ಚುನಾವಣಾ ರಣತಂತ್ರ ರೂಪಿಸಲು ಸಿಎಂ ಭೇಟಿ ಮಾಡಿದ ಡಿಕೆಶಿ

ಬೆಂಗಳೂರು: ಮಂಡ್ಯ ಚುನಾವಣೆ ಬಗ್ಗೆ ಮಾತನಾಡಲು ಸಚಿವ ಡಿ.ಕೆ.ಶಿವಕುಮಾರ್, ಸಿಎಂ ಕುಮಾರಸ್ವಾಮಿಯವರನ್ನ ಖಾಸಗಿ ಹೊಟೇಲ್‌ನಲ್ಲಿ ಭೇಟಿ ಮಾಡಿದರು.

ಚುನಾವಣೆಯಿಂದ ಹಿಂದೆ ಸರಿಯುವಂತೆ ಸುಮಲತಾಗೆ ಡಿಕೆಶಿ ಮನವೊಲಿಸಿದ್ದು, ಆದ್ರೆ ಮನವೊಲಿಕೆ ಪ್ರಯತ್ನದ ನಂತರವೂ ಚುನಾವಣೆಯಿಂದ ಹಿಂದೆ ಸರಿಯಲು ಸುಮಲತಾ ಹಿಂದೇಟು ಹಾಕಿದ್ದು, ಇದೀಗ ಸುಮಲತಾರನ್ನು ಸೋಲಿಸಲು ರಣತಂತ್ರ ರೂಪಿಸಿದ್ದಾರೆ.

ಈಗಾಗಲೇ ಮಂಡ್ಯ ಸ್ಥಳೀಯ ಮಾಜಿ ಶಾಸಕರ ಜೊತೆಯೂ ಡಿಕೆಶಿ ಮಾತುಕತೆ ನಡೆಸಿದ್ದು, ಮೈತ್ರಿ ಅಭ್ಯರ್ಥಿಗೆ ಬೆಂಬಲ ಕೊಡುವಂತೆ ಸೂಚಿಸಿದ್ದಾರೆ. ಆದ್ರೆ ಮಂಡ್ಯದ ಕೆಲ ಕಾಂಗ್ರೆಸ್‌ ಮುಖಂಡರು ಮಾತ್ರ ಸುಮಲತಾ ಬೆಂಬಲಕ್ಕೆ ನಿಂತಿದ್ದಾರೆ.

ಹೀಗಾಗಿ ಇವರನ್ನೆಲ್ಲ ಯಾವ ರೀತಿ ಮನವೊಲಿಸಬೇಕೆಂಬುದರ ಬಗ್ಗೆ ಡಿ.ಕೆ.ಶಿವಕುಮಾರ್ ಸಿಎಂ ಕುಮಾರಸ್ವಾಮಿ ಜೊತೆ ಮಾತುಕತೆ ನಡೆಸಿದ್ದು, ಮಂಡ್ಯ ಸ್ಥಳೀಯ ಕಾಂಗ್ರೆಸ್ ಮುಖಂಡರ ಮನವೊಲಿಸಿ, ಅವರು ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಿಸುವ ಕುರಿತು ಮಹತ್ವದ ಮಾತುಕತೆ ನಡೆದಿದೆ.