‘ಜನರ ಟ್ಯಾಕ್ಸ್ ಹಣ ಯಾಕೆ ವ್ಯರ್ಥ ಮಾಡ್ತಾರೆ ಇವರು, ಹಣ ಯಾರಪ್ಪನದ್ದು ‘- ಪ್ರಕಾಶ್ ರೈ

ಬೆಂಗಳೂರು: ನನಗೆ ಬಿಜೆಪಿ ಇಷ್ಟವಿಲ್ಲ, ಬಿಜೆಪಿ ಆಡಳಿತ ವೈಖರಿ ನನಗೆ ಇಷ್ಟವಿಲ್ಲ, ನನಗೆ ಆಪ್, ಸಿಪಿಎಂ, ಸಿಪಿಐ, ದಲಿತ ಸಂಘರ್ಷ ಸಮಿತಿಗಳಿಂದ ಬೆಂಬಲ ಸಿಕ್ಕಿದೆ ಎಂದು ಪ್ರಕಾಶ್ ರೈ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್ ರೈ, ದೇವೇಗೌಡರನ್ನು ಭೇಟಿ ಮಾಡಿ ಬೆಂಬಲ ಕೇಳಿದ್ದೆ. ಮೈತ್ರಿ ಸರ್ಕಾರ ಇದೆ ನೋಡೋಣ ಅಂದಿದ್ದಾರೆ. ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಬೆಂಬಲ ಕೇಳಿದ್ದೇನೆ ಹತ್ತು ವರ್ಷದಿಂದ ಬೆಂಗಳೂರು ಕೇಂದ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿಲ್ಲ, ಅದಕ್ಕಾಗಿ ಬೆಂಬಲ ಕೊಡಿ ಅಂತ ಕೇಳಿದ್ದೇನೆ ಎಂದು ತಿಳಿಸಿದರು.

ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಬಗ್ಗೆ ಪ್ರಕಾಶ್ ರೈ ಪ್ರತಿಕ್ರಿಯೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಡಬಲ್ ಕ್ಷೇತ್ರಗಳಲ್ಲಿ ಸ್ಪರ್ಧೆಗೆ ನನ್ನ ವಿರೋಧವಿದೆ ಎಂದು  ನಟ ಪ್ರಕಾಶ್ ರೈ  ಹೇಳಿದರು.

ರಾಹುಲ್ ಆಗಲಿ, ಪ್ರಧಾನಿ ಮೋದಿ ಆಗಲಿ ಏಕೆ ಎರಡೆರಡು ಕಡೆ ನಿಲ್ಬೇಕು? ಜನರ ಟ್ಯಾಕ್ಸ್ ಹಣ ಯಾಕೆ ವ್ಯರ್ಥ ಮಾಡ್ತಾರೆ ಇವರು, ಹಣ ಯಾರಪ್ಪನದ್ದು? ನಿಮ್ಮ ಕ್ಷೇತ್ರದಲ್ಲಿ ನಿಂತು ಗೆಲ್ಲೋಕೆ ವಿಶ್ವಾಸ ಇಲ್ವಾ ನಿಮಗೆ? ರಾಹುಲ್ ಗಾಂಧಿ ಹೆಸರು ಬೆಂಗಳೂರು ಕೇಂದ್ರಕ್ಕೆ ಕೇಳಿ ಬರ್ತಿದೆ ಅವರು ಇಲ್ಲಿಯವರಾ? ಈ ಕ್ಷೇತ್ರ, ಇಲ್ಲಿನ‌ ಜನರ ಬಗ್ಗೆ ರಾಹುಲ್ ಗಾಂಧಿಗೆ ಗೊತ್ತಿದೆಯಾ? ಎಂದು ಪ್ರಕಾಶ್ ರೈ ಪ್ರಶ್ನಿಸಿದರು.