ಪ್ರಧಾನಿ ಮೋದಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯಿಂದ 3 ಸವಾಲ್

ನವದೆಹಲಿ: ಕಾಂಗ್ರೆಸ್‌ ವಿರುದ್ಧ ಸಾಲು ಸಾಲು ಹಗರಣಗಳ ಆರೋಪ ಮಾಡ್ತಿರೋ ಪ್ರಧಾನಿ ಮೋದಿಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ 3 ಸವಾಲು ಹಾಕಿದ್ದಾರೆ. ‘ಚರ್ಚೆಗೆ ಬರಲು ಹೆದರುತ್ತಿರಬೇಕು’ ಎಂದು ಮೋದಿಯ ಕಾಲೆಳೆದಿರುವ ರಾಹುಲ್‌, ‘ತೆರೆದ ಪುಸ್ತಕ’ ಸವಾಲು ನೀಡಿ, ಚರ್ಚೆಗೆ ಬನ್ನಿ ಅಂತ ಆಹ್ವಾನಿಸಿದ್ದಾರೆ. ಟ್ವಿಟ್ಟರ್‌ನಲ್ಲಿ Scared2Debate ಎಂಬ ಹ್ಯಾಷ್‌ಟ್ಯಾಗ್‌ ಮೂಲಕ ಚರ್ಚೆಗೆ ಕರೆದಿರುವ ಅವರು, ತಾವು ಕೇಳುವ ವಿಷಯಗಳ ಬಗ್ಗೆ ಮಾತನಾಡಿ ಎಂದು ಸವಾಲು ಹಾಕಿದ್ದಾರೆ.

ಭ್ರಷ್ಟಾಚಾರದ ಬಗ್ಗೆ ನನ್ನೊಂದಿಗೆ ಚರ್ಚಿಸಲು ಪ್ರಧಾನಿ ಮೋದಿ ಹೆದರುತ್ತಿದ್ದಾರೆಯೇ? ಹಾಗಾದರೆ ನಾನು ನಿಮಗೆ ಕೊಂಚ ಸುಲಭ ಮಾಡುತ್ತೇನೆ. ರಫೇಲ್‌ ಮತ್ತು ಅಂಬಾನಿ, ನೀರವ್‌ ಮೋದಿ ಹಾಗೂ ಅಮಿತ್‌ ಶಾ ಮತ್ತು ನೋಟ್ ಬ್ಯಾನ್. ಈ ಮೂರು ವಿಷಯಗಳ ಬಗ್ಗೆ ಚರ್ಚಿಸಿ ಎಂದು ರಾಹುಲ್ ಗಾಂಧಿ ಟ್ವೀಟ್‌ ಮಾಡಿದ್ದಾರೆ.

ರಾಹುಲ್‌ ಗಾಂಧಿ ಪ್ರಧಾನಿ ಮೋದಿಗೆ ಈ ರೀತಿಯ ವಾದಕ್ಕೆ ಕರೆದಿರೋದು ಇದೇ ಮೊದಲೇನಲ್ಲ. ರಫೇಲ್‌ ಖರೀದಿ ಕುರಿತ ಚರ್ಚೆ ತಾರಕಕ್ಕೇರಿದ ಸಂದರ್ಭದಲ್ಲೂ ಮೋದಿ ಮಾತನಾಡಬೇಕು ಎಂದು ಒತ್ತಾಯಿಸಿದ್ದರು. ಈಗಲೂ ರಫೆಲ್‌ ವಿಷಯ ಪ್ರಸ್ತಾಪಿಸಿರುವ ರಾಹುಲ್‌, ಉದ್ಯಮಿ ಅನಿಲ್‌ ಅಂಬಾನಿಗೆ ಲಾಭ ಮಾಡಿಕೊಡುವ ಉದ್ದೇಶದಿಂದಲೇ ರಿಲಯನ್ಸ್ ಡಿಫೆನ್ಸ್‌ ಕಂಪನಿ ರಫೇಲ್‌ ಒಪ್ಪಂದ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

