ನಾನು ದಬ್ಬಾಳಿಕೆಗೆ, ಬೆದರಿಕೆಗೆ ಬಗ್ಗಲ್ಲ ಸುಮಲತಾ ತಿರುಗೇಟು 

ನಿನ್ನೆಯಷ್ಟೇ ನಿಖಿಲ್ ಕುಮಾರಸ್ವಾಮಿ ಸಕ್ಕರೆ ಸಂಗ್ರಾಮದಲ್ಲಿ ಅಬ್ಬರಿಸಿ ಹೂಂಕರಿಸಿದ್ದರು. ಸಹಸ್ರಾರು ಜೆಡಿಎಸ್ ಕಾರ್ಯಕರ್ತರ ಸಮ್ಮುಖದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಮುಂದಾಳತ್ವದಲ್ಲಿ ಪುತ್ರ ನಿಖಿಲ್​​ ನಾಮಿನೇಷನ್​ ಮಾಡಿಸಿದ್ರು. ಜೊತೆಗೆ ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ಧವೂ ಕಿಡಿಕಾರಿದ್ದರು. ಇದಕ್ಕೆ ಮಂಡ್ಯ ಗೌಡ್ತಿ ತಿರುಗೇಟು ನೀಡಿದ್ದು ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೆ ಫೇಸ್​ಬುಕ್ ಮೂಲಕವೆ ಟಾನಿಕ್​ ನೀಡಿದ್ದಾರೆ.

ಮಂಡ್ಯದ ಅಖಾಡದಲ್ಲಿ ದಿನಕ್ಕೊಂದು ಇಂಟರೆಸ್ಟಿಂಗ್​. ಕ್ಷಣಕ್ಕೊಂದು ಅಚ್ಚರಿ ಬೆಳವಣಿಗೆಗಳು ನಡೀತಿವೆ. ಯಾಕಂದ್ರೆ ಸ್ಟಾರ್ ವಾರ್​ನಿಂದ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಿಕ್ಕಾಪಟ್ಟೆ ಮೈಲೇಜ್​ ಸಿಕ್ತಿದೆ. ಸಿಎಂ ಕುಮಾರಸ್ವಾಮಿಗೆ ವೈಯಕ್ತಿಕ ಪ್ರತಿಷ್ಠೆ. ಮಾಜಿ ಸಂಸದ ಅಂಬರೀಶ್ ಪತ್ನಿ ಸುಮಲತಾಗೆ ಅನುಕಂಪದ ಆಧಾರದಲ್ಲಿ ರಾಜಕೀಯದಲ್ಲಿ ಗುರ್ತಿಸಿಕೊಳ್ಳೋ ಆಸೆ.

ಮುಖ್ಯಮಂತ್ರಿಗಳ ಸ್ವಯಂ ಪ್ರತಿಷ್ಠೆ ಮತ್ತು ಸುಮಲತಾಗೆ ಮಂಡ್ಯ ಜಿಲ್ಲೆಯ ವಿವಿಧ JDS ಮುಖಂಡರ ಲೇವಡಿಗಳಿಂದ ಕಳೆದುಕೊಂಡಿರೋ ಮಾನಸಿಕ ಶಾಂತಿ ಮತ್ತು ಆತ್ಮಸ್ಥೈರ್ಯ ಮರಳಿ ಪಡೆಯುವ ಹುಮ್ಮಸ್ಸು. ಈ ಕಾರಣಕ್ಕೆ ಕಾವೇರಮ್ಮ ಹರಿಯುವ ನಾಡಲ್ಲಿ ಬೇಸಿಗೆ ಧಗೆಯನ್ನೇ ಚುನಾವಣಾ ಕಾವು ಮೀರಿಸಿಬಿಟ್ಟಿದೆ.

ನಿನ್ನೆ ಜೆಡಿಎಸ್​​ ಮತ್ತು ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮಹಾನ್ ಘರ್ಜನೆ ಮೂಲಕ ಜಿಲ್ಲಾಧಿಕಾರಿಗೆ ಶುಭಘಳಿಗೆಯಲ್ಲಿ ಉಮೇದುವಾರಿಕೆ ಸಲ್ಲಿಸಿದ್ದರು. ಆನಂತರ ಬೃಹತ್ ಸಮಾವೇಶ ಕೂಡ ನಡೆದಿತ್ತು.

ಈ ಬೆನ್ನಲ್ಲೇ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​, ಬೆಳ್ಳಂಬೆಳಗ್ಗೆ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.. ‘ನಾನು ದಬ್ಬಾಳಿಕೆ, ಬೆದರಿಕೆಗೆ ಬಗ್ಗಲ್ಲ. ಪ್ರಜಾಪ್ರಭುತ್ವದ ಗಂಭೀರತೆ ಗಮನದಲ್ಲಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇನೆ ಅಂತ ಮೊದಲ ಸಾಲಿನಲ್ಲೇ ವಿರೋಧಿಗಳ ಕೊರಳುಪಟ್ಟಿಗೆ ಕೈ ಹಾಕಿದ್ದಾರೆ..ಉದಾತ್ತವಾದ ಆದರ್ಶ ಮುಂದಿಟ್ಟುಕೊಂಡು ಚುನಾವಣಾ ಕಣದಲ್ಲಿದ್ದೇನೆ. ಮಂಡ್ಯ ಜನತೆ ಇದನ್ನು ಸ್ವೀಕರಿಸುತ್ತಾರೆ ಅನ್ನುವ ನಂಬಿಕೆ ಇದೆ ಅನ್ನೋ ವಾಕ್ಯದ ಮೂಲಕ ಬೆಂಬಲಿಗರು ಮತ್ತು ಕಾರ್ಯಕರ್ತರನ್ನ ವಿಶ್ವಾಸಕ್ಕೆ ತೆಗೊಳ್ಳೋದ್ರಲ್ಲಿ ಸುಮಲತಾ ಅಂಬಿ ಸಕ್ಸಸ್ ಆಗಿದ್ದಾರೆ. ಜೊತೆಗೆ  ಪ್ರಜಾಪ್ರಭುತ್ವ ಉಳಿವಿನ ಮಾತಾಡಿ ಸ್ಪರ್ಧೆ ಪ್ರತಿಯೊಬ್ಬರ ಮೂಲಭೂತ ಹಕ್ಕು. ಇದನ್ನ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಅಂತ ಟಾಂಗ್ ಕೊಟ್ಟಿದ್ದರು.

ಇನ್ನು ಬೆಳಗ್ಗೆಯೇ ಪ್ರಚಾರ ಕಣದಲ್ಲಿ  ಮಂಡ್ಯ ಗೌಡ್ತಿ ಕಾಣಿಸಿಕೊಂಡ್ರು.. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ. ಬೆಳಗೊಲ, ಕೆಆರ್​ಎಸ್ ಸುತ್ತಮುತ್ತ ರೋಡ್ ಶೋ ನಡೆಸಿದ್ರು..

ಪಕ್ಷೇತರ ಅಭ್ಯರ್ಥಿ ಸುಮಕ್ಕಗೆ ಆನೆ ಬಲ ಬಂದಂತಾಗಿದೆ. ಮಂಡ್ಯ ಜಿಲ್ಲಾ ರೈತ ಸಂಘ ಬೆಂಬಲ ಘೋಷಿಸಿದೆ. ಮಂಡ್ಯದಲ್ಲಿ ಬಿಜೆಪಿಗಿಂತಲೂ ಹೆಚ್ಚಿನ ಮತ ಬ್ಯಾಂಕ್​ನ್ನ ರೈತ ಸಂಘ ಹೊಂದಿದೆ. ಇತ್ತೀಚೆಗಷ್ಟೇ ಸುಮಲತಾ ದಿವಂಗತ ಕೆ.ಎಸ್​.ಪುಟ್ಟಣ್ಣಯ್ಯ ಅವರ ಮನೆಗೆ ಭೇಟಿ ನೀಡಿ ಪತ್ನಿ ಸುನೀತಾ ಜೊತೆ ಮಾತುಕತೆ ನಡೆಸಿದ್ರು.

ಈ ಬೆನ್ನಲ್ಲೇ ಇದೀಗ ಸುಮಲತಾರನ್ನ ಬೆಂಬಲಿಸಲು ರೈತ ಸಂಘ ನಿರ್ಧರಿಸಿದೆ. ಜಿಲ್ಲೆಯಲ್ಲಿ ರೈತ ಸಂಘ ಒಂದೂವರೆ ಲಕ್ಷದಷ್ಟು ಮತ ಬ್ಯಾಂಕ್​ ಹೊಂದಿದೆ. ಇದೇ ರೈತ ಸಂಘದ ಬೆಂಬಲದಿಂದ ಈ ಹಿಂದೆ ದರ್ಶನ್​ ಪುಟ್ಟಣ್ಣಯ್ಯ ಕೂಡಾ 78 ಸಾವಿರಕ್ಕೂ ಅಧಿಕ ಮತ ಪಡೆದಿದ್ರು. ಇದೀಗ ಮಂಡ್ಯದ ಗೌಡ್ತಿಗೂ ರೈತ ಸಂಘದ ಸಾಥ್​ ಸಿಕ್ಕಿರೋದು ಮತ್ತಷ್ಟು ಆತ್ಮವಿಶ್ವಾಸ ಮೂಡಿಸಿದೆ. ರೈತ ಸಂಘದ ಪದಾಧಿಕಾರಿಗಳ ಜೊತೆಗಿನ ಸುದ್ದಿಗೋಷ್ಠಿಯಲ್ಲಿ ಸಂಸತ್​ನಲ್ಲಿ ಅನ್ನದಾತರ ಪರ ದನಿ ಎತ್ತುವೆ ಅಂತಂದ್ರು.

ಸಕ್ಕರೆ ನಾಡಲ್ಲಿ ಸುಮಲತಾ ಅಂಬರೀಶ್​ಗೆ ಸಕ್ಕರೆಯೇ ಸಿಗಬೇಕು ಅಂತ ಹಲವು ಸಂಘನೆಗಳು ನಿರ್ಧರಿಸಿದಂತಿವೆ. ಈಗಾಗಲೇ ಕನ್ನಡ ಪರ ಸಂಘಟನೆಗಳು ಬಹಿರಂಗ ಬೆಂಬಲ ಸೂಚಿಸಿವೆ. ಮಂಡ್ಯ ಜಿಲ್ಲೆಯ ಸುಮಾರು 50ಕ್ಕೂ ಹೆಚ್ಚು ಸಂಘಟನೆಗಳು ಸುಮಲತಾಗೆ ಕೈ ಬಲಪಡಿಸ್ತೀವಿ ಅಂತ ಬಹಿರಂಗವಾಗಿ ಘೋಷಿಸಿದ್ದಾರೆ.

ಅಸಲಿಗೆ ಸುಮಲತಾ ಹಣಿಯಲು ವಿರೋಧಿಗಳು ಮಸಲತ್ತು ಮಾಡಿದ್ದಾರೆ. ಸುಮಲತಾ ಹೆಸರಿನ ಮೂವರು ಹೆಣ್ಣುಮಕ್ಕಳಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಿನೇಷನ್​​ ಮಾಡಿಸಿದ್ದಾರೆ. ಸಕ್ಕರೆ ನಾಡಿನ ಸಂಗ್ರಾಮ ದಿನದಿನಕ್ಕೂ ಹೊಸಹೊಸ ಹೊಳಹುಗಳನ್ನ ಪಡೀತಿದೆ. ಸುಮಲತಾ ವರ್ಸಸ್​ ನಿಖಿಲ್ ಕುಮಾರಸ್ವಾಮಿ ಕದನ ಕುತೂಹಲವನ್ನ ಕಾಯ್ದುಕೊಳ್ತಿದೆ. ಮಂಡ್ಯ ಕ್ಷೇತ್ರದ ಮತದಾರನ ಮರ್ಮ ಮಾತ್ರ ಚಿದಂಬರ ರಹಸ್ಯವಾಗಿಯೇ ಉಳಿದಿದೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.