಸಿಎಂ ಕೇಂದ್ರ ಚುನಾವಣಾ ಆಯೋಗದ ಕದತಟ್ಟಿದ್ರು ಶಾಕಿಂಗ್​​ ​..!

ನವದೆಹಲಿ: ಆಂಧ್ರಪ್ರದೇಶ ವಿಧಾನಸಭೆ ಹಾಗೂ ಲೋಕಸಭಾ ಚುನಾವಣಾ ಇದೀಗ ತೀವ್ರ ವಿವಾದಕ್ಕೀಡಾಗಿದೆ. ಮತದಾನ ನಡೆದ ಎರಡು ದಿನಗಳ ಬಳಿಕ ಕೇಂದ್ರ ಚುನಾವಣಾ ಆಯೋಗದ ಕದ ತಟ್ಟಿರುವ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಕನಿಷ್ಠ 150 ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಆಗ್ರಹಿಸಿದ್ದಾರೆ. ನಮ್ಮ ಬೇಡಿಕೆಗೆ ಆಯೋಗದಿಂದ ಸೂಕ್ತ ಪ್ರತಿಕ್ರಿಯೆ ದೊರೆಯದಿದ್ದರೆ ಧರಣಿ ಕೂರುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

ಮತದಾನ ಪ್ರಕ್ರಿಯೆಯಲ್ಲಿ ಇವಿಎಂಗಳ ಬದಲು ಪೇಪರ್‌ ಬ್ಯಾಲೆಟ್‌ ಮೂಲಕ ಮತ ಸಂಗ್ರಹಿಸುವಂತೆ ಆಗ್ರಹಿಸಿದ್ದಾರೆ. ಅಧಿಕೃತ ಮಾಹಿತಿ  ಪ್ರಕಾರವೇ ರಾಜ್ಯದಲ್ಲಿ 4,583 ಇವಿಎಂಗಳಲ್ಲಿ ತೊಡಕುಂಟಾಗಿತ್ತು. ಇದು ದೇಶದ ದೊಡ್ಡ ದುರಂತ ಎಂದಿದ್ದಾರೆ.

ಅಲ್ಲದೆ, ಸ್ವಾಯತತ್ತೆ ಸಂಸ್ಥೆಯ ವಿಶ್ವಾಸಾರ್ಹತೆ ಪ್ರಶ್ನಿಸಿರುವ ಆಂಧ್ರ ಸಿಎಂ, ಕೇಂದ್ರ ಸರ್ಕಾರ ಮತ್ತು ಮೋದಿ ಹೇಳಿದಂತೆ ಆಯೋಗ ಕೆಲಸ ಮಾಡ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಚುನಾವಣಾ ಅಧಿಕಾರಿಗಳು ವೈಎಸ್‌ಆರ್‌ ಕಾಂಗ್ರೆಸ್ ಪರ ಕೆಲಸ ಮಾಡಿದ್ದಾರೆ ಅಂತಲೂ ಆಪಾದಿಸಿದ್ದಾರೆ.

ಮತದಾನದ ದಿನವೇ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದ ಚಂದ್ರಬಾಬು ನಾಯ್ಡು ಮರುಮತದಾನ ನಡೆಸುವಂತೆ ಒತ್ತಾಯಿಸಿದ್ದರು. ಆಂಧ್ರಪ್ರದೇಶದ ಮುಖ್ಯ ಚುನಾವಣಾಧಿಕಾರಿ ಗೋಪಾಲ್‌ ಕೃಷ್ಣ ದ್ವಿವೇದಿ ಮತದಾನ ಮಾಡಲು ಹೋದ ಮತಗಟ್ಟೆಯಲ್ಲಿಯೂ ಮತಯಂತ್ರ ಕಾರ್ಯನಿರ್ವಹಿಸ್ತಿರಲಿಲ್ಲ ಅಂತಲೂ ಪತ್ರದಲ್ಲಿ ಪ್ರಸ್ತಾಪಿಸಿದ್ದರು.

ಇದೀಗ ಮರುಮತದಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಕಳೆದ ಗುರುವಾರ ನಡೆದ ಮೊದಲ ಹಂತದ ಸಾರ್ವತ್ರಿಕ ಚುನಾವಣೆಯಲ್ಲಿ ಆಂಧ್ರದ 25 ಲೋಕಸಭಾ ಕ್ಷೇತ್ರ ಹಾಗೂ 175 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆದಿದೆ. ಒಟ್ಟು ಮತದಾನ ಪ್ರಮಾಣ ಶೇಕಡ 66ರಷ್ಟು ದಾಖಲಾಗಿದೆ. ಆದ್ರೆ, ಕಳೆದ ಚುನಾವಣೆಯಲ್ಲಿ ಶೇಕಡ 78.8 ಮತದಾನ ನಡೆದಿತ್ತು.

ಆಂಧ್ರದಲ್ಲಿ ಈ ಬಾರಿ ವೈಎಸ್‌ಆರ್‌ ಕಾಂಗ್ರೆಸ್ ಅಧ್ಯಕ್ಷ ಜಗನ್‌ ಹವಾ ಜೋರಾಗಿದ್ದು, ನಾಯ್ಡುಗೆ ಪ್ರಬಲ ಎದುರಾಳಿ ಕೂಡ ಆಗಿದ್ದಾರೆ. ಮತದಾನದ ದಿನ ಇವಿಎಂ ಗೊಂದಲದ ಕಾರಣಕ್ಕಾಗಿಯೇ ಟಿಡಿಪಿ ಮತ್ತು ವೈಎಸ್‌ಆರ್‌ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದು ಇಬ್ಬರು ಬಲಿಯಾಗಿದ್ದರು.

ಇನ್ನು, ಮತ್ತೊಂದು ಪ್ರಬಲ ಪಕ್ಷವಾದ ಪವನ್‌ ಕಲ್ಯಾಣ್ ಮುಂದಾಳತ್ವದ ಜನಸೇನಾ ಅಭ್ಯರ್ಥಿ ಕೂಡ ಇವಿಎಂಗಳ ಕಾರ್ಯನಿರ್ವಹಣೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ಮತಗಟ್ಟೆಯಲ್ಲೇ ಮತಯಂತ್ರ ಧ್ವಂಸ ಮಾಡಿದ್ದರು.

ಇವಿಎಂಗಳ ಕಾರ್ಯನಿರ್ವಹಣೆ ಬಗ್ಗೆ ಚಂದ್ರಬಾಬು ನಾಯ್ಡು ಒಬ್ಬರೆ ಅಷ್ಟೇ ಅಲ್ಲ ಜಮ್ಮು- ಕಾಶ್ಮೀರದ ಮಾಜಿ ಸಿಎಂ ಓಮರ್‌ ಅಬ್ದುಲ್ಲಾ ಕೂಡ ಅನುಮಾನ ವ್ಯಕ್ತಪಡಿಸಿದ್ದರು. ಆಂಧ್ರ ಮತದಾನದಂದೇ ಜಮ್ಮು- ಕಾಶ್ಮೀರದಲ್ಲಿ ವೋಟಿಂಗ್‌ ನಡೆದಿದ್ದು, ಕೆಲವು ಇವಿಎಂಗಳ ಕಾಂಗ್ರೆಸ್‌ ಬಟನ್‌ ಕೆಲಸ ಮಾಡಿಲ್ಲ ಅಂತ ಹೇಳಿದ್ದರು.

2014ರ ಲೋಕಸಭಾ ಚುನಾವಣೆಯಿಂದೀಚೆಗೆ ಮತಯಂತ್ರಗಳ ಕಾರ್ಯನಿರ್ವಹಣೆ ಬಗ್ಗೆ ಎನ್‌ಡಿಎಯೇತರ ಪಕ್ಷಗಳು ಶಂಕೆ ವ್ಯಕ್ತಪಡಿಸುತ್ತಲೇ ಬಂದಿವೆ. ಈ ಬಾರಿಯೂ ಚುನಾವಣೆಗೂ ಮೊದಲು ಈ ವಿಚಾರ ಸುಪ್ರೀಂಕೋರ್ಟ್‌ಗೂ ಕೂಡ ಹೋಗಿತ್ತು.

 

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.