‘ಕುಮಾರಸ್ವಾಮಿ ಹಾಗೂ ಡಿ.ಕೆ ಶಿವಕುಮಾರ್ ನನ್ನ ಎರಡು ಕಣ್ಣುಗಳಿದ್ದಂತೆ’ – ಮಧು ಬಂಗಾರಪ್ಪ

ಶಿವಮೊಗ್ಗ: ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಮುಖಂಡ ಡಿ.ಕೆ ಶಿವಕುಮಾರ್ ಇಬ್ಬರು ನನ್ನ ಎರಡು ಕಣ್ಣುಗಳಿದ್ದಂತೆ ಎಂದು ಶಿವಮೊಗ್ಗ ಕ್ಷೇತ್ರ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದ್ದಾರೆ.

ಶಿವಮೊಗ್ಗದ ಲಗನಾ ಕಲ್ಯಾಣ ಮಂದಿರದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಮಧು ಬಂಗಾರಪ್ಪ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನನ್ನ ಅಣ್ಣನಿದ್ದಂತೆ, ಡಿ.ಕೆ ಶಿವಕುಮಾರ್ ಅವರು ನನ್ನ ತಂದೆ ಬಂಗಾರಪ್ಪ ಅವರ ಶಿಷ್ಯ, ಜೊತೆಗೆ ನನ್ನ ಹಿತೈಷಿ ಎಂದು ನುಡಿದರು.

ಅಲ್ಲದೇ ನಾನು ಏಪ್ರಿಲ್ 3 ರಂದು ನಾಮಪತ್ರ ಸಲ್ಲಿಸುವ ಸಾಧ್ಯತೆಯಿದ್ದು, ನಾಮಪತ್ರ ಸಲ್ಲಿಸುವ ದಿನ ಕುಮಾರಸ್ವಾಮಿ ಹಾಗೂ ಡಿ.ಕೆ ಶಿವಕುಮಾರ್ ಇಬ್ಬರೂ ಆಗಮಿಸಲಿದ್ದಾರೆ. ಹಿಂದಿನ ಉಪಚುನಾವಣೆ ಪ್ರಿಪ್ರೆಟರಿ ಪರೀಕ್ಷೆಯಾಗಿತ್ತು ಅಂದು ಯಾವ ತಪ್ಪುಗಳಾಗಿದ್ದವೋ ಅವುಗಳನ್ನು ಇಂದು ಸರಿಪಡಿಸಿಕೊಂಡಿದ್ದೇವೆ ಎಂದು ಮಾತನಾಡಿದರು.

ಸದ್ಯ ಗ್ರಾಮ ಪಂಚಾಯಿತಿ ಮಟ್ಟಕ್ಕೆ ಹೋಗಿ ಈ ಬಾರಿ ಪ್ರಚಾರ ಮಾಡುತ್ತೇವೆ ಈ ಬಾರಿ ಗೆಲುವು ಸಾಧಿಸಿಯೇ ತೀರುತ್ತೇವೆ ಎಂದು ಶಿವಮೊಗ್ಗ ಕ್ಷೇತ್ರ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.