ಹಾಸನದ ಕಣ್ಣೀರಕೋಡಿಗೆ ಈ ಬಾರಿ ಕರ್ನಾಟಕದ ಜನ ತಕ್ಕ ಉತ್ತರ ನೀಡಲಿದ್ದಾರೆ : ರವಿಕುಮಾರ್

ಒಟ್ಟಿನಲ್ಲಿ ಮಂಡ್ಯದ ವಂಶಪಾರಂಪರ್ಯ ಆಧಿಪತ್ಯ ಹಾಗೂ ಹಾಸನದ ಕಣ್ಣೀರಕೋಡಿಗೆ ಈ ಬಾರಿ ಚುನಾವಣೆಯಲ್ಲಿ ಕರ್ನಾಟಕದ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಕರ್ನಾಟಕದಲ್ಲಿ ಸ್ಪರ್ಧೆ ಮಾಡಲಿ, ಆಗ ಅವರಿಗೆ ಬಿಜೆಪಿ ಖಂಡಿತ ಸೋಲಿನ ರುಚಿ ತೋರಿಸುತ್ತದೆ. ಅವರು ಕರ್ನಾಟಕದಲ್ಲಿ ಕ್ಷೇತ್ರ ಆಯ್ಕೆ ಮಾಡಿಕೊಂಡ ಬಳಿಕ ಅವರ ವಿರುದ್ದ ಸ್ಪರ್ಧಿಸುವ ಅಭ್ಯರ್ಥಿ ಯಾರು ಎಂದು ಬಿಜೆಪಿ ಘೋಷಿಸಲಿದೆ ಎಂದರು.

ನಂತರ ಮಾತನಾಡಿದ ಅವರು ನಾಳೆ ಬಿಜೆಪಿ ಕೋರ್ ಕಮಿಟಿ ಸಭೆ ಕರೆಯಲಾಗಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಸಂಬಂಧ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಯಲಿದೆ. ಇನ್ನೂ ಮಂಡ್ಯದಲ್ಲಿ ಸುಮಲತಾ ಅವರನ್ನು ಬೆಂಬಲಿಸುವ ಬಗ್ಗೆಯೂ ಕೋರ್ ಕಮಿಟಿ ಸಭೆಯಲ್ಲಿ ಅಂತಿಮ ನಿರ್ಧಾರ ಹೊರಬೀಳಲಿದೆ ಎಂದು ಹೇಳಿದರು.

ಬಿಜೆಪಿ 22ಕ್ಲೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲೋದು ನಿಶ್ಚಿತ, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಗೆ ಜಾಗವಿಲ್ಲ ಕಾಂಗ್ರೆಸ್ ಗೆ ಕೇವಲ 2 ಸ್ಥಾನ ಕೊಡೋದಾಗಿ ಅಖಿಲೇಶ್ ಯಾದವ್ ಮತ್ತು ಮಾಯಾವತಿ ಹೇಳಿದ್ದಾರೆ. ಇದರಿಂದಲೇ ರಾಹುಲ್ ಗಾಂಧಿ ಉತ್ತರ ಪ್ರದೇಶದಿಂದ ಕರ್ನಾಟಕದ ಕಡೆಗೆ ವಲಸೆ ಬರುವಂತಾಗಿದೆ. ಇದು ಇಡೀ ಉತ್ತರ ಭಾರತದಲ್ಲಿ ಬಿಜೆಪಿ ಜಯಭೇರಿ ಭಾರಿಸುತ್ತದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ರವಿಕುಮಾರ್ ತಿಳಿಸಿದರು.