ಮೋದಿ, ಯೋಗಿಗೆ ಪ್ರತ್ಯುತ್ತರ ನೀಡಲು ಮೈತ್ರಿ ತಂತ್ರ

ಉತ್ತರಪ್ರದೇಶದಲ್ಲಿ ಬಿಜೆಪಿಗೆ ತಿರುಗೇಟು ಕೊಡಲು ಮುಂದಾಗಿರುವ ಅಖಿಲೇಶ್‌ – ಮಾಯಾವತಿ ಮೈತ್ರಿಯ ಬಾಹು ವಿಸ್ತರಿಸಿದ್ದಾರೆ. ಮತದಾರರ ಮೇಲೆ ಪ್ರಭಾವ ಬೀರುವ  ಸಣ್ಣ ಸಣ್ಣ ಪಕ್ಷಗಳಿಗೆ ಮೈತ್ರಿಯ ಬಾಗಿಲು ತೆರೆದಿದ್ದಾರೆ.

ದೇಶದ ಮೊದಲ ಹಂತದ ಮತದಾನಕ್ಕೆ ಕೇವಲ ಎರಡು ವಾರ ಬಾಕಿ ಇರುವಂತೆಯೇ ಉತ್ತರಪ್ರದೇಶದಲ್ಲಿ ಅಖಿಲೇಶ್ – ಮಾಯಾವತಿ ಮೈತ್ರಿಗೆ ಮತ್ತಷ್ಟು ಬಲ ಬಂದಿದೆ. ಮತದಾರರ ಮೇಲೆ ಸಾಕಷ್ಟ ಪ್ರಭಾವ ಬೀರುವ ಹಲವು ಪ್ರಾದೇಶಿಕ ಪಕ್ಷಗಳನ್ನ ತೆಕ್ಕೆಗೆ ಸೇರಿಸಿಕೊಳ್ಳುವಲ್ಲಿ ಅವರಿಬ್ಬರೂ ನಿರತರಾಗಿದ್ದಾರೆ. ಇಂದು ನಿಷಾದ್ ಪಾರ್ಟಿ, ಜನವಾದಿ ಪಾರ್ಟಿ ಮತ್ತು ರಾಷ್ಟ್ರೀಯ ಸಮಂತಾ ದಳದ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಇದು ಉತ್ತರಪ್ರದೇಶದಲ್ಲಿ ಹೊಸ ಮನ್ವಂತರಕ್ಕೆ  ನಾಂದಿ ಹಾಡುವ ಸಾಧ್ಯತೆ ಇದೆ.

ಹಲವು ಸಣ್ಣ ಸಣ್ಣ ಪಕ್ಷಗಳಿಗೆ ಮೈತ್ರಿಯ ಬಾಗಿಲು ತೆರೆದಿರುವ ಅಖಿಲೇಶ್ – ಮಾಯಾವತಿ ಅವರಿಗೆ ಚುನಾವಣೆ ನಂತರ ದೆಹಲಿಯ ಹೆಬ್ಬಾಗಿಲು ತೆರೆಯುವ ಸಾಧ್ಯತೆ ಇದೆ. ಏಕೆಂದರೆ ಉತ್ತರಪ್ರದೇಶದಲ್ಲಿ ಜಾತಿ ಆಧಾರಿತ ಹಲವು ಪಕ್ಷಗಳಿದ್ದು, ಮತದಾರರ ಮೇಲೆ ಸಾಕಷ್ಟು ಪ್ರಭಾವ ಬೀರಲಿವೆ. ಹೀಗಾಗಿ, ಅವುಗಳೊಂದಿಗೆ ಮೈತ್ರಿ ಮಾಡಿಕೊಂಡರೆ ಅಖಿಲೇಶ್‌ – ಮಾಯಾವತಿಗೆ ಗರಿಷ್ಠ ಪ್ರಮಾಣದಲ್ಲಿ ಲಾಭ ಆಗಲಿದೆ. ಇದೀಗ ಎಸ್‌ಪಿ – ಬಿಎಸ್ಪಿ ಮೈತ್ರಿ ಜೊತೆ ಹೊಸದಾಗಿ ಸೇರಿಕೊಂಡಿರುವ ನಿಷಾದ್‌ ಪಾರ್ಟಿ, ಜನವಾದಿ ಪಾರ್ಟಿ ಮತ್ತು ರಾಷ್ಟ್ರೀಯ ಸಮಂತಾ ದಳವು ಪ್ರಧಾನಿ ಮೋದಿಯ ಸ್ವಕ್ಷೇತ್ರ ವಾರಾಣಸಿ ಇರುವ ಪೂರ್ವ ಉತ್ತರಪ್ರದೇಶ ಮತ್ತು ಸಿಎಂ ಯೋಗಿ ಆದಿತ್ಯನಾಥ್‌ ಅವರ ಗೋರಖ್‌ಪುರ ಕ್ಷೇತ್ರದಲ್ಲಿ ಸಾಕಷ್ಟು ಹಿಡಿತ ಹೊಂದಿವೆ. ಹೀಗಾಗಿ, ಇಲ್ಲಿ ಬಿಜೆಪಿಗೆ ಒಳಹೊಡೆತ ಕೊಡೋದು ಮಾಯಾ- ಅಖಿಲೇಶ್‌ ತಂತ್ರ.