ಆದರೆ, ರಾಹುಲ್‌ ಟ್ವೀಟ್‌ಗೆ ಟ್ವಿಟ್ಟರ್‌ ಮೂಲಕವೇ ಮೋದಿ ಪ್ರತ್ಯುತ್ತರ ನೀಡಿದ್ದಾರೆ. ರಾಹುಲ್‌ಗೂ ಮೂರು ಪ್ರತಿಸವಾಲ್ ಹಾಕಿದ್ದಾರೆ.  3.5 ಲಕ್ಷ ಕೋಟಿ ರೂಪಾಯಿ ಸಾಲಮನ್ನಾಗೊಂಡ ಆ 15 ಮಂದಿ ಉದ್ಯಮಿಗಳು ಯಾರು? ರಫೇಲ್‌ ಒಪ್ಪಂದ 58 ಸಾವಿರ ಕೋಟಿಯದ್ದಾದರೆ, ಅನಿಲ್‌ ಅಂಬಾನಿಗೆ ಹೇಗೆ 130 ಸಾವಿರ ಕೋಟಿ ರೂಪಾಯಿ ಸಿಗುತ್ತದೆ? ಅನಿಲ್‌ ಅಂಬಾನಿ ವಂಚಕ ಎನ್ನುವುದಾದರೆ, ವಕೀಲರೂ ಆದ ಕಾಂಗ್ರೆಸ್ ಮುಖಂಡ ಕಪಿಲ್‌ ಸಿಬಲ್‌ ಅವರ ಪರ ಯಾಕೆ ವಾದಿಸುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

ಈ ಮಧ್ಯೆ, ದೆಹಲಿಯ ಕಾಂಗ್ರೆಸ್‌ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಪಿಲ್‌ ಸಿಬಲ್‌, ನೋಟ್‌ ಬ್ಯಾನ್‌ ಭಾರತದ ಇತಿಹಾಸದಲ್ಲೇ ನಡೆದ ಅತಿ ದೊಡ್ಡ ಹಗರಣ ಎಂದು ದೂರಿದ್ದಾರೆ. ವಿದೇಶದಿಂದ ಮುದ್ರಿತವಾಗಿ ಬಂದ ಹಣವನ್ನು ರಾಜಕಾರಣಿಗಳಿಗೂ ಉದ್ಯಮಿಗಳಿಗೂ ನೀಡಲಾಗಿದೆ. ಇದರಲ್ಲಿ ಬ್ಯಾಂಕ್ ಸಿಬ್ಬಂದಿಯೂ ಭಾಗಿಯಾಗಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಇದರಲ್ಲಿ ಶಾಮೀಲಾಗಿದ್ದಾರೆ. 6 ತಿಂಗಳಿಗೂ ಮೊದಲೇ ಆರ್‌ಬಿಐ ಗವರ್ನರ್‌ ಊರ್ಜಿತ್ ಪಟೇಲ್ ಸಹಿ ಇರುವ ನೋಟು ಮುದ್ರಿಸಲಾಗಿತ್ತು ಎಂದು ಆರೋಪಿಸಿದ್ದಾರೆ.

ಸದ್ಯ ಟ್ವಿಟ್ಟರ್‌ನಲ್ಲಿ Scared2Debate ಎಂಬ ಹ್ಯಾಷ್‌ಟ್ಯಾಗ್‌ನಡಿ ಕಾಂಗ್ರೆಸ್‌ ಮತ್ತು ಬಿಜೆಪಿಯ ವಾಗ್ವಾದ ಜೋರಾಗಿದೆ. ಮಾಜಿ ಸಂಸದೆ ರಮ್ಯಾ ಸಹ ಈ ಬಗ್ಗೆ ಟ್ವೀಟ್‌ ಮಾಡಿದ್ದು, ‘ಬಹುಶಃ ಚರ್ಚಿಸಲು ಪ್ರಧಾನಿ ಮೋದಿ ಅವರಿಗೆ ಭಯವಿರಬೇಕು. ಏಕೆಂದರೆ, ಅವರು ಭ್ರಷ್ಟರು. ಮೋದಿ Scared2Debate ಬಗ್ಗೆ ನೀವೇನು ಹೇಳುತ್ತೀರೀ? ಎಂದು ಟೀಕಿಸಿದ್ದಾರೆ. ಕರ್ನಾಟಕ ಕಾಂಗ್ರೆಸ್ ಕೂಡ ಟ್ವಿಟ್ಟರ್‌ನಲ್ಲಿ ಮೋದಿ ಕಾಲೆಳೆದಿದೆ.

 

 

Recommended For You

Leave a Reply

Your email address will not be published. Required fields are marked *