ಅಷ್ಟೇ ಅಲ್ಲ, ಇದೇ ಉತ್ತರಪ್ರದೇಶದ ಪೂರ್ವಭಾಗದಲ್ಲಿ ಪ್ರಿಯಾಂಕಾ ವಾದ್ರಾ ಕಾಂಗ್ರೆಸ್‌ ಉಸ್ತುವಾರಿ ಹೊಂದಿದ್ದಾರೆ. ಕಳೆದ ವಾರ ದೋಣಿಯಾತ್ರೆ ನಡೆಸಿ ಗಂಗಾ ನದಿ ತಟದಲ್ಲಿ ಕಾಂಗ್ರೆಸ್ ಪರ ಅಲೆ ಎಬ್ಬಿಸಿದ್ದಾರೆ. ಹೀಗಾಗಿ, ಈ ಪ್ರದೇಶದಲ್ಲಿ ಭಾರೀ ಪ್ರಭಾವ ಹೊಂದಿರುವ ಈ ಮೂರೂ ಪಕ್ಷಗಳ ಜೊತೆ ಇದೀಗ ಮೈತ್ರಿ ಮಾಡಿಕೊಂಡಿರುವ ಅಖಿಲೇಖ್‌- ಮಾಯಾವತಿ ಹೊಸ ದಾಳ ಉರುಳಿಸಿದ್ದಾರೆ. ಮೊದಲಿನಿಂದಲೂ ದೋಣಿಗಾರರು ಮತ್ತು ಮೀನುಗಾರರ ಮೇಲೆ ನಿಷಾದ್‌ ಪಾರ್ಟಿ ಭಾರೀ ಹಿಡಿತ ಹೊಂದಿದೆ. ಹಾಗೆಯೇ, ಸಂಜಯ್‌ ಸಿಂಗ್‌ ಚೌವ್ಹಾಣ್‌ ನೇತೃತ್ವದ ಜನವಾದಿ ಪಕ್ಷವು ಹಿಂದುಳಿದ ವರ್ಗಕ್ಕೆ ಸೇರಿದ ಚೌವ್ಹಾಣ್‌ ಸಮುದಾಯದ ಮೇಲೆ ಪ್ರಭಾವ ಬೀರಲಿದೆ. ಕಳೆದ 2017ರ ವಿಧಾನಸಭಾ ಚುನಾವಣೆಯಲ್ಲಿ ಈ ಪಕ್ಷ ಮಾಯಾವತಿಗೆ ಬೆಂಬಲ ನೀಡಿತ್ತು. ಪೂರ್ವ ಉತ್ತರಪ್ರದೇಶದ ಮತ್ತೊಂದು ಹಿಂದುಳಿದ ವರ್ಗವಾದ ಕುಶ್ಹಾಸ್‌ ಸಮುದಾಯದ ಒಲವು ರಾಷ್ಟ್ರೀಯ ಸಮಂತಾ ಪಕ್ಷದ ಕಡೆ ಇದೆ. ಇದು ಮೈತ್ರಿಗೆ ಪ್ಲಸ್‌ ಪಾಯಿಂಟ್‌ ಆಗಲಿದೆ.

ಉತ್ತಪ್ರದೇಶದಲ್ಲಿ ಬಿಜೆಪಿಯಂತೆಯೇ ಜಾತಿ ಸಮೀಕರಣದ ಮೇಲೆ ಆಟವಾಡಲು ಮುಂದಾಗಿರುವ ಅಖಿಲೇಶ್‌ಗೆ ಸಣ್ಣ ಸಣ್ಣ ಪಕ್ಷಗಳ ಸೇರ್ಪಡೆಯೊಂದಿಗೆ ಮತ್ತಷ್ಟು ಬಲ ಬಂದಂತಾಗಿದೆ. ಇದರೊಂದಿಗೆ ನಿಷಾದ್‌, ದಲಿತ, ಮುಸ್ಲಿಂ, ಯಾದವ ಮತ್ತು ಯಾದವಯೇತರ ಸಮುದಾಯಗಳ ಮತಗಳು ಸುಲಭವಾಗಿ ಒಂದುಗೂಡಿ ಬಿಜೆಪಿ ವಿರುದ್ಧ ಯುದ್ಧ ಸುಲಭವಾಗಲಿದೆ.

ಇತ್ತ, ದೆಹಲಿಯ ಆಮ್‌ ಆದ್ಮಿ ಪಾರ್ಟಿಯಿಂದ ದೂರ ಸರಿದ್ದ ಕಾಂಗ್ರೆಸ್ ಇದೀಗ ಮನಸು ಬದಲಿಸುವ ಸಾಧ್ಯತೆ ಇದೆ. ಮಹಾಘಟಬಂಧನ್‌ ನಾಯಕರ ಒತ್ತಡ, ಸಲಹೆ ಹಾಗೂ ಮನವಿ ಮೀರಿ ಮೈತ್ರಿ ನಿರಾಕರಿಸಿತ್ತು ಕಾಂಗ್ರೆಸ್. ಆದ್ರೆ, ಈಗ ಕೇಜ್ರಿವಾಲ್‌ ನೇತೃತ್ವದ ಆ್ಯಪ್‌ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ. ಈ ಬಗ್ಗೆ ರಾಹುಲ್‌ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದಿದ್ದಾರೆ ಶೀಲಾ ದೀಕ್ಷಿತ್‌.

ಒಟ್ಟಿನಲ್ಲಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಪ್ರಬಲ ಏಟು ಕೊಡಬೇಕೆಂಬುದು ವಿರೋಧ ಪಕ್ಷಗಳ ಏಕೈಕ ಗುರಿ. ಇದರ ಸಾಧನೆಗಾಗಿ ನಿರೀಕ್ಷೆಗೂ ಮೀರಿದ ಸಾಧ್ಯತೆಗಳತ್ತ ಹೆಜ್ಜೆ ಹಾಕ್ತಿವೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